ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ದೇಶ ಕಟ್ಟುವ ಕೆಲಸ ಮಾಡಿದೆಯೇ ವಿನಃ ಇವರಂತೆ ಧರ್ಮ, ಜಾತಿಗಳ ನಡುವೆ ವೈಷಮ್ಯ, ದ್ವೇಷ ಮೂಡಿಸುವ ಕೆಲಸ ಮಾಡಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಸದ ಡಿ.ಕೆ.ಸುರೇಶ‌್ ಹೇಳಿಕೆಯನ್ನು ಬಿಜೆಪಿಗರು ತಿರುಚಿದ್ದಾರೆ. ಕೇಂದ್ರದಿಂದ ಈ ರೀತಿ ಅನ್ಯಾಯ ಮುಂದುವರೆದರೆ ಜನರು ಪ್ರತ್ಯೇಕ ದೇಶಕ್ಕಾಗಿ ಬೇಡಿಕೆ ಇರಿಸಬಹುದು. ಹಾಗಾಗದಂತೆ ಎಚ್ಚರಿಕೆ ವಹಿಸಬೇಕು ಎನ್ನುವ ಕಾಳಜಿಯೊಂದಿಗೆ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ, ಬರ ಪರಿಹಾರ ಹಾಗೂ ತರಿಗೆ ಹಂಚಿಕೆ ಮಾಡುತ್ತಿಲ್ಲ. ಬರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಬರ ಪರಿಹಾರ ನೀಡುತ್ತಿಲ್ಲ. ನಮ್ಮ ಪಾಲಿನ ಹಣ ನೀಡುವಂತೆ ಕೇಳುತ್ತಿದ್ದೇವೆಯೆ ಹೊರತು ಭಿಕ್ಷೆ ಬೇಡುತ್ತಿಲ್ಲ. ಬಿಜೆಪಿ ನಾಯಕರಿಗೆ ದೇಶ, ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಯಾವುದಾದರೂ ಒಂದು ಹೇಳಿಕೆ ತಿರುಚಿ ಗಲಾಟೆ, ಗದ್ದಲ ಎಬ್ಬಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಬೇಕಾಗಿದೆ. ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ. ಇವರಂತೆ ಚುನಾವಣೆ ಸಂದಭರ್ದಲ್ಲಿ ಧರ್ಮ, ಜಾತಿಗಳ ನಡುವೆ ಕೋಮು ಭಾವನೆ ಕೆರಳಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪಕ್ಷವಲ್ಲ ಎಂದು ತಿರುಗೇಟು ನೀಡಿದರು.
ರಾಜ್ಯದಲ್ಲಿ ಐದು ಗ್ಯಾರಂಟಿಗಳು ಅನುಷ್ಠಾನಗೊಂಡಿರುವ ಕಾರಣಕ್ಕೆ ಇಂತಹ ಬರದಲ್ಲೂ ಜನರ ಜೀವನ ಮಾಡುತ್ತಿದ್ದಾರೆ. ಈ ಯೋಜನೆಗಳು ಸಮರ್ಪಕವಾಗಿ ನೇರವಾಗಿ ಜನರಿಗೆ ತಲುಪುತ್ತಿವೆ. ಬಿಜೆಪಿಗರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಆರೋಪ ಮಾಡುತ್ತಿದ್ದಾರೆ. ಜನರು ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಮಾಡಿದರೆ ಮಾತ್ರ ಸತ್ಯ. ಬಲಿಷ್ಠ ಸರಕಾರವನ್ನು ಬೀಳಿಸಬೇಕು ಎನ್ನುವ ಕಾರಣಕ್ಕಾಗಿಯೇ ಸುಳ್ಳುಗಳನ್ನು ವಿಜೃಂಭಿಸುತ್ತಿದ್ದಾರೆ. ರಾಜ್ಯದಲ್ಲಿ ಅವರಿಗೆ ಎಂದೂ ಬಹುಮತ ನೀಡಿಲ್ಲ. ಸರಕಾರಗಳನ್ನು ಬೀಳಿಸಿ, ಶಾಸಕರನ್ನು ಖರೀದಿಸಿ ಆಡಳಿತ ಮಾಡಿದವರು ಎಂದು ವಾಗ್ದಾಳಿ ನಡೆಸಿದರು.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ಹೊಂದಿದ್ದಾರೆ. ಇನ್ನೊಮ್ಮೆ ಆಯ್ಕೆಯಾದರೆ ಇನ್ನಷ್ಟು ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಸರಿಯಾಗಿದೆ. ಪರ, ವಿರೋಧ ಇದ್ದರೆ ಮಾತ್ರ ಅದು ಪ್ರಜಾಪ್ರಭುತ್ವ. ಈ ವ್ಯವಸ್ಥೆಯನ್ನು ಹತ್ತಿಕ್ಕಿ ಸರ್ವಾಧಿಕಾರಿ ಧೋರಣೆಗೆ ಮುಂದಾಗಿದ್ದಾರೆ ಎಂದರು.