ಶಿವಮೊಗ್ಗ: ಕಾಂಗ್ರೆಸ್ ನವರ ಈ ಪಾದಯಾತ್ರೆಯಿಂದ ಜನರಿಗೆ ಒಳ್ಳೆಯದಾಗುವುದಿಲ್ಲ. ನೀರು ಸಿಗಲ್ಲ ಆದರೆ ಕೋವಿಡ್ ಸಿಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ತಾನು ಚಾಂಪಿಯನ್ ಆಗಬೇಕು, ಸಿಎಂ ಅಗಬೇಕು ಎನ್ನುವ ಲೆಕ್ಕದಲ್ಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೂ ಕೋವಿಡ್ ಹೆಚ್ಚುವ ಅಧಿಕಾರವನ್ನು ಸೋನಿಯಾ ಗಾಂಧಿ ಕೊಟ್ರಾ? ನೀವು ಸಿಎಂ ಆಗುವ ಭ್ರಮೆಯಲ್ಲಿ ರಾಜ್ಯದ ಜನರಿಗೆ ಕೋವಿಡ್ ಹರಡುವ ಪ್ರಯತ್ನ ಒಳ್ಳೆಯದು ಮಾಡಲ್ಲ. ಮೊದಲನೆಯದಾಗಿ ನೀವು ಸಿಎಂ ಆಗುವುದೇ ಕನಸು ಎಂದು ವ್ಯಂಗ್ಯವಾಡಿದರು.
ನೀರು ಕೊಡುವ ಬದಲು ರಾಜ್ಯದ ಜನರಿಗೆ ಕೋವಿಡ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಜ್ವರ ಅಂತಾ ಸುಸ್ತಾಗಿ ವಾಪಾಸ್ ಬಂದಿದ್ದಾರೆ. ಅವರು ಯಾವುದೇ ಪಕ್ಷದವರು ಇರಬಹುದು. ಆರೋಗ್ಯ ಬಹಳ ಮುಖ್ಯ. ಇದೇ ಉದ್ದೇಶದಿಂದಲೇ ಕಾಂಗ್ರೆಸ್ ನವರಿಗೆ ಪ್ರಾರ್ಥನೆ ಮಾಡುತ್ತಾ ಬಂದಿದ್ದೇನೆ. ಅವರಿಗೆ ರಾಜಕೀಯವೇ ಮುಖ್ಯವಾಗಿದೆ. ರಾಜ್ಯದ ಜನರಿಗೆ ಕೋವಿಡ್ ಹರಡುವುದನ್ನು ನಾನು ಖಂಡಿಸುತ್ತೇನೆ ಎಂದರು.
ಇದನ್ನೂ ಓದಿ:ಮೇಕೆದಾಟು ಪಾದಯಾತ್ರೆ ವೇಳೆ ನೂಕು ನುಗ್ಗಲು; ಬಸವಳಿದ ಡಿಕೆ ಶಿವಕುಮಾರ್
ಮೇಕೆದಾಟು ಹೆಸರಿನಲ್ಲಿ ಮಾಡುತ್ತಿರುವರಾಜಕಾರಣದಲ್ಲಿ ಜನಜಾತ್ರೆಯಾಗುತ್ತಿದೆ. ಜಿ.ಪಂ., ತಾಪಂ, ಅಸೆಂಬ್ಲಿ ಚುನಾವಣೆ ಟಿಕೆಟ್ ಗಾಗಿ ಡಿಕೆ ಶಿವಕುಮಾರ್ ಮುಂದೆ ಶೋ ತೋರಿಸಲು ಹೋಗಿದ್ದಾರೆ. ಇಂತಹ ಭ್ರಮೆಯಲ್ಲಿ ಏಳೆಂಟು ಸಾವಿರ ಜನರು ರಾಜ್ಯದ ಎಲ್ಲಾ ಭಾಗದಿಂದ ಹೋಗಿದ್ದಾರೆ. ಪಾದಯಾತ್ರೆಗೆ ಹೋಗಿ ಬಂದವರು ಇಡೀ ರಾಜ್ಯಕ್ಕೆ ಕೋವಿಡ್ ಹಚ್ಚುತ್ತಾರೆ. ಸ್ವತಃ ಡಿ.ಕೆ.ಶಿವಕುಮಾರ್ ಮಾಸ್ಕ್ ಹಾಕುತ್ತಿಲ್ಲ. ಅಂತರ ಇಲ್ಲ. ನೀತಿ- ನಿಯಮ ಪಾಲಿಸುತ್ತಿಲ್ಲ. ಇದರ ಮಧ್ಯ ಅರೇಸ್ಟ್ ಮಾಡ್ಕೋಳ್ಳಿ ಎಂದು ಪೌರುಷದ ಮಾತು ಬೇರೆ ಆಡುತ್ತಾರೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.