Advertisement

ಪಿ.ಎಸ್.ಐ. ನೇಮಕಾತಿ ಅಕ್ರಮದಲ್ಲಿ ಕಾಂಗ್ರೆಸ್ ಪಕ್ಷದವರೇ ರೂವಾರಿಗಳು; ಸಿ.ಎಂ.ಬೊಮ್ಮಾಯಿ

09:02 AM Oct 20, 2022 | Team Udayavani |

ಯಾದಗಿರಿ: ಪಿ.ಎಸ್.ಐ. ನೇಮಕಾತಿ ಅಕ್ರಮದಲ್ಲಿ ಕಾಂಗ್ರೆಸ್ ಪಕ್ಷದವರೇ ರೂವಾರಿಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಅವರು ಯಾದಗಿರಿ ಜಿಲ್ಲಾ ಭಾಜಪ ಹುಣಸಗಿಯಲ್ಲಿ ಆಯೋಜಿಸಿದ್ದ ಜನಸಂಕಲ್ಪಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ರಾಹುಲ್ ಗಾಂಧಿಗೆ ದೇಶ ಹಾಗೂ ಕರ್ನಾಟಕದ ಬಗ್ಗೆ ಗೊತ್ತಿಲ್ಲ. ಕರ್ನಾಟಕದ ಜನರ ಭಾವನೆಗಳೂ ತಿಳಿದಿಲ್ಲ. ಅವರ ಕಾಲದ ಎಲ್ಲಾ ಅಕ್ರಮಗಳ ಬಗ್ಗೆ ದಾಖಲೆ ಸಮೇತ ಕಳುಹಿಸಲಾಗುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಲ್ಲ ಎಂದು ಹೇಳಿದ್ದಾರೆ. ಈ ಹುಡುಗ ಏನೂ ಆಗುವುದಿಲ್ಲ ಎಂದು ನಮಗೆ 15 ವಷರ್ಗಳಿಗೆ ಮುಂಚೆಯೇ ಗೊತ್ತಿತ್ತು. ಆದರೆ ಕಾಂಗ್ರೆಸ್ಸಿಗರ ಬೆನ್ನು ಹತ್ತಿದ್ದಾರೆ.  ರಾಹುಲ್ ಗಾಂಧಿ ಯಾವತ್ತೂ ಪ್ರಧಾನಿ ಆಗುವುದಿಲ್ಲ. ಕಾಂಗ್ರೆಸ್ ಕಾಲದ ಹಗರಣಗಳ ಬಗ್ಗೆ ಈಗಾಗಲೇ ತನಿಖೆಯಾಗುತ್ತಿದೆ. ರಾಹುಲ್ ಗಾಂಧಿಗೆ ಕೊಡುತ್ತೇನೆ ಎಂದರೆ ಅವರಿಗೆ ಭಯ ಶುರುವಾಗಿದೆ.  ಇಂಥವರನ್ನು ಕಟ್ಟಿಕೊಂಡು ನಡೆದರೆ ಇವರ ಮೇಲೆ ನಿಮ್ಮ ಪಕ್ಷದಲ್ಲಿ ಏನಾದರೂ ಕ್ರಮ ತೆಗೆದುಕೊಳ್ಳಲಾಗುವುದೇ ಎಂದು ಪ್ರಶ್ನೆ ಮಾಡುತ್ತಿದ್ದೇನೆ ಎಂದರು.

ಕರ್ನಾಟಕದ ಜನ ಸುಳ್ಳನ್ನು ನಂಬುವುದಿಲ್ಲ

ದಾಖಲೆ ಇಲ್ಲದೆ ಆರೋಪ ಮಾಡುವ ಕಾಂಗ್ರೆಸ್ಸಿಗೆ ದಾಖಲೆ ಕೊಟ್ಟು ಮಾತನಾಡುತ್ತಿದ್ದೇನೆ. ಕುಂಡಗಳಲ್ಲಿ ಇರುವ ಗಿಡಗಳಲ್ಲ. ಕರ್ನಾಟಕದ ಭೂಮಿಯಲ್ಲಿ ಹೆಮ್ಮರವಾಗಿ, ಆಳವಾಗಿ ಬೇರು ಬಿಟ್ಟರುವವರು ನಾವು. ಸುಳ್ಳು ಆಪಾದನೆ, ಮಾತುಗಳನ್ನು ಕರ್ನಾಟಕದ ಜನ ನಂಬುವುದಿಲ್ಲ. ಹೆಮ್ಮರಗಳನ್ನು ನೀವು ಏನೂ ಮಾಡಲು ಸಾಧ್ಯವಿಲ್ಲ ಸ್ವಚ್ಛ ದಕ್ಷ ಆಡಳಿತ, ಎಲ್ಲಾ ವರ್ಗಕ್ಕೂ ನ್ಯಾಯ, ಎಲ್ಲಾ ಪ್ರದೇಶಕ್ಕೂ ನ್ಯಾಯ ನೀಡುವ ಸಂಕಲ್ಪ ನಮ್ಮದು ಎಂದರು.

Advertisement

ಭಾಷಣದಲ್ಲಿ ಸಾಮಾಜಿಕ ನ್ಯಾಯ

ಕಾಂಗ್ರೆಸ್ ಸಾಮಾಜಿಕ ನ್ಯಾಯವನ್ನು ಭಾಷಣದಲ್ಲಿ ಹೇಳಿ 70 ವರ್ಷ ಆಡಳಿತ ಮಾಡಿದರು. ಮೀಸಲಾತಿಯ ಬೇಡಿಕೆ ಐದು ದಶಕಗಳದ್ದು. ದುರ್ಬಲ ವರ್ಗದವರು ಹೇಗಿದ್ದಾರೆ ಎಂದು ತಿರುಗಿ ನೋಡಲು ಅವರಿಗೆ ಪುರುಸೊತ್ತು ಸಿಗಲಿಲ್ಲ. ಅವರಿಗೆ ಮೀಸಲಾತಿ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿ ರಚನೆಯಾಯಿತು.  ಇಂದು ಅದನ್ನು ಅನುಷ್ಠಾನ ಮಾಡಬೇಕೆಂಬ ಇಚ್ಛಾಶಕ್ತಿಗೆ ಮೀಸಲಾತಿ ಹೆಚ್ಚಿಸುವ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ. ಎಂದರು.

ಮಾತಿನಲ್ಲಿ ಅಲ್ಲ, ಕೃತಿಯಲ್ಲಿ ತೋರಿಸಿದ್ದೇವೆ

ಕಾಂಗ್ರೆಸ್ ನವರಿದ್ದಾಗ ಕೆ.ಕೆ.ಆರ್.ಡಿ.ಬಿ ಅನುದಾನ ಜನರಿಗೆ ಮುಟ್ಟಲಿಲ್ಲ. ನರೇಗಾ ಯೋಜನೆಯಡಿ ನೂರಾರು ಕೋಟಿ ರೂ.ಗಳನ್ನು ಕಾಂಗ್ರೆಸ್ ಶಾಸಕರು ಹೊಡೆದಿದ್ದರು. ಕೇಂದ್ರದಲ್ಲಿ ಪ್ರಶಸ್ತಿ ಪಡೆಯಲು ಹೊರಟಿದ್ದರು. ಕೊನೆಗೆ ಸಿಬಿಐ ತನಿಖೆಯಾಯಿತು. ಇದು ಅವರ ಆಡಳಿತದ ಶೈಲಿ. ಬಡವರ, ಪರಿಶಿಷ್ಟರ ವಿದ್ಯಾಲಯಗಳಲ್ಲಿ ಮಕ್ಕಳಿಗೆ ನೀಡುವ ದಿಂಬು, ಹಾಸಿಗೆಗಳಲ್ಲಿ ಹಣ ಹೊಡೆದಿದ್ದು, ಅವರಿಗೆ ನಾಚಿಕೆಯಾಗಬೇಕು. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ.  ನೆಲ, ನೀರು, ನೌಕರಿಯಲ್ಲಿ ದುಡ್ಡು ಹೊಡೆದಿದ್ದಾರೆ, ಹಿಂದುಳಿದವರಿಗೂ ನ್ಯಾಯ ನೀಡಬೇಕು. ಕನಕದಾಸರ ಊರಿನಿಂದ ಬಂದಿರುವ ನಾನು ಬಾಡಾ ಕ್ಷೇತ್ರವನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ. ಕನಕದಾಸರ ನೆನಪಿಡುವ ರೀತಿಯಲ್ಲಿ ಅವರ ದರ್ಶಗಳನ್ನು ಜನರಿಗೆ ತಲುಪಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಯಡಿಯೂರಪ್ಪನವರು ಕಾಗಿನೆಲೆಯನ್ನು ಅಭಿವೃದ್ಧಿಗೊಳಿಸಿದ್ದಾರೆ. ಎಸ್.ಟಿ ಸಮುದಾಯಕ್ಕೆ ನಿಗಮ ಮಾಡಿದ್ದು, ಭಾಜಪ. ವಾಲ್ಮೀಕ ಜಯಂತಿ, ಎಸ್.ಟಿ ಸಮುದಾಯಕ್ಕೆ ಪ್ರತ್ಯೇಕ ಇಲಾಖೆ ಕಲ್ಪಿಸಿರುವುದು ಬಾಜಪ.  ಮಾತಲ್ಲಿ ಅಲ್ಲ. ಕೃತಿಯಲ್ಲಿ ತೋರಿಸಿದ್ದೇವೆ. ಸುರಪುರದ ನಾಯಕರ ಇತಿಹಾಸ ದೊಡ್ಡದಿದೆ. ಔರಂಗಜೇಬನ್ನು ಹಿಮ್ಮೆಟ್ಟಿಸಿದಂತೆಯೇ ಈ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಈ ಬಾರಿ ಕರ್ನಾಟಕದಲ್ಲಿ ಕಮಲವನ್ನು ಅರಳಿಸಬೇಕು ಎಂದರು.

ಕಾಂಗ್ರೆಸ್ ನಾಯಕರು ಭಾಗದ ಜನರ ಋಣದಲ್ಲಿದ್ದಾರೆ

ಇಷ್ಟು ವರ್ಷ ಕಾಂಗ್ರೆಸ್ ಅಭಿವೃದ್ಧಿ ಮಾಡದೇ ಇರಲು ಇಚ್ಛಾಶಕ್ತಿಯ ಕೊರತೆ ಕಾರಣ. ಜನರನ್ನು ಕತ್ತಲಲ್ಲಿ ಇಡುವ ಪ್ರಯತ್ನವಾಗಿದೆ. ಕಾಂಗ್ರೆಸ್ ನಾಯಕರು ಈ ಭಾಗದ ಜನರ ಋಣದಲ್ಲಿದ್ದಾರೆ.  ನಿಮ್ಮ ಋಣವನ್ನು ತೀರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಸಾಮಾಜಿಕ ಅಭಿವೃದ್ಧಿಯ ಜೊತೆಗೆ, ಸಾಮಾಜಿಕ ನ್ಯಾಯವನ್ನು ನೀಡುತ್ತಿದ್ದೇವೆ ಎಂದರು.

ಕಲ್ಯಾಣ ನಾಡನ್ನಾಗಿ ಮಾಡುವ ಸಂಕಲ್ಪ

ಈಗ ಕಾಲ ಬದಲಾಗಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ. ಅದು ಬಿರುಗಾಳಿಯಾಗಿ ಅದರ ಪರಿಣಾಮವನ್ನು ನೀವು ನೋಡುತ್ತಿದ್ದೀರಿ. ಇನ್ನು ಮುಂದೆ ಈ ಭಾಗದ ಜನರಿಗೆ ವಿಶ್ವಾಸದ್ರೋಹ ಮಾಡುವುದು ಕಾಂಗ್ರೆಸ್ಸಿಗೆ ಸಾಧ್ಯ್ವವಿಲ್ಲ. ನಮ್ಮ ಸರ್ಕಾರ ಭಾಗಕ್ಕೆ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡುವುದಷ್ಟೇ ಅಲ್ಲ, ಇದನ್ನು ಕಲ್ಯಾಣ ನಾಡನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದೇವೆ. ಅದಕ್ಕಾಗಿ ಮುಂದಿನ ಬಜೆಟ್ ನಲ್ಲಿ 5 ಸಾವಿರ ಕೋಟಿ ರೂ.ಗಳನ್ನು  ಮೀಸಲಿಡಲಾಗುತ್ತಿದೆ.  ಪ್ರಸ್ತುತ ಒಂದು ಕ್ಷೇತ್ರಕ್ಕೆ 50-100 ಕೋಟಿ ಬಂದರೆ, 5 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟರೆ 100-200 ಕೋಟಿ ರೂ.ಗಳ ಅನುದಾನ  ರಲಿದೆ. ಇದು ನಿಮ್ಮ ಹಕ್ಕು, ಉಪಕಾರವಲ್ಲ. ಇದು ನಮ್ಮ ಬದ್ಧತೆ ಎಂದರು.

ಭ್ರಮನಿರಸನ

371 ಜೆ ಸುಲಭವಾಗಿ ಬಂದಿಲ್ಲ. ಸುಮಾರು ಮೂರು ದಶಕಗಳ ಹೋರಾಟದಿಂದ ದೊರಕಿದೆ. ಆಂಧ್ರದಿಂದ ತೆಲಂಗಾಣ ರಾಜ್ಯವಾದಾಗ ಕೇಂದ್ರ ಸರ್ಕಾರ ಅನಿವಾರ್ಯವಾಗಿ 371 ಜೆ ನೀಡಬೇಕಾಯಿತು.  371 ಜೆ ಕೊಡದೇ ಹೋಗಿದ್ದರೆ ಇಲ್ಲಿ ಕಾಂಗ್ರೆಸ್ ನವರು ಓಡಾಡಲು ಕಷ್ಟವಾಗುತ್ತಿತ್ತು. ಅದಕ್ಕೆ ಕಾಂಗ್ರೆಸ್ ನವರು ಈಗ ಎದೆ ಮುಟ್ಟಿ ಹೇಳುತ್ತಾರೆ ನಾವು ತಂದಿದ್ದು ಎಂದು. ಆದರೆ ಇದು ಹೋರಾಟದ ಫಲ. 371 ಜೆ ಬಂದ ನಂತರ ಅನುದಾನ ನೀಡದಿದ್ದರೆ ಅಭಿವೃದ್ಧಿಯಾಗಲು ಹೇಗೆ ಸಾಧ್ಯ. ಜನರಲ್ಲಿ ಈ ಬಗ್ಗೆ ಭ್ರಮನಿರಸನವಾಗಿತ್ತು ಎಂದರು.

ಜೇವರ್ಗಿಯಲ್ಲಿ ಮಲ್ಲಾಬಾದ್ ಏತ ನೀರಾವರಿ ಯಾರು ಮಾಡಿದ್ದು, ಹೈದರಾಬಾದ್ ಕರ್ನಾಟಕ ಭಾಗದ ಜನರ ಮತದಿಮದ ಬಹಳ ದೊಡ್ಡ ನಾಯಕರಾಗಿ, ರಾಜ್ಯ ಮತ್ತು ಕೇಂದ್ರದಲ್ಲಿ ಮಂತ್ರಿಗಳಾಗಿ ಕಲ್ಯಾಣ ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ. ಸುಮಾರು ನಾಲ್ಕು ಐದು ದಶಕಗಳ ಕಾಲ ಅವರನ್ನು ಈ ಭಾಗದ ಜನ ಹೆಗಲ ಮೇಲಿಟ್ಟುಕೊಂಡು ಮೆರೆಸಿದ್ದೀರಿ. ವಿಶ್ವಾಸ, ನಂಬಿಕೆಯನ್ನಿಟ್ಟಿರಿ, ಆದರೆ ಈ ಭಾಗದ ಜನ ಹಿಂದುಳಿದೇ ಇದ್ದಾರೆ 371 ಜೆ, ಬೇಡುವಂಥ ಪರಿಸ್ಥಿತಿ ಬಂತು. ನಾಲ್ಕು ದಶಕಗಳ ಕಾಲ ಅಭಿವೃದ್ಧಿಯನ್ನೇ ಕಾಣಲಿಲ್ಲ. ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ನಂಜುಂಡಪ್ಪ ವರದಿ ಸಲ್ಲಿಕೆಯಾಯಿತು. 2007 ರಲ್ಲಿ ಯಡಿಯೂರಪ್ಪ ನವರು ಮುಖ್ಯಮಂತ್ರಿಗಳಾದಾಗ ಅದಕ್ಕೆ ಅನುದಾನ ನೀಡಿದರು. 5 ವರ್ಷ ಕಾಂಗ್ರೆಸ್ ಆಡಳಿತದಲ್ಲಿ ನಂಜುಂಡಪ್ಪ ವರದಿ ಧೂಳು ತಿನ್ನುತ್ತಿತ್ತು.  ಅದನ್ನು ಕಸದ ಬುಟ್ಟಿಗೆ ಹಾಕಿದ್ದರು. 371 ಜೇ ಪರಿಚ್ಚೇಧ ಬಂದ ನಂತರ 5 ವರ್ಷ ಸರಿಯಾದ ಅನುದಾನ ಬರಲಿಲ್ಲ, ಬಂದ ಅನುದಾನ ಖರ್ಚು ಆಗಲಿಲ್ಲ. ಈ ಪ್ರದೇಶ ಹಿಂದುಳಿಯಿತು.  371 ಜೆ ಕೇವಲ ಕಾಗದದಲ್ಲಿ ಉಳಿಯಿತು.  ಇಲ್ಲಿಯ ಜನರು ಮುಗ್ಧರಿದ್ದಾರೆ, ಮತಬ್ಯಾಂಕುಗಳು, ಕಣ್ಣು ಮುಚ್ಚಿಕೊಂಡು ಮತ ಹಾಕುತ್ತಾರೆ ಎಂದು ಗ್ಯಾರಂಟಿ ಇತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next