ಬೆಂಗಳೂರು: ಬಿಜೆಪಿಯವರ ರೆಸಾರ್ಟ್ ರಾಜಕೀಯ ಮುಕ್ತಾಯವಾದ ನಂತರ ಭಾನುವಾರ ಮಧ್ಯಾಹ್ನಕ್ಕೆ ರೆಸಾರ್ಟ್ ರಾಜಕೀಯಕ್ಕೆ ಮಂಗಳ ಹಾಡಿ ಸ್ವಕ್ಷೇತ್ರಗಳಿಗೆ ತೆರಳಲು ಸಿದಟಛಿರಾಗಿದ್ದ ಕಾಂಗ್ರೆಸ್ ಶಾಸಕರಿಗೆ ತಮ್ಮ ಪಕ್ಷದ ಶಾಸಕರ ಗಲಾಟೆ ಪ್ರಕರಣ ಮತ್ತೊಂದು ದಿನ ರೆಸಾರ್ಟ್‌ನಲ್ಲಿಯೇ ವಾಸ್ತವ್ಯ ಹೂಡುವಂತೆ ಮಾಡಿದೆ.
ಈ ನಡುವೆ, ಭಾನುವಾರ ನಡೆದ ಶಾಸಕರ ಸಭೆಯಲ್ಲಿ ಈ ಎಲ್ಲ ವಿದ್ಯಮಾನಗಳು ನಡೆಯಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿರ್ಲಕ್ಷ್ಯ ಧೋರಣೆ ಕಾರಣವಾಗಿದ್ದು,ಅವರನ್ನು ಬದಲಾಯಿಸಿ ಎಂದು ಸಭೆಯಲ್ಲಿ 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ನಾಯಕರಿಗೆ ನೇರ ವಾಗಿಯೇ ಹೇಳಿದ್ದಾರೆಂದು ತಿಳಿದು ಬಂದಿದೆ.
ಕಾಂಗ್ರೆಸ್ ಶಾಸಕರಿಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಸರಿಯಾಗಿ ಮಾನ್ಯತೆ ನೀಡದಿರುವುದರಿಂದಲೇ ಶಾಸಕರು ಅಸಮಾಧಾನಗೊಂಡಿದ್ದು, ಇದಕ್ಕೆಲ್ಲ ಅವರ ನಡವಳಿಕೆಯೇ ಕಾರಣ. ಅವರನ್ನೇ ಬದಲಾಯಿಸಿ ಎಂದು ಆಗ್ರಹಿಸಿದ್ದಾರೆಂದು ಹೇಳಲಾಗಿದೆ. ಆನಂದ್ ಸಿಂಗ್ ಮೇಲೆ ಗಣೇಶ್ ಹಲ್ಲೆ ಮಾಡಿದ್ದಾರೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಸಂಜೆ ಕಾಂಗ್ರೆಸ್ ಪಕ್ಷದ ನಾಯಕರು ಎಲ್ಲ ಶಾಸಕರ ಸಭೆ ಕರೆದು ಮತ್ತೂಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್ ಶಾಸಕರ ಗಲಾಟೆ ಪ್ರಕರಣದಿಂದ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ಆಗಿರುವ ಮುಜುಗರದ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಕೆ.ಸಿ.ವೇಣುಗೋಪಾಲ್ ಪ್ರತಿ ಶಾಸಕರ ಜತೆ ಪ್ರತ್ಯೇಕ ಮಾತುಕತೆ ನಡೆಸಿ, ಅವರ ಅಭಿಪ್ರಾಯ ಕೇಳಲು ನಿರ್ಧರಿಸಿದ್ದರಿಂದ ಭಾನುವಾರ ರೆಸಾರ್ಟ್‌ನಿಂದ ತಮ್ಮ ಕ್ಷೇತ್ರಗಳಿಗೆ ತೆರಳಲು ಸಿದ್ದರಾಗಿದ್ದ ಶಾಸಕರು ಇನ್ನೊಂದು ದಿನ ರೆಸಾರ್ಟ್‌ನಲ್ಲಿಯೇ ವಾಸ್ತವ್ಯ ಹೂಡುವಂತಾಗಿದೆ ಎಂದು ತಿಳಿದು ಬಂದಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್ ಅವರು ಸೋಮ ವಾರವೂ ಶಾಸಕರೊಂದಿಗೆ ಮತ್ತೂಂದು ಸುತ್ತಿನ ಸಭೆ ನಡೆಸಿ ನಂತರ ಅವರ ಕ್ಷೇತ್ರಗಳಿಗೆತೆರಳುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ.
ಇನ್ನೆರಡು ದಿನ ರೆಸಾರ್ಟ್ ವಾಸ್ತವ್ಯ ಮುಂದುವರಿಕೆ?
ರಾಮನಗರ: ಆನಂದ್ ಸಿಂಗ್ ಮತ್ತು ಗಣೇಶ್ ಪ್ರಕರಣದಿಂದ ರಾಷ್ಟ್ರವ್ಯಾಪಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವುಂಟಾಗಿದೆ. ಹೀಗಾಗಿ, ಇನ್ನೆರಡು ದಿನ ರೆಸಾರ್ಟ್ ವಾಸ್ತವ್ಯ ಮುಂದುವರಿಯುವ ಸಾಧ್ಯತೆಯಿದೆ.
ಶಾಸಕರನ್ನು ತಮ್ಮ ಕ್ಷೇತ್ರಗಳಿಗೆ ಹೋಗಲು ಬಿಟ್ಟರೆ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಾಖ್ಯಾನ ನೀಡಿದರೆ ಪಕ್ಷಕ್ಕೆ ಮತ್ತಷ್ಟು ತೊಂದರೆಯಾಗಲಿದೆ ಎಂಬ ಉದ್ದೇಶದಲ್ಲಿ ಮೊದಲು, ಡ್ಯಾಮೇಜ್ ಕಂಟ್ರೋಲ್ ಮಾಡಿ ನಂತರ ಶಾಸಕರನ್ನು ಬಿಟ್ಟು ಕೊಡುವ ಬಗ್ಗೆಯೂ ಪಕ್ಷದ ವರಿಷ್ಠರಲ್ಲಿ ಚಿಂತನೆ ನಡೆದಿದೆ. ಹೀಗಾಗಿ,ವಾಸ್ತವ್ಯ ಇನ್ನೆರಡು ದಿನ ಮುಂದುವರಿಯುವ ಸಾಧ್ಯತೆಗಳು ಹೆಚ್ಚು ಎಂದು ತಿಳಿದು ಬಂದಿದೆ.