ಕೆ.ಆರ್.ನಗರ: ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ರವಿಶಂಕರ್ ಅತ್ಯಧಿಕ ಮತಗಳ ಆಂತರದಿಂದ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾದ ನಂತರ ಅವರ ಅಭಿಮಾನಿಗಳು, ಮುಖಂಡರು ಮತ್ತು ಕಾರ್ಯಕರ್ತರು ತಾವು ಹೊತ್ತಿದ್ದ ವಿವಿಧ ರೀತಿಯ ಹರಕೆಗಳನ್ನು ತೀರಿಸಲು ಪ್ರಾರಂಭಿಸಿದ್ದಾರೆ.
ಕ್ಷೇತ್ರದಲ್ಲಿ ತಮ್ಮ ರಾಜಕೀಯ ನಾಯಕರ ಗೆಲುವಿಗಾಗಿ ಅಭಿಮಾನಿಗಳು ದೇವಾನು ದೇವತೆಗಳಿಗೆ ವಿವಿಧ ರೀತಿಯ ಹರಕೆ ಮಾಡಿಕೊಂಡಿದ್ದು, ಚುನಾವಣೆಗೂ ಮೊದಲು ಡಿ.ರವಿಶಂಕರ್ ಮತ್ತು ಸಾ.ರಾ.ಮಹೇಶ್ ಬೆಂಬಲಿಗರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಾಗಿ ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸಮಯದಲ್ಲಿ ತಮ್ಮ ನಾಯಕರ ಗೆಲುವಿಗಾಗಿ ಅವರ ಭಾವಚಿತ್ರಗಳನ್ನು ಹಿಡಿದು ಯಾತ್ರೆಯಲ್ಲಿ ಪಾಲ್ಗೊಂಡು ದೇವರಲ್ಲಿ ಪ್ರಾರ್ಥಿಸಿದ್ದರು.
ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಮಂಜುಳಾ ಶಾಸಕ ಡಿ.ರವಿಶಂಕರ್ ಪರವಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿ ಅರಕಲಗೂಡು ತಾಲೂಕಿನ ಲಕ್ಕೂರು ಮೂಡಲಕೊಪ್ಪಲು ಗ್ರಾಮದ ಶ್ರೀಮದನಂಟಿ ಅಮ್ಮ ದೇವರಿಗೆ ಪ್ರಸಾದ ತಯಾರಿಸಿ ಎಡೆ ಇಟ್ಟು ತಾವು ಮಾಡಿಕೊಂಡ ಹರಕೆ ತೀರಿಸಿದ್ದಾರೆ.
ಅದೇ ರೀತಿ ಪಟ್ಟಣದ 23ನೇ ವಾರ್ಡಿನ ವ್ಯಾಪ್ತಿಗೆ ಸೇರಿದ ಮಧುವನಹಳ್ಳಿ ಬಡಾವಣೆಯ ಶಾಸಕ ಡಿ.ರವಿಶಂಕರ್ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತೆಯರು ದೇವಮ್ಮ ರವರ ನೇತೃತ್ವದಲ್ಲಿ ನಾಡಿನ ಅಧಿದೇವತೆ ಮೈಸೂರಿನ ಚಾಮುಂಡೇಶ್ವರಿ ತಾಯಿ ದೇವಾಲಯದಲ್ಲಿ ಡಿ.ರವಿಶಂಕರ್‌ರವರ ಭಾವಚಿತ್ರವನ್ನು ಹೊಂದಿರುವ ಕರಪತ್ರಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿ ತಮ್ಮ ನಾಯಕನ ಗೆಲುವಿನ ಹರಿಕೆ ತೀರಿಸಿದ್ದಾರೆ.
ಜತೆಗೆ ಇದೇ ಬಡಾವಣೆಯ ಕೆಲವು ಯುವಕರು ತಾಲೂಕಿನ ಹೆಬ್ಟಾಳು ಹೋಬಳಿ ವ್ಯಾಪ್ತಿಯ ಅದೇ ಗ್ರಾಮ ಪಂಚಾಯ್ತಿಗೆ ಸೇರಿದ ಇತಿಹಾಸ ಪ್ರಸಿದ್ಧವಾದ ಸತ್ಯ ನಿಷ್ಠೆಗೆ ಹೆಸರುವಾಸಿಯಾದ ಕಪ್ಪಡಿ ಕ್ಷೇತ್ರದಲ್ಲಿ ತಮ್ಮ ನಾಯಕ ಶಾಸಕ ಡಿ.ರವಿಶಂಕರ್ ಗೆಲುವಿಗಾಗಿ ಮಾಡಿಕೊಂಡ ಹರಕೆಗಾಗಿ ಕೇಶಮುಂಡನ ಮಾಡಿಸಿಕೊಂಡು ಮುಡಿ ಸೇವೆ ಮಾಡಿಸಿ ತಾವು ಮಾಡಿಕೊಂಡಿದ್ದ ಹರಕೆ ತೀರಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ.