Advertisement
ದೆಹಲಿಯಲ್ಲಿ ರಾಹುಲ್‌ಗಾಂಧಿ ಭೇಟಿ ನಂತರ ಜೋಶ್ ನಲ್ಲಿರುವ ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಮತ್ತೊಂದು ಹಂತದ ರಾಜಕೀಯ ವಾಕ್ಸಮರಕ್ಕೆ ಯಾತ್ರೆ ಸಾಕ್ಷಿಯಾಗಬಹುದು.
Related Articles
Advertisement
ಬೆಂಗಳೂರಿನಲ್ಲಿ ಪಾದಯಾತ್ರೆಯ ಉಸ್ತುವಾರಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರಿಗೆ ವಹಿಸಲಾಗಿದ್ದು, ನಗರದ ಹಲವು ವಿಧಾನಸಭೆ ಕ್ಷೇತ್ರಗಳಲ್ಲಿ ಸಾಗಲಿದೆ. ಈ ಹಿಂದೆ ಮಲ್ಲೇಶ್ವರಂ ಕ್ಷೇತ್ರದಲ್ಲಿ ಪಾದಯಾತ್ರೆ ನಿಗದಿಯಾಗಿರಲಿಲ್ಲ. ಆದರೆ, ಎರಡನೇ ಹಂತದಲ್ಲಿ ಹೊಸದಾಗಿ ಮಲ್ಲೇಶ್ವರಂ ಕ್ಷೇತ್ರ ಸೇರಿಸಿಕೊಳ್ಳಲಾಗಿದೆ. ರಾಮನಗರದ ಕಾರ್ಯಕ್ರಮವೊಂದರಲ್ಲಿ ನಡೆದ ಡಿ.ಕೆ.ಸುರೇಶ್ ಹಾಗೂ ಡಾ.ಸಿ.ಎನ್.ಅಶ್ವತ್ಥನಾರಾಯಣ ನಡುವಿನ “ನೀನಾ-ನಾನಾ’ ಘರ್ಷಣೆ ನಂತರ ಮಲ್ಲೇಶ್ವರಂ ಸೇರ್ಪಡೆಯಾಗಿರುವುದ ಕುತೂಹಲ ಮೂಡಿಸಿದೆ.
ಜತೆಗೆ, ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿರುವ ಬಿ.ಕೆ.ಹರಿಪ್ರಸಾದ್ ಅವರು ಮಲ್ಲೇಶ್ವರಂನಲ್ಲೂ ಪಾದಯಾತ್ರೆ ನಡೆಯಬೇಕು ಎಂದು ಹಠ ಹಿಡಿದಿದ್ದರು ಎಂದೂ ಹೇಳಲಾಗಿದೆ.
ಕೊರೊನಾ ಮೂರನೇ ಅಲೆ ನಡುವೆಯೇ ಮೊದಲನೇ ಹಂತದ ಪಾದಯಾತ್ರೆ ನಡೆದಾಗ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯಷ್ಟೇ ಅಲ್ಲದೆ ಜೆಡಿಎಸ್ ಸಹ ಕಾಂಗ್ರೆಸ್ ನಾಯಕರ ಮೇಲೆ ಮುಗಿಬಿದ್ದಿತ್ತು. ಮೇಕೆದಾಟು ಯೋಜನೆಗೆ ಅನುಮತಿ ಪಡೆದದ್ದು ನಾನು ಮುಖ್ಯಮಂತ್ರಿಯಾಗಿದ್ದಾಗ. ನನ್ನ ಶ್ರಮವೂ ಇದೆ. ಆದರೆ, ಕ್ರೆಡಿಟ್‌ಗಾಗಿ ಕಾಂಗ್ರೆಸ್ -ಬಿಜೆಪಿ ಕಿತ್ತಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಇದರ ಬೆನ್ನಲ್ಲೇ ಜೆಡಿಎಸ್ ವತಿಯಿಂದಲೂ ಜಲಧಾರೆ ರಥಯಾತ್ರೆ ಘೋಷಿಸಿದ್ದರು. ಮಾರ್ಚ್ ಮೊದಲ ವಾರದಲ್ಲಿ ಆರಂಭಿಸಲು ಸಿದ್ಧತೆ ನಡೆಸಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಇದೀಗ ಎರಡನೇ ಹಂತದ ಪಾದಯಾತ್ರೆಗೆ ಮುಂದಾಗಿದೆ.
ಮೊದಲ ಹಂತದಲ್ಲಿ ಜ. 9 ರಿಂದ 12 ರವರೆಗೆ ಕನಕಪುರಿಂದ ಆರಂಭಿಸಿ ರಾಮನಗರದವರೆಗೆ 70 ಕಿ.ಮೀ. ನಡೆಸಲಾಗಿದ್ದ ಪಾದಯಾತ್ರೆ ಕೊರೊನಾ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಇದೀಗ ಫೆ.27 ರಂದು ಅಲ್ಲಿಂದಲೇ ಪುನರ್ ಆರಂಭಿಸಿ ಮಾರ್ಚ್ 3 ರವರೆಗೆ 80 ಕಿ.ಮೀ. ನಡೆಯಲಿದೆ.
ಇದು ಕುಡಿಯುವ ನೀರಿನ ಯೋಜನೆ. ಮಳೆಗಾಲದಲ್ಲಿ ಹರಿದು ಹೋಗಿ ಸಮುದ್ರ ಪಾಲಾಗುವ 67 ಟಿ.ಎಂ.ಸಿ ನೀರನ್ನು ಶೇಖರಿಸಿಟ್ಟು, ಬೆಂಗಳೂರು ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವುದು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದು ಯೋಜನೆಯ ಉದ್ದೇಶ. ಬೆಂಗಳೂರು ನಗರದ ಶೇ. 25 ಕ್ಕೂ ಹೆಚ್ಚು ಜನರಿಗೆ ಕಾವೇರಿ ನೀರು ಲಭ್ಯವಿಲ್ಲ. ಮೇಕೆದಾಟು ಯೋಜನೆ ಜಾರಿಯಾದರೆ ಬೆಂಗಳೂರು ನಗರಕ್ಕೆ ಮುಂದಿನ 50 ವರ್ಷಗಳ ವರೆಗೆ ಕುಡಿಯುವ ನೀರಿನ ಸಮಸ್ಯೆ ಇರಲ್ಲ. 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದರಿಂದ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕೆಗಳಿಗೆ ವಿದ್ಯುತ್ ಸಮಸ್ಯೆ ಕೂಡ ಆಗಲ್ಲ ಎಂಬುದನ್ನು ಪಾದಯಾತ್ರೆಯಲ್ಲಿ ಪ್ರತಿಪಾದಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಪಾದಯಾತ್ರೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಲ್ಲ. ಯಶಸ್ವಿಯಾಗಿ ನಡೆದೇ ತೀರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೆಹಲಿಯಲ್ಲೂ ಜಂಟಿಯಾಗಿ ಘೋಷಿಸಿದ್ದಾರೆ.
ನಮ್ಮ ಸರ್ಕಾರ ಮೇಕೆದಾಟು ಯೋಜನೆಗೆ 2017 ರಲ್ಲಿ ವಿಸ್ತೃತ ಯೋಜನಾ ವರದಿ ತಯಾರಿಸಿ, ಕೇಂದ್ರ ಜಲಮಂಡಳಿಗೆ ನೀಡಿದ್ದೆವು. ಅವರು ಕೆಲವು ಮಾಹಿತಿ ಕೇಳಿ ರಾಜ್ಯಕ್ಕೆ ವಾಪಸ್ ಕಳಿಸಿದ್ದರು, ಆಗ ನಮ್ಮ ಸರ್ಕಾರ ಇರಲಿಲ್ಲ, ಸಮ್ಮಿಶ್ರ ಸರ್ಕಾರ ಇತ್ತು. ಡಿ.ಕೆ ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದರು, ಅವರು ಕೇಂದ್ರ ಜಲಮಂಡಳಿ ಕೇಳಿದ್ದ ಹೆಚ್ಚಿನ ಮಾಹಿತಿಯನ್ನು ಒದಗಿಸಿದ್ದರು ಮತ್ತು ಪರಿಷ್ಕೃತ ಯೋಜನಾ ವರದಿ ಮಾಡಿ ಕಳಿಸಿದ್ದರು. ಇನ್ನುಳಿದಿರೋದು ಪರಿಸರ ಅನುಮತಿ ಮಾತ್ರ. 2019 ರಿಂದ ಅಧಿಕಾರದಲ್ಲಿರುವ ಬಿಜೆಪಿಗೆ ಪರಿಸರ ಅನುಮತಿ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ, ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ.– ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ನಾನು ಜಲ ಸಂಪನ್ಮೂಲ ಸಚಿವನಾಗಿದ್ದ ಸಮಯದಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ನಂತರ ಸಂಸತ್ತಿನ ಉಭಯ ಸದನಗಳಲ್ಲಿ ತಮಿಳುನಾಡಿನ ಸಂಸದರು ಪ್ರತಿಭಟನೆ ಮಾಡಿದ್ದರು. ನಾನು ದೆಹಲಿಯಲ್ಲಿ ಬಿಜೆಪಿಯ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ದೆಹಲಿಯ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಿದಾಗ ಬಿಜೆಪಿಯ ನಾಯಕರಾದ ನಳೀನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಕೂಡ ನಮ್ಮ ಜತೆ ಪ್ರತಿಭಟನೆ ಮಾಡಿದ್ದರು. ಅಂದು ನಮ್ಮ ಜತೆ ಹೋರಾಟ ಮಾಡಿದವರು ಇಂದು ಯೋಜನೆ ಜಾರಿ ವಿಚಾರದಲ್ಲಿ ಮೌನವಾಗಿರುವುದೇಕೆ. ಈವರೆಗೂ ಯಾಕೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ. ಕುಡಿಯುವ ನೀರಿನ ಯೋಜನೆಗೆ ಯಾವುದೇ ಅನ್ಯರಾಜ್ಯಗಳ ಅನುಮತಿ ಬೇಕಾಗಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶವಿದೆ ಎಂಬುದನ್ನು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ವಿಳಂಬ ಏಕೆ ಎಂದು ಅರ್ಥವಾಗುತ್ತಿಲ್ಲ.
-ಡಿ.ಕೆ.ಶಿವಕುಮಾರ್ , ಕೆಪಿಸಿಸಿ ಅಧ್ಯಕ್ಷ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗುತ್ತಿದ್ದು,ಬೆಂಗಳೂರಿನಲ್ಲಿರುವ ಒಂದೂವರೆ ಕೋಟಿ ಜನರ ಪೈಕಿ ಕೇವಲ ಶೇ.30 ರಿಂದ 40ರಷ್ಟು ಜನರಿಗೆ ಮಾತ್ರ ಕಾವೇರಿ ನೀರು ಕುಡಿಯಲು ಸಿಗುತ್ತಿದೆ. ಉಳಿದ ಶೇ.60 ರಿಂದ 70 ರಷ್ಟು ಜನರಿಗೆ ಕುಡಿಯಲು ಕಾವೇರಿ ನೀರು ಸಿಗುತ್ತಿಲ್ಲ. ಹೀಗಾಗಿ, ರಾಜಧಾನಿಯ ಜನರಿಗೆ ಕುಡಿಯುವ ನೀರಿಗಾಗಿ ನಮ್ಮ ನಡಿಗೆ.
– ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಾಗೃತಿ ವಾಹನ
ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಮೇಕೆದಾಟು ಪಾದಯಾತ್ರೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಂಚಾರಿ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಯೋಜನೆಯ ಹಿನ್ನೆಲೆ, ಅದರಿಂದ ಆಗುವ ಪ್ರಯೋಜನ. ಕಾಂಗ್ರೆಸ್ ಸರ್ಕಾರದಲ್ಲಿ ಕೈಗೊಂಡ ಕ್ರಮ. ಪ್ರಸ್ತುತ ಪರಿಸ್ಥಿತಿ ಎಲ್ಲದರ ಬಗ್ಗೆ ಜನರಿಗೆ ಮಾಹಿತಿ ನೀಡಲು ಪ್ರಚಾರ ಸಮಿತಿ ಸಿದ್ಧತೆ ಮಾಡಿಕೊಂಡಿದೆ. ಪಾದಯಾತ್ರೆ ಸಾಗಿ ಬರುವ ಮಾರ್ಗಗಳಲ್ಲಿ ಜಾಗೃತಿ ವಾಹನಗಳು ಸಂಚರಿಸಲಿವೆ. ಪ್ರಚಾರ ಸಮಿತಿ ಅಧ್ಯಕ್ಷರಾದ ಮನೋಹರ್ ಹಾಗೂ ಜಯಸಿಂಹ, ಜನಾರ್ಧನ ಇದರ ಉಸ್ತುವಾರಿ ವಹಿಸಿದ್ದಾರೆ.