Advertisement

ಕೈ ಶಾಸಕರಿಗೆ ಸಿದ್ದು ಹಿತೋಪದೇಶ

06:41 AM Jan 22, 2019 | |

ಬೆಂಗಳೂರು: ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರೊಂದಿಗೆ ಮುಕ್ತವಾಗಿ ಮಾತನಾಡಲು ಶಾಸಕಾಂಗ ಸಭೆ ಕರೆದಿದ್ದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾದ ಸುದ್ದಿ ತಿಳಿಯುತ್ತಿದ್ದಂತೆ ಶಾಸಕಾಂಗ ಪಕ್ಷದ ಸಭೆಯನ್ನು ರದ್ದುಗೊಳಿಸಿ, ಶಾಸಕರಿಗೆ ಆಪರೇಷನ್‌ ಕಮಲದ ಖೆಡ್ಡಾಕ್ಕೆ ಬೀಳದಂತೆ ಬುದ್ಧಿವಾದ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Advertisement

“ಲೋಕಸಭೆ ಚುನಾವಣೆ ನಂತರ ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೇ ಮರ್ಯಾದೆ ಇರುವುದಿಲ್ಲ. ಅವರನ್ನು ನಂಬಿ ಬಿಜೆಪಿಗೆ ಹೋದರೆ, ನಿಮಗೂ ಯಾರೂ ಮರ್ಯಾದೆ ಕೊಡುವುದಿಲ್ಲ ಎಂಬ ಎಚ್ಚರಿಕೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಆಪರೇಷನ್‌ ಕಮಲಕ್ಕೆ ಒಳಗಾದವರು ಯಾರೂ ರಾಜಕೀಯದಲ್ಲಿ ಸ್ಥಿರವಾಗಿಲ್ಲ.

ರಾಜಕೀಯ ಭವಿಷ್ಯವೇ ಮಂಕಾಗಿದೆ. ಕಾಂಗ್ರೆಸ್‌ನಲ್ಲಿ ಏನಾದರೂ ಸಮಸ್ಯೆಯಾಗಿದ್ದರೆ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ, ದುಡುಕಿನ ನಿರ್ಧಾರ ತೆಗೆದುಕೊಂಡು ಪಶ್ಚಾತ್ತಾಪ ಪಡಬೇಡಿ ಎಂಬ ಹಿತೋಪದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಆಪರೇಷನ್‌ ಕಮಲದ ಆತಂಕದ ನಡುವೆಯೇ ಶಾಸಕರು ರೆಸಾರ್ಟ್‌ನಿಂದ ಸ್ವ ಕ್ಷೇತ್ರಗಳಿಗೆ ತೆರಳಿ ಬರ ಪರಿಹಾರ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಲೋಕಸಭೆ ಚುನಾವಣೆ ಹತ್ತಿರ ಇರುವುದರಿಂದ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿ, ಜನರೊಂದಿಗೆ ಬೆರೆಯುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. 

ಬ್ರೇಕ್‌ ನಂತರ ಆಪರೇಷನ್‌?: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಶಾಸಕರ ಆಪರೇಷನ್‌ ರಾಜಕಾರಣಕ್ಕೆ ಬ್ರೇಕ್‌ ಬಿದ್ದಿದ್ದು, ಈ ತಿಂಗಳ ಅಂತ್ಯದಲ್ಲಿ ನಡೆಯುವ ಜಂಟಿ ಅಧಿವೇಶನ ಸಂದರ್ಭ ಅಥವಾ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮಂಡನೆ ಸಮಯದಲ್ಲಿ ಮತ್ತೆ ಆಪರೇಷನ್‌ ರಾಜಕೀಯ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Advertisement

ಈಗಾಗಲೇ ರೆಸಾರ್ಟ್‌ ರಾಜಕೀಯ ಮಾಡಿರುವುದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ಮುಕ್ತವಾಗಿ ದೂರವಾಣಿ ಮೂಲಕ ಸಂಪರ್ಕಕ್ಕೆ ಲಭ್ಯವಾಗುತ್ತಾರೆ. ಅಲ್ಲದೇ ಈಗಾಗಲೇ ಬಿಜೆಪಿಯವರು ಸಂಪರ್ಕಿಸಿದ್ದ ಕಾಂಗ್ರೆಸ್‌ನ ಕೆಲವು ಶಾಸಕರು ಬಿಜೆಪಿ ಸೇರಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿ ಸೇರುವ ಸೂಚನೆ ನೀಡಿದ್ದಕ್ಕೆ ಅಮಾನತು: ರಾಮನಗರದ ರೆಸಾರ್ಟ್‌ ಗಲಾಟೆ ನಂತರ ಬಿಜೆಪಿಗೆ ಹೋಗುವ ಸೂಚನೆ ನೀಡಿದ ಕಾರಣಕ್ಕೇ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ರನ್ನು ಪಕ್ಷ ಅಮಾನತು ಮಾಡಿದೆ. ಒಂದೊಮ್ಮೆ ಗಣೇಶ್‌ ಕೇಸರಿ ಪಡೆಯತ್ತ ಮುಖ ಮಾಡಿದರೆ, ಗೂಂಡಾ ಸಂಸ್ಕೃತಿಯವರನ್ನು ಹೇಗೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ನೈತಿಕವಾಗಿ ಬಿಜೆಪಿಯನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ಈ ತಂತ್ರ ಅನುಸರಿಸಿದೆ ಎಂದು ಹೇಳಲಾಗುತ್ತಿದೆ.

ಅಲ್ಲದೇ ಬಿಜೆಪಿಯವರು “ಆಪರೇಷನ್‌ ಕಮಲ’ಕ್ಕೆ ಮುಂದಾದರೆ, ಈ ಬಾರಿ ಬಿಜೆಪಿಯ ಅತೃಪ್ತ ಶಾಸಕರನ್ನು ಸಂಪರ್ಕಿಸಿ “ಆಪರೇಷನ್‌ ಹಸ್ತ’ ಮಾಡಲು ನಿರ್ಧರಿಸಿಯೇ ಶಾಸಕರನ್ನು ರೆಸಾರ್ಟ್‌ನಿಂದ ಕ್ಷೇತ್ರಗಳಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಗಲಾಟೆ ಮಾಡಿಕೊಂಡ ಶಾಸಕರಿಂದ ಹೇಳಿಕೆ ಪಡೆದಿದ್ದೇವೆ. ಅವರ ವಿರುದ್ಧ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ. ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಶಾಸಕರಿಗೆ ನೋಟಿಸ್‌ ನೀಡಿದ್ದು, ಶೀಘ್ರವೇ ಉತ್ತರ ನೀಡುತ್ತಾರೆ ಎಂಬ ವಿಶ್ವಾಸವಿದೆ. ಉತ್ತರ ಬಂದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಆನಂದ್‌ ಸಿಂಗ್‌ ನನಗೆ ಅಣ್ಣನ ಸಮಾನ. ಬಾಟಲಿಯಿಂದ ಹಲ್ಲೆ ಮಾಡಿದ್ದೇನೆ ಎನ್ನುವುದು ಸುಳ್ಳು. ಆನಂದ್‌ ಮತ್ತು ಭೀಮಾನಾಯ್ಕ ನಡುವೆ ಕಾಂಪ್ರಮೈಸ್‌ ಮಾಡಿಸಲು ಹೋಗಿದ್ದಾಗ ವಾಗ್ವಾದ ನಡೆಯಿತು. ಅವರು ಬಿದ್ದಿದ್ದರಿಂದ ಗಾಯವಾಯಿತೇ ಹೊರತು, ಹಲ್ಲೆಯಿಂದಲ್ಲ. ಆನಂದ್‌ ಸಿಂಗ್‌ ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ.
-ಜೆ.ಎನ್‌.ಗಣೇಶ್‌, ಕಂಪ್ಲಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next