ಶಿಮ್ಲಾ : ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ನಂತರ ಹರಿಯಾಣದ ಪಂಚಕುಲಕ್ಕೆ ತೆರಳಿದ್ದ ಆರು ಕಾಂಗ್ರೆಸ್ ಶಾಸಕರು ಮೂವರು ಪಕ್ಷೇತರ ಶಾಸಕರೊಂದಿಗೆ ಬುಧವಾರ ಶಿಮ್ಲಾಕ್ಕೆ ಮರಳಿದ್ದಾರೆ.
ಮಂಗಳವಾರ ಪಂಚಕುಲಕ್ಕೆ ತೆರಳಿದ್ದ ಒಂಬತ್ತು ಮಂದಿ ಹಿಮಾಚಲ ಪ್ರದೇಶ ವಿಧಾನಸಭೆಯನ್ನು ತಲುಪಿದ್ದು ಅವರನ್ನು ಬಿಜೆಪಿ ಶಾಸಕರು ”ಜೈ ಶ್ರೀ ರಾಮ್, ಬನ್ ಗಯಾ ಕಾಮ್” ಎಂಬ ಘೋಷಣೆಗಳೊಂದಿಗೆ ಸ್ವಾಗತಿಸಿದರು.
ರಾಜಿಂದರ್ ರಾಣಾ ಮತ್ತು ರವಿ ಠಾಕೂರ್ ಸೇರಿದಂತೆ ಶಾಸಕರು ಕಳೆದ ರಾತ್ರಿ ಪಂಚಕುಲದ ಹೋಟೆಲ್‌ನಲ್ಲಿ ಕಳೆದು ಇಂದು ಬೆಳಿಗ್ಗೆ ತೌ ದೇವಿ ಲಾಲ್ ಸ್ಟೇಡಿಯಂನಿಂದ ಹೆಲಿಕಾಪ್ಟರ್ ನಲ್ಲಿ ಬಂದಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತ ಚಲಾಯಿಸಿದ ನಂತರ ಶಾಸಕರು ಶಿಮ್ಲಾದಿಂದ ಬಿಜೆಪಿ ಆಡಳಿತವಿರುವ ಹರಿಯಾಣಕ್ಕೆ ಆಗಮಿಸಿದ್ದರು. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಕಾರ್ಯಶೈಲಿಯಿಂದ ಶಾಸಕರು ಅಸಮಾಧಾನ ಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Himachal: ನಾನು ರಾಜೀನಾಮೆ ಕೊಟ್ಟಿಲ್ಲ, ರಾಜೀನಾಮೆ ವದಂತಿ ತಳ್ಳಿಹಾಕಿದ ಸಿಎಂ ಸಿಂಗ್
ಅಪಹರಣ ದೂರು
ಸಿಎಂ ಸುಖವಿಂದರ್ ಸಿಂಗ್ ಸುಖು ಅವರು ಕಾಂಗ್ರೆಸ್ ಶಾಸಕರನ್ನುಅಪಹರಣ ಮಾಡಲಾಗಿದೆ ಎಂದು ಶಿಮ್ಲಾದಲ್ಲಿ ಆರೋಪಿಸಿದ್ದರು . ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರವಿ ಠಾಕೂರ್ ಸುಖು ಅವರ ಹೇಳಿಕೆಯನ್ನು ತಳ್ಳಿಹಾಕಿ, ನಾವು ಎಲ್ಲಿ ಬೇಕಾದರೂ ಹೋಗಬಹುದು ಎಂದರು.