ಮುಂಬಯಿ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಕಾಂಗ್ರೆಸ್ ಕಳಪೆ ಸಾಧನೆ ತೋರಿರುವ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಉಚ್ಚಾಟಿತಗೊಂಡಿದ್ದ ಶಾಸಕ ಅಬ್ದುಲ್ ಸತ್ತಾರ್ ಶೀಘ್ರದಲ್ಲೇ ಬಿಜೆಪಿಗೆ ಸೇರುವ ಸುಳಿವು ನೀಡಿದ್ದಾರೆ.
ಸತ್ತಾರ್ ಅವರನ್ನು ಇತ್ತೀಚೆಗಷ್ಟೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪದ ಮೇರೆಗೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇದೀಗ ಅಸಮಾಧಾನಿತ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರೊಂದಿಗೆ ಅಹ್ಮದ್‌ನಗರ ಜಿಲ್ಲೆಯ ಸಂಗಮ್‌ನಾರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಹಲವಾರು ಕಾಂಗ್ರೆಸ್ ನಾಯಕರೂ ಕೆಲವೇ ದಿನಗಳಲ್ಲಿ ಪಕ್ಷದಿಂದ ಹೊರಬರಲಿದ್ದು, ಶೀಘ್ರವೇ ಬಿಜೆಪಿಯನ್ನು ಸೇರಲಿದ್ದಾರೆ. ವಿಖೇ ಪಾಟೀಲ್ ಏನೇ ನಿರ್ಧಾರ ಕೈಗೊಂಡರೂ ಅದನ್ನು ನಾವು ಪಾಲಿಸುತ್ತೇವೆ. ಅವರ ನಿರ್ಧಾರವೇ ಅಂತಿಮ ಎಂದು ಸತ್ತಾರ್ ಅವರು ತಿಳಿಸಿದ್ದಾರೆ. ರಾಜ್ಯ ಸಂಪುಟಕ್ಕೆ ವಿಖೇ ಪಾಟೀಲ್ ಸೇರಿಕೊಳ್ಳಲಿದ್ದು, ಜೂ. 1ರ ನಂತರ ಅವರನ್ನು ಸಚಿವರನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯ ವೇಳೆ ಸತ್ತಾರ್, ರಾಜ್ಯ ಬಿಜೆಪಿ ಮುಖ್ಯಸ್ಥ ರಾವ್ ಸಾಹೇಬ್ ಧಾನ್ವೆ ಅವರ ಪುತ್ರ, ಔರಂಗಬಾದ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿದ್ದ ಹರ್ಷವರ್ಧನ್ ಜಾಧವ್ ಅವರಿಗೆ ಬೆಂಬಲ ಸೂಚಿಸಿದ್ದರು. ಔರಂಗಾಬಾದ್‌ನ ಶಾಸಕರಾಗಿರುವ ಸತ್ತಾರ್, ಕಾಂಗ್ರೆಸ್‌ನಿಂದ ಔರಂಗಾಬಾದ್ ಮತ್ತು ಜಾಲಾ° ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತಾಗಿ ಅಸಮಾಧಾನಗೊಂಡಿದ್ದರು.