Advertisement

ರಾಜ್ಯಸಭಾ ಸದಸ್ಯತ್ವ 2 ಅವಧಿಗೆ ಸೀಮಿತ? ಪದಾಧಿಕಾರಿಗಳ ಅವಧಿ 5 ವರ್ಷಕ್ಕೆ ನಿಗದಿ

02:12 AM May 15, 2022 | Team Udayavani |

ಉದಯಪುರ: ಪಕ್ಷದಲ್ಲಿ ಹಲವು ಬದಲಾವಣೆಗಳಿಗೆ ನಾಂದಿ ಹಾಡಲು ಸಜ್ಜಾಗಿರುವ ಕಾಂಗ್ರೆಸ್‌ ಈಗ ರಾಜ್ಯಸಭೆ ಸದಸ್ಯರ ಅವಧಿಗೆ ಮಿತಿ ಹೇರಲು ಚಿಂತನೆ ನಡೆಸಿದೆ.

Advertisement

ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ “ನವ ಸಂಕಲ್ಪ ಚಿಂತನ ಶಿಬಿರ’ದ 2ನೇ ದಿನವಾದ ಶನಿವಾರ ಹಲವು ವಿಚಾರಗಳ ಕುರಿತು ಸಮಾಲೋಚನೆ ನಡೆದಿದ್ದು, ಪಕ್ಷದ ಒಬ್ಬ ನಾಯಕನಿಗೆ ಎರಡು ಅವಧಿಗೆ ಮಾತ್ರ ರಾಜ್ಯಸಭೆ ಸದಸ್ಯತ್ವಕ್ಕೆ ಅವಕಾಶ ನೀಡುವ ಕುರಿತೂ ಚರ್ಚಿಸಲಾಗಿದೆ. 2 ಅವಧಿ ಪೂರ್ಣಗೊಳಿಸಿದ ಬಳಿಕ ಅವರು ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಅವರಿಗೆ ರಾಜ್ಯಸಭೆಯಲ್ಲಿ ಮೂರನೇ ಅವಧಿಗೆ ಸದಸ್ಯ ಸ್ಥಾನ ನೀಡಬಾರದು ಎಂದು ಪ್ರಸ್ತಾಪಿಸಲಾಗಿದೆ.

ರಾಜ್ಯಸಭೆ ಮಾತ್ರವಲ್ಲದೇ, ಬ್ಲಾಕ್‌ ಹಾಗೂ ಜಿಲ್ಲಾಮಟ್ಟದಿಂದ ಎಐಸಿಸಿವರೆಗೂ ಎಲ್ಲ ಪದಾಧಿಕಾರಿಗಳ ಅಧಿಕಾರಾವಧಿಯನ್ನೂ 5 ವರ್ಷಗಳಿಗೆ ನಿಗದಿಪಡಿಸುವ ಕುರಿತೂ ಚರ್ಚೆ ನಡೆದಿದೆ. ಅವಧಿ ಪೂರ್ಣಗೊಂಡ ಕೂಡಲೇ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಇತರರಿಗೆ ಅವಕಾಶ ಕಲ್ಪಿಸಬೇಕು. ರಾಜೀನಾಮೆ ನೀಡಿದ ನಾಯಕರಿಗೆ ಪಕ್ಷದಲ್ಲಿ ಬೇರೆ ಸ್ಥಾನಮಾನ ಹಾಗೂ ಹೊಣೆಯನ್ನು ವಹಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಡಬ್ಲ್ಯುಸಿ ಒಪ್ಪಿಗೆ ಪಡೆದು ಆಯಾ ಪ್ರದೇಶ ಕಾಂಗ್ರೆಸ್‌ ಕಮಿಟಿಗಳು ತಮ್ಮದೇ ಆದ ಪ್ರತ್ಯೇಕ ಸಂವಿಧಾನವನ್ನು ರಚಿಸಲು ಅವಕಾಶ ಕಲ್ಪಿಸುವ ಕುರಿತೂ ಶಿಬಿರದಲ್ಲಿ ಚರ್ಚೆ ನಡೆದಿದೆ.

ಹಿರಿಯ ನಾಯಕರ ಭೇಟಿ: ಶನಿವಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಿರಿಯ ನಾಯಕರನ್ನು ಭೇಟಿಯಾಗಿ ಪಕ್ಷದ ಸಾಮೂಹಿಕ ಪ್ರತಿಭಟನೆ ಕಾರ್ಯಕ್ರಮದ ಕುರಿತು ಮಾತುಕತೆ ನಡೆಸಿ ದ್ದಾರೆ. ಹಣದುಬ್ಬರ, ಬೆಲೆಯೇರಿಕೆ, ಆರ್ಥಿಕ ಹಿಂಜ ರಿತ, ನಿರುದ್ಯೋಗ, ಕೃಷಿ ಬಿಕ್ಕಟ್ಟು ಸೇರಿದಂತೆ ವಿವಿಧ ವಿಚಾರಗಳನ್ನೆತ್ತಿಕೊಂಡು ಕಳೆದ ವರ್ಷ ನವೆಂಬರ್‌ನಲ್ಲಿ ಕಾಂಗ್ರೆಸ್‌ ಜನ ಜಾಗರಣ್‌ ಅಭಿಯಾನವನ್ನು ಕಾಂಗ್ರೆಸ್‌ ಕೈಗೊಂಡಿತ್ತು. ಈ ವರ್ಷ ಅದರ 2ನೇ ಭಾಗವನ್ನು ಅಂದರೆ ಜನ ಜಾಗರಣ್‌ ಅಭಿಯಾನ್‌ 2.0 ಕೈಗೊಳ್ಳಲು ನಿರ್ಧರಿಸಲಾಗಿದೆ.

Advertisement

ಪಕ್ಷದ ಚುಕ್ಕಾಣಿ ರಾಹುಲ್‌ಗೆ ವಹಿಸಿ: 2013ರಲ್ಲಾ ದಂತೆ ಈ ಬಾರಿಯೂ ರಾಹುಲ್‌ ಗಾಂಧಿಯವರೇ ಪಕ್ಷದ ನಾಯಕತ್ವ ವಹಿಸಿಕೊಳ್ಳಬೇಕೆಂಬ ಒತ್ತಾಯ ಮೂಡಿಬಂದಿದೆ. ರಾಜಸ್ಥಾನದ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಅವರು ಈ ಕುರಿತಂತೆ ಪ್ರಸ್ತಾವ ಮಾಡಿದ್ದಾರೆ. ಕಾಂಗ್ರೆಸ್‌ನ ಸಂಘಟನೆಗಳಲ್ಲಿ ಯುವಕ ರಿಗೆ ಆದ್ಯತೆ ನೀಡುವ ಕುರಿತು ಚಿಂತನ ಶಿಬಿರದಲ್ಲಿ ಚರ್ಚೆಯಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿರುವ ಅವರು, “ಪಕ್ಷಕ್ಕೆ ಹೊಸ ಮತ್ತು ತಾಜಾ ಶಕ್ತಿ’ಯ ಆವಶ್ಯಕತೆಯಿದೆ ಎಂದಿದ್ದಾರೆ. ಪಕ್ಷದಲ್ಲಿ 50 ವರ್ಷದೊಳಗಿನವರು ಅರ್ಧಕ್ಕಿಂತಲೂ ಹೆಚ್ಚಿದ್ದಾರೆ. ಮುಖ್ಯಮಂತ್ರಿಗಳ ಆಯ್ಕೆಯ ವೇಳೆಯೂ ಇದು ಪ್ರತಿಬಿಂಬಿಸಬೇಕು’ ಎಂದು ಪೈಲಟ್‌ ಹೇಳಿದ್ದಾರೆ. ಜತೆಗೆ, ರಾಹುಲ್‌ ಗಾಂಧಿ ಅವರು ಮತ್ತೂಮ್ಮೆ ಪಕ್ಷದ ಚುಕ್ಕಾಣಿಯನ್ನು ಹಿಡಿಯಲಿ ಎಂದೂ ಆಗ್ರಹಿಸಿದ್ದಾರೆ.

ಪ್ರಿಯಾಂಕಾ ವಾದ್ರಾ ಅಧ್ಯಕ್ಷೆ?: ಒಂದು ವೇಳೆ, ರಾಹುಲ್‌ ಗಾಂಧಿ ಅವರೇನಾದರೂ ಪಕ್ಷದ ಚುಕ್ಕಾಣಿ ಹಿಡಿಯಲು ನಿರಾಕರಿಸಿದರೆ, ಪ್ರಿಯಾಂಕಾ ಗಾಂಧಿಯ ವರಿಗೆ ಪಕ್ಷದ ಅಧ್ಯಕ್ಷತೆ ವಹಿಸಬೇಕೆಂದು ಎಂದು ಪಕ್ಷದ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇದಕ್ಕೆ ಸೋನಿಯಾರಾಗಲೀ, ಪ್ರಿಯಾಂಕಾರಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಎಸ್ಸಿ, ಎಸ್ಟಿ, ಒಬಿಸಿ, ಮಹಿಳೆಯರಿಗೆ ಮೀಸಲಾತಿ
ಹೋಬಳಿ ಮಟ್ಟದಿಂದ ರಾಷ್ಟ್ರಮಟ್ಟದವರೆಗಿನ ಪಕ್ಷದ ಎಲ್ಲ ಸಂಘಟನೆಗಳಲ್ಲಿ ಪರಿಶಿಷ್ಟ ವರ್ಗ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್ಟಿ) ಹಾಗೂ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ. 50ರಷ್ಟು ಮೀಸಲಾತಿಯನ್ನು ಕಲ್ಪಿಸುವ ಪ್ರಸ್ತಾವನೆಗಳನ್ನು ಕಾಂಗ್ರೆಸ್‌ ಚಿಂತನ ಶಿಬಿರದಲ್ಲಿ ಅಂಗೀಕರಿಸಲಾಗಿದೆ.

ಕಾಂಗ್ರೆಸ್‌ ಅಧ್ಯಕ್ಷರಿಗೆ ನೆರವಾಗುವ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ಸಲಹಾ ಸಮಿತಿಯೊಂದನ್ನು ನೇಮಿಸುವುದು, ಪ್ರತೀ ಆರು ತಿಂಗಳಿಗೊಮ್ಮೆ ಕಾಂಗ್ರೆಸ್‌ ಕಾರ್ಯಕಾರಿ ಮಂಡಳಿಯ ಸಭೆ ಕರೆ ಯಲು ತೀರ್ಮಾನಿಸಲಾಗಿದೆ.
ಇದಲ್ಲದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಾತಿ ಆಧಾರಿತ ಜನಗಣತಿ ನಡೆಸಲಾಗುತ್ತದೆ. ಖಾಸಗಿ ಕಂಪೆನಿಗಳಲ್ಲಿಯೂ ಎಸ್ಸಿ, ಎಸ್ಟಿ ಹಾಗೂ ಒಬಿಸಿಗಳಿಗೆ ಮೀಸಲಾತಿ ಕಲ್ಪಿಸಲಾಗುತ್ತದೆ. ದೀರ್ಘ‌ಕಾಲದಿಂದ ನನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಕಾನೂನಾಗಿ ಜಾರಿಗೆ ತರುವುದು, ಅದರಲ್ಲೂ ವಿಶೇಷವಾಗಿ ಎಸ್ಸಿ, ಎಸ್ಟಿ ಮಹಿಳೆಯರಿಗೆ ಮೀಸಲಾತಿಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡುವ ಪ್ರಸ್ತಾವನೆಗೂ ಕಾಂಗ್ರೆಸ್‌ ಒಪ್ಪಿದೆ.

ನೀತಿಗಳನ್ನು ಅಗತ್ಯಕ್ಕೆ ತಕ್ಕಂತೆ ಬದಲಿಸಿ
“”ಭಾರತವು ಜಾಗತೀಕರಣಕ್ಕೆ ತೆರೆದುಕೊಂಡು 30 ವರ್ಷಗಳೇ ಕಳೆದಿವೆ. ಪ್ರಸ್ತುತ ಜಾಗತಿಕ ಮತ್ತು ದೇಶೀಯ ಮಟ್ಟದಲ್ಲಿ ಆಗಿರುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು 30 ವರ್ಷಗಳ ಹಿಂದೆ ಜಾರಿಗೊಳಿಸಲಾಗಿರುವ ಮುಕ್ತ ಆರ್ಥಿಕ ನೀತಿ ಗಳನ್ನು ಈಗಿನ ಅಗತ್ಯಕ್ಕೆ ತಕ್ಕಂತೆ ಬದಲಿಸ ಬೇಕು” ಎಂದು ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಸಲಹೆ ನೀಡಿದ್ದಾರೆ. “ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ತುಂಬಾ ವ್ಯತ್ಯಾಸವಿದೆ. ಕಳೆದ 8 ವರ್ಷಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆ ಸಮರ್ಪಕವಾಗಿ ಆಗಿಲ್ಲ. ಕೊರೋನೋತ್ತರ ಪರಿಸ್ಥಿತಿ ಯಲ್ಲಿಯೂ ಬೆಳವಣಿಗೆ ಆಶಾದಾಯ ಕವಾಗಿಲ್ಲ. ಹಾಗಾಗಿ ಇಂದಿನ ಅಗತ್ಯಕ್ಕೆ ತಕ್ಕಂತೆ ಹಣಕಾಸು ನೀತಿಗಳನ್ನು ಬದಲಿಸಬೇಕು” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next