ಬೆಂಗಳೂರು: ಕಳೆದ ಎರಡು-ಮೂರು ತಿಂಗಳಿಂದ ಅಭ್ಯರ್ಥಿಗಳ ಆಯ್ಕೆಗೆ ಅನುಸರಿಸಿದ ಜಿಲ್ಲಾಮಟ್ಟದ ಅಭಿಪ್ರಾಯ ಸಂಗ್ರಹ, 5 ಹಂತಗಳ ಸಮೀಕ್ಷೆಗಳ ಬಳಿಕವೂ ಕಾಂಗ್ರೆಸ್ ಇದುವರೆಗೆ ಕೇವಲ 7 ಕ್ಷೇತ್ರಗಳಿಗಷ್ಟೇ ಅಭ್ಯರ್ಥಿಗಳನ್ನು ಘೋಷಿಸಲು ಸಾಧ್ಯವಾಗಿದೆ. ಇನ್ನೂ 21 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಾಕಿಯಿದೆ. ಹಾಗಾಗಿ ಕಾಂಗ್ರೆಸ್ ಇನ್ನಷ್ಟು ಚುನಾವಣೆಗೆ ರೆಡಿ ಆಗಬೇಕಿದೆ.
ಮೊದಲಿಗೆ ಬಾಕಿ ಉಳಿಸಿಕೊಂಡಿರುವ 21 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದರ ಜತೆಗೆ ಚುನಾವಣಾ ಕೆಲಸಗಳ ನಿಮ್ಮಿತ್ತ ವಿವಿಧ ಸಮಿತಿಗಳ ರಚನೆಯೂ ಆಗಬೇಕಿದೆ. ನಿರ್ದಿಷ್ಟ ಹೊಣೆಗಾರಿಕೆ ಹಂಚಿಕೆ ಇದುವರೆಗೂ ಆಗಿಲ್ಲ. ಆದರೆ ಸರ್ಕಾರದಿಂದ ಇದುವರೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಹತ್ತಾರು ಸಮಾವೇಶಗಳನ್ನು ಮಾಡುವ ಮೂಲಕ ಮತಬೇಟೆ ಆರಂಭಿಸಿದೆ.
ಕಳೆದ ವಿಧಾನಸಭಾ ಚುನಾವಣೆಗೆ ಕೆಪಿಸಿಸಿ ನಡೆಸಿದ ಸಿದ್ಧತೆಯಲ್ಲಿ ಶೇ.10ರಷ್ಟೂ ಸಿದ್ಧತೆಗಳು ಲೋಕಸಮರಕ್ಕೆ ನಡೆದಿಲ್ಲ. ಅಂದಾಜು ವಿವಿಧ 30 ಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಲಾಗಿತ್ತು. ಆದರೆ ಈಗ ಏನೂ ಆಗಿಲ್ಲ. ಜತೆಗೆ ವಿಧಾನಸಭಾ ಚುನಾವಣೆ ಬಳಿಕ ವಾರ್‌ರೂಂ, ಕೆಪಿಸಿಸಿ ಮಾಧ್ಯಮ ವಿಭಾಗ, ಸೋಷಿಯಲ್ ಮೀಡಿಯಾ ಘಟಕಗಳು ಅಷ್ಟೊಂದು ಸಕ್ರಿಯವಾಗಿಲ್ಲ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸರ್ಕಾರ ಹಾಗೂ ಪಕ್ಷ ಎರಡೂ ಕಡೆಯೂ ಇರುವುದರಿಂದ ಪೂರ್ಣ ಸಮಯವನ್ನು ಒಂದು ಕಡೆ ನೀಡಲು ಸಾಧ್ಯವಾಗದ ಕಾರಣ ವಾರ್ ರೂಮ್, ಮಾಧ್ಯಮ ವಿಭಾಗ, ಸೋಷಿಯಲ್ ಮೀಡಿಯಾ ವಿಭಾಗಗಳು ಒಂದು ರೀತಿ ಸ್ತಬ್ಧವಾಗಿವೆ.ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿ ಇತ್ತು, ಆಗ ಬಹಳ ಅಕ್ರಮಣಕಾರಿಯಾಗಿ ಕೆಲಸ ಮಾಡಿತ್ತು. ಅಭ್ಯರ್ಥಿಗಳ ಘೋಷಣೆ ಕೆಲಸ ಮುಗಿದ ಬಳಿಕ ಕಾಂಗ್ರೆಸ್ ಸಿದ್ಧತೆಗಳು, ತಂತ್ರಗಾರಿಕೆಗಳು ಆರಂಭವಾಗುವ ಸಾಧ್ಯತೆಗಳಿವೆ.