ಹೊಸದಿಲ್ಲಿ: ಕರ್ನಾಟಕಕ್ಕೆ ಕೇಂದ್ರದಿಂದ ಸಾಕಷ್ಟು ಅನುದಾನ ಸಿಗುತ್ತಿಲ್ಲ, ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶ ಮಾಡಬೇಕು ಎಂದು ಒತ್ತಾಯಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಕಾಂಗ್ರೆಸ್‌ನ ಸಂಸದ ಡಿ.ಕೆ.ಸುರೇಶ್ ಅವರು ಗುರುವಾರ ವಿವಾದಕ್ಕೆ ಸಿಲುಕಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಕುರಿತು ಪ್ರತಿಕ್ರಿಯಿಸುವ ವೇಳೆ ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಈ ಹೇಳಿಕೆ ನೀಡಿದ್ದಾರೆ. ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ. ದಕ್ಷಿಣಕ್ಕೆ ತಲುಪಬೇಕಾಗಿದ್ದ ಹಣವನ್ನು ಉತ್ತರ ಭಾರತಕ್ಕೆ ತಿರುಗಿಸಿ ಹಂಚಲಾಗುತ್ತಿದೆ” ಎಂದು ಆರೋಪಿಸಿದರು.
ಬಿಜೆಪಿ ಖಂಡನೆ
ಅಖಂಡ ಭಾರತವನ್ನು ತುಂಡು ಮಾಡಿದ ಕಾಂಗ್ರೆಸ್ಸಿಗರ ಮನಸ್ಥಿತಿ ಇಂದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ದೇಶವನ್ನು ಮತ್ತೊಮ್ಮೆ ವಿಭಜಿಸುವ ಬಹುದೊಡ್ಡ ಷಡ್ಯಂತ್ರ ಸಂಸದ ಡಿ.ಕೆ. ಸುರೇಶ್ ಅವರ ಬಾಯಲ್ಲಿ ಬಂದಿದೆ. ದೇಶವನ್ನೇ ತುಂಡು ಮಾಡುವ ಮತಾಂಧ ಜಿಹಾದಿಗಳನ್ನು ಬಳಸಿಕೊಂಡು ಅವರನ್ನು ಪೋಷಣೆ ಮಾಡುತ್ತಿರುವ ಕಾಂಗ್ರೆಸ್ ಇಂದು ಜಿಹಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ.ಧರ್ಮದ ಆಧಾರದ ಮೇಲೆ ಭಾರತವನ್ನು ಒಡೆದಾದ ಮೇಲೂ ಕಾಂಗ್ರೆಸ್ ಗೆ, ದೇಶವನ್ನು ಛಿದ್ರ ಮಾಡುವ ಮಹದಾಸೆ ಈಡೇರದೆ ಇರುವುದೇ ಇಂತಹ ಮತಿಗೇಡಿ ಹೇಳಿಕೆಗಳು ಹೊರ ಬರಲು ಕಾರಣ. ಭಾರತದಲ್ಲಿ ಬದುಕುವ ಇಚ್ಛೆ ಇಲ್ಲದೆ ಇದ್ದರೆ, ದೇಶದ್ರೋಹಿ ಹೇಳಿಕೆಗಳನ್ನು ನೀಡುವುದು ಬಿಟ್ಟು ವಿಶಾಲ ಪ್ರಪಂಚದಲ್ಲಿ ಭಾರತ ಬಿಟ್ಟು ಬೇರೆ ಯಾವುದೇ ದೇಶಕ್ಕೆ ಕಾಂಗ್ರೆಸ್‌ನವರು ತೆರಳಬಹುದು. ಅದು ಕಾಂಗ್ರೆಸ್ಸಿಗರೇ ಸೃಷ್ಟಿಸಿದ ಪಾಕಿಸ್ಥಾನದಲ್ಲಿ ಕಾಂಗ್ರೆಸ್ಸಿಗರಿಗೆ ರಾಜ ಮರ್ಯಾದೆ ಸಿಕ್ಕರೂ ಸಿಗಬಹುದು ಎಂದು ರಾಜ್ಯ ಬಿಜೆಪಿ ಎಕ್ಸ್ ಪೋಸ್ಟ್ ನಲ್ಲಿ ಆಕ್ರೋಶ ಹೊರ ಹಾಕಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿ ಹಲವಾರು ನಾಯಕರು ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ವಾಗ್ದಾಳಿ ನಡೆಸಿದ್ದಾರೆ.
ಹೇಳಿಕೆ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿ ‘ಕಾಂಗ್ರೆಸ್ ಪಕ್ಷ ಒಡೆದು ಆಳುವ ಇತಿಹಾಸವನ್ನು ಹೊಂದಿದ್ದರೆ, ಅದರ ಸಂಸದ ಡಿ.ಕೆ.ಸುರೇಶ್ ಈಗ ಮತ್ತೆ ಉತ್ತರ ಮತ್ತು ದಕ್ಷಿಣವನ್ನು ವಿಭಜಿಸಬೇಕೆಂದು ನಾಟಕವಾಡುತ್ತಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಅಡಿಯಲ್ಲಿ ಕರ್ನಾಟಕಕ್ಕೆ ತೆರಿಗೆ ಹಂಚಿಕೆ ಹೇಗೆ ಹೆಚ್ಚಾಗಿದೆ ಎಂದು ಹೇಳುವ ಡೇಟಾವನ್ನು ಸೂರ್ಯ ಉಲ್ಲೇಖಿಸಿದರು.