ನವದೆಹಲಿ:ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿ ಮತ್ತು 35ಎ ಪರಿಚ್ಛೇದದಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವ ಕೇಂದ್ರ ಸರಕಾರದ ಐತಿಹಾಸಿಕ ನಿರ್ಧಾರಕ್ಕೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಬೆಂಬಲ ನೀಡಿದ್ದು, ಏತನ್ಮಧ್ಯೆ ಕಾಶ್ಮೀರ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಏನು ಎಂಬ ಬಗ್ಗೆ ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370ನೇ ವಿಧಿಯನ್ನು ರದ್ದು ಮಾಡಿರುವ ಕೇಂದ್ರದ ಕ್ರಮದ ಬಗ್ಗೆ ನಮ್ಮ ಪಕ್ಷದ ಗುಲಾಂ ನಬಿ ಆಜಾದ್ , ಪಿ.ಚಿದಂಬರಂ ಸೇರಿದಂತೆ ಪ್ರತಿಯೊಬ್ಬರು ಕಳೆದ ಒಂದು ವಾರದಿಂದಲೇ ಮಾತನಾಡುತ್ತಿದ್ದರು. ಇದೊಂದು ತೆರೆದ ಸತ್ಯವಾಗಿತ್ತು ಅಷ್ಟೇ. ಆದರೆ ನಮಗೆ ಹೀಗೆಯೇ ಅಂತ ಖಚಿತವಾಗಿ ತಿಳಿದಿರಲಿಲ್ಲವಾಗಿತ್ತು. ನಾವು ಈಗ ಬಹುಮತ ಇಲ್ಲದ ಸಣ್ಣ ಪಕ್ಷಗಳು ವಿರೋಧಿಸಬಹುದು, ವಿಧೇಯಕದ ವಿರುದ್ಧ ಮತ ಚಲಾಯಿಸಬಹುದು. ಆದರೆ ಪ್ರಜಾಪ್ರಭುತ್ವ ಅಂದರೆ ಪ್ರಜಾಪ್ರಭುತ್ವವೇ..ಇಲ್ಲಿ ಎಲ್ಲವೂ ಸಂಖ್ಯೆಯ ಮೇಲೆಯೇ ನಿರ್ಧಾರವಾಗುವುದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ ಮನು ಸಿಂಘ್ವಿ ಎನ್ ಡಿಟಿವಿ ಜತೆ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಿಲುವಿನ ಬಗ್ಗೆ ಮೂಲಗಳು ಹೇಳುವುದೇನು?
370ನೇ ಕಲಂಗೆ ಸಂಬಂಧಿಸಿದಂತೆ ನಮ್ಮ ನಿಲುವು ಏನಾಗಿರಬೇಕು ಎಂಬ ಪಕ್ಷದೊಳಗೆ ರಾಹುಲ್ ನೇತೃತ್ವದಲ್ಲಿ ಚರ್ಚೆ ನಡೆದಿತ್ತು. ಕೊನೆಗೆ ಆರ್ಟಿಕಲ್ 370 ಅನ್ನು ರದ್ದುಪಡಿಸುವ ಬಗ್ಗೆ ವಿರೋಧ ವ್ಯಕ್ತಪಡಿಸಬೇಕೆಂದು ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ಈ ನಿಲುವಿನ ಹಿನ್ನೆಲೆಯಲ್ಲಿಯೇ ರಾಜ್ಯಸಭೆಯಲ್ಲಿ ಸೋಮವಾರ ಅಮಿತ್ ಶಾ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ನೇ ವಿಧಿಯನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದಾಗ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದರು ಸೋನಿಯಾ ನೇತೃತ್ವದಲ್ಲಿ ಕಲಾಪದಿಂದ ಹೊರನಡೆದಿದ್ದರು. ಕೆಲವು ಸಂಸದರು ಮೋದಿ ನಿರ್ಧಾರವನ್ನು ಬೆಂಬಲಿಸಿ ಪ್ರತಿಕ್ರಿಯೆ ನೀಡಿದ್ದು, ಇದು ಅವರ ವೈಯಕ್ತಿಕ ಅಭಿಪ್ರಾಯ ಪಕ್ಷದ್ದಲ್ಲ ಎಂದು ಕಾಂಗ್ರೆಸ್ ತಿಳಿಸಿತ್ತು.