ಕಲಬುರಗಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡದೇ ದಿನೆ-ದಿನೇ ಹೆಚ್ಚಳ ಮಾಡುತ್ತಾ ಕೇಂದ್ರ ಸರ್ಕಾರ ಕಳೆದ ಆರು ವರ್ಷಗಳಲ್ಲಿ 18 ಲಕ್ಷ ಕೋಟಿ ರೂ.ಗಳನ್ನು ಜನರ ಜೇಬಿನಿಂದ ಕಸಿದಿದ್ದು, ಬೆಲೆ ಇಳಿಕೆಯಾಗುವವರೆಗೂ ಕಾಂಗ್ರೆಸ್ ಪಕ್ಷದ ಹೋರಾಟ ನಿಲ್ಲದು ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಗುಡುಗಿದ್ದಾರೆ.
ಲಾಕ್‌ಡೌನ್ ನಡುವೆಯೂ ಬೆಲೆ ಹೆಚ್ಚಿಸುವ ಮೂಲಕ ಜನರ ಜೀವನ ತತ್ತರವಾಗುವಂತೆ ಮಾಡುತ್ತಿರುವ ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತು ತೈಲ ಬೆಲೆ ಇಳಿಕೆ ಮಾಡಬೇಕು. ಈಗಾಗಲೇ ಕಾಂಗ್ರೆಸ್ ಪಕ್ಷ ಹೋರಾಟ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಹೋರಾಟ ವಿಸ್ತರಿಸಲಾಗುವುದು ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ| ಅಜಯಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರ ನೇತೃತ್ವದಲ್ಲಿ ಸೈಕಲ್ ಜಾಥಾ ನಡೆಸಲಾಗಿದೆ. ಕಲಬುರಗಿಯಲ್ಲೂ ನಡೆಸಲಾಗುತ್ತಿದೆ. ಒಂದೆಡೆ ಆತ್ಮ ನಿರ್ಭರ ಭಾರತ ಅಡಿ 20 ಲಕ್ಷ ಕೋಟಿ ರೂ. ಘೋಷಣೆ ಮಾಡಲಾಗಿದೆ. ಆದರೆ ಯಾರಿಗೂ ಸಹಾಯವಾಗಿಲ್ಲ. ಇದು ಬರೀ ಘೋಷಣೆಗೆ ಸಿಮೀತವಾಗಿದೆ. ತೈಲ ಬೆಲೆ ಕಡಿಮೆ ಮಾಡದೇ ಜನರಿಂದ ಪಡೆಯಲಾದ 18 ಲಕ್ಷ ಕೋಟಿ ರೂ. ಗಳನ್ನು ಜನರಿಗೆ ಮರಳಿ ನೀಡಲಿ ಎಂದರು.
2014ರಲ್ಲಿ ಪೆಟ್ರೋಲ್ ಮೇಲಿನ ಸುಂಕ ಲೀಟರ್ ಗೆ 9.20 ರೂ., ಡೀಸೆಲ್ 3.46 ರೂ. ಇದ್ದಿರುವುದನ್ನು ಈಗ ಪೆಟ್ರೋಲ್‌ಗೆ 23.78 ರೂ., ಡೀಸೆಲ್ 28.31ರೂ. ಗೆ ಹೆಚ್ಚಿಸಲಾಗಿದೆ. ಅಂದರೆ ಪೆಟ್ರೋಲ್ ಬೆಲೆ ಪ್ರತಿಶತ 258 ಹಾಗೂ ಡೀಸೆಲ್ ಬೆಲೆ ಶೇ. 820 ರಷ್ಟು ಹೆಚ್ಚಳ ಮಾಡಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಈ ಹಿಂದೆ ಒಮ್ಮೆಯೂ ಹೆಚ್ಚಳ ಆಗಿಲ್ಲ. ಮೋದಿ ಸರ್ಕಾರದಲ್ಲಿ ಆಗುತ್ತಿದೆ. ಲಾಕ್ ಡೌನ್ ಅವಧಿಯ ಐದು ತಿಂಗಳಲ್ಲಿ ಪೆಟ್ರೋಲ್ ಲೀಟರ್‌ಗೆ 10 ರೂ. ಹಾಗೂ ಡೀಸೆಲ್ ಲೀಟರ್‌ಗೆ 13ರೂ. ಹೆಚ್ಚಿಸಲಾಗಿದೆ. ಒಮ್ಮೆಯೂ ಇತಿಹಾಸದಲ್ಲಿ ಪೆಟ್ರೋಲ್‌ಗಿಂತ ಡೀಸೆಲ್ ಬೆಲೆ ಹೆಚ್ಚಳವಾಗಿರಲಿಲ್ಲ. ರಾಜ್ಯ ಸರ್ಕಾರವೂ ತೈಲ ಬೆಲೆ ಏರಿಕೆಯಲ್ಲಿ ಕೈ ಜೋಡಿಸಿದೆ ಎಂದು ವಾಗ್ಧಾಳಿ ನಡೆಸಿದರು. ಯುಪಿಎ ಸರ್ಕಾರವಿದ್ದಾಗ ತೈಲ ಬೆಲೆ ಬ್ಯಾರೆಲ್ ವೊಂದಕ್ಕೆ 108 ಡಾಲರ್ ಇತ್ತು. ಈಗ ಬ್ಯಾರೆಲ್‌ಗೆ 43.4 ಡಾಲರ್‌ಗೆ ಇಳಿದಿದೆ. ಅಂದರೆ ಶೇ. 68ರಷ್ಟು ದರ ಕಡಿಮೆಯಾಗಿದೆ. ಅಂದರೆ 20ರೂ. ಲೀಟರ್ ಗೆ ಪೆಟ್ರೋಲ್ ಕೊಡಬಹುದಾಗಿದೆ. ಆದರೆ 83ರೂ. ಗೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಲಾಗುವುದು. ಹೀಗಾಗಿ ಸರ್ಕಾರ ತನ್ನ ಭ್ರಮೆಯಿಂದ ಹೊರ ಬಂದು ಜನಸಾಮಾನ್ಯರ ಮೇಲಿನ ಹೊರೆ ಇಳಿಸಬೇಕೆಂದು ರಾಷ್ಟ್ರಪತಿಗೆ ಪತ್ರ ಬರೆಯಲಾಗಿದೆ ಎಂದರು.
ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ: ಜುಲೈ 2ರಂದು ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪದಗ್ರಹಣ ಸಮಾರಂಭಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪದಗ್ರಹಣ ಸಮಾರಂಭದ ನೇರ ಪ್ರಸಾರವನ್ನು ರಾಜ್ಯದ 7800 ಗ್ರಾ.ಪಂ ಕೇಂದ್ರ ಸ್ಥಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ವಿದ್ಯುನ್ಮಾನ ಮಾಧ್ಯಮ, ಸೋಶಿಯಲ್ ಮೀಡಿಯಾದಲ್ಲಿ ನೇರ ಪ್ರಸಾರವಾಗಲಿದೆ ಎಂದು ಡಾ| ಅಜಯಸಿಂಗ್ ತಿಳಿಸಿದರು.
ನೇರ ಸಹಾಯ ಮಾಡಲಿ: ಲಾಕ್‌ಡೌನ್‌ದಿಂದ ಕಷ್ಟಕ್ಕೆ ಒಳಗಾದವರಿಗೆ ಕೆನಡಾ, ಸ್ಪೇನ್‌ದಲ್ಲಿ ನೇರವಾಗಿ ಸಹಾಯ ಮಾಡಲಾಗುತ್ತಿದೆ. ಅದೇ ರೀತಿ ನಮ್ಮ ದೇಶದಲ್ಲೂ ಮಾಡಿ ಸಹಾಯ ಕಲ್ಪಿಸಬೇಕೆಂದರು.
ಕೋವಿಡ್ ತಡೆಯುವಲ್ಲಿ ಸರ್ಕಾರಗಳು ವಿಫಲ: ಕೋವಿಡ್ ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಸಂಪೂರ್ಣ ವಿಫಲವಾಗಿವೆ ಎಂದು ಡಾ| ಅಜಯಸಿಂಗ್ ಹಾಗೂ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಟೀಕಿಸಿದರು. ಹೋಮ್ ಕ್ವಾರಂಟೈನ್ ಅವಧಿಯನ್ನು ವಾರಕ್ಕೆ ಇಳಿಸಿ, ಅವರ ವರದಿ ಬಂದ ನಂತರ ಮನೆಗೆ ಹೋಗಿ ಕರೆದುಕೊಂಡು ಬಂದಿರುವುದು ಸೋಂಕು ವ್ಯಾಪಕಗೊಳ್ಳಲು ಕಾರಣವಾಗಿದೆ ಎಂದರು.
ಶಾಸಕಿ ಖನೀಜಾ ಫಾತಿಮಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಸಚಿವ ಕೆ.ಬಿ. ಶಾಣಪ್ಪ, ಮಾಜಿ ಶಾಸಕರಾದ ಬಿ.ಆರ್. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ ನೆಲೋಗಿ, ಮುಖಂಡರಾದ ನೀಲಕಂಠರಾವ್ ಮೂಲಗೆ, ಜಗನ್ನಾಥ ಗೋಧಿ, ಶರಣು ಮೋದಿ, ನಾರಾಯಣರಾವ್ ಕಾಳೆ, ಫರಾಜ್ ಉಲ್ ಇಸ್ಲಾಂ, ಲತಾ ರವಿ ರಾಠೊಡ, ಡಾ| ಕಿರಣ ದೇಶಮುಖ ಹಾಗೂ ಮತ್ತಿತರರು ಇದ್ದರು.
ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ತಾರತಮ್ಯ ಧೋರಣೆ ತಳೆಯಲಾಗುತ್ತಿದೆ. ವರ್ಷವಾದರೂ ಕೆಕೆಆರ್‌ಡಿಬಿಗೆ ಅಧ್ಯಕ್ಷರ ನೇಮಕ ಮಾಡಲಿಕ್ಕಾಗುತ್ತಿಲ್ಲ. 1500 ಕೋಟಿ ರೂ. ನಿಗದಿಯಲ್ಲಿ ಈಗ 1131 ಕೋಟಿ ರೂ.ಗೆ ಮಾತ್ರ ಕ್ರಿಯಾ ಯೋಜನೆ ರೂಪಿಸುವಂತೆ ಹೇಳಲಾಗಿದೆ. ಇದಕ್ಕಾಗಿಯೇ ಹೈ.ಕ ಭಾಗದ ಹೆಸರನ್ನು ಕಲ್ಯಾಣ ಕರ್ನಾಟಕ ಎಂಬುದಾಗಿ ಬದಲಾವಣೆ ಮಾಡಿದ್ದು. –
ಡಾ| ಅಜಯಸಿಂಗ್, ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ
ರಾಜ್ಯ ಸರ್ಕಾರಕ್ಕೆ ಕೋವಿಡ್ ನಿಯಂತ್ರಿಸುವಲ್ಲಿ ಆಸಕ್ತಿಯಿಲ್ಲ. ಬದಲಾಗಿ ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆಗಳನ್ನು ತಿದ್ದುಪಡಿ ತರುವ ಮುಖಾಂತರ ರೈತರು ಹಾಗೂ ಕೂಲಿ ಕಾರ್ಮಿಕರನ್ನು ಬೀದಿಗೆ ತಳ್ಳುವಲ್ಲಿ ನಿರತವಾಗಿದೆ. ಕೋವಿಡ್ ಗೆ ಸಂಬಂಧಪಟ್ಟಂತೆ ಸರ್ಕಾರ ಶ್ವೇತ ಪತ್ರ ಹೊರಡಿಸಲಿ. –
ಡಾ| ಶರಣಪ್ರಕಾಶ ಪಾಟೀಲ, ಮಾಜಿ ಸಚಿವ