ಬೆಂಗಳೂರು: “ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ನ ಮಾನವನ್ನು ರಸ್ತೆ ಗಳಲ್ಲಿ ಹರಾಜು ಹಾಕಿ’ ಎಂದು ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲವು ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಅಡ್ಡಿಯಾಗುವ ಮೂಲಕ ಆ ಸಮುದಾಯದ ಬಗ್ಗೆ ಕಾಂಗ್ರೆಸ್‌ಗೆ ಇದ್ದ ಢೋಂಗಿ ಕಾಳಜಿ ಬಯಲಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗಕ್ಕೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗ ದಂತೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕು ಎಂಬ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಆ ನಿಟ್ಟಿನಲ್ಲಿ ವಿಧೇಯಕ ರೂಪಿಸಿ ಲೋಕಸಭೆಯಲ್ಲಿ ಅಂಗೀಕರಿಸ ಲಾಯಿತು. ಆದರೆ, ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಬಹುಮತ ಇಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಹುನ್ನಾರ ನಡೆಸಿ ವಿಧೇಯಕ ಅಂಗೀಕಾರವಾಗದಂತೆ ನೋಡಿ ಕೊಂಡಿತು. ಆ ಮೂಲಕ ಹಿಂದು ಳಿದ ವರ್ಗಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ನಿಜ ಬಣ್ಣ ಬಯಲಾಗಿದ್ದು, ಅದನ್ನು ರಸ್ತೆಯಲ್ಲಿ ಹರಾಜು ಹಾಕಲು ಕಾರ್ಯಕರ್ತರು ಮುಂದಾಗಬೇಕು ಎಂದರು.
ಸರ್ಕಾರ ದಿವಾಳಿಯಾಗಿದೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ರೈತರ ಸಾಲ ಮನ್ನಾ ಮಾಡಿ ಅದಕ್ಕೆ ಒದಗಿಸಲು ಹಣವಿಲ್ಲದೆ ಮೈಸೂರು ಮಿನರಲ್ಸ್‌ನ 1400 ಕೋಟಿ ರೂ. ಬಲವಂತವಾಗಿ ಕಿತ್ತುಕೊಳ್ಳಲು ನಡೆಸಿದ ಪ್ರಯತ್ನ, ಬೆಂಗಳೂರಿನಲ್ಲಿ ಮೂಲೆ ನಿವೇಶನಗಳನ್ನು ಒತ್ತೆಯಿಟ್ಟು 900 ಕೋಟಿ ಸಾಲ ಪಡೆದಿದ್ದಲ್ಲದೆ ಮತ್ತೆ ಬಾಕಿ ಪಾವತಿಗೆ 700 ಕೋಟಿ ಸಾಲ ಮಾಡಲು ಹೊರಟಿರುವುದು ಇದಕ್ಕೆ ಉದಾಹರಣೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕಾಂಗ್ರೆಸ್‌ನ ಡಿ.ಎಂ.ಸಾಲಿ, ಕಾಂಗ್ರೆಸ್ ಎಸ್‌ಸಿ ಘಟಕದ ಸಹ ಸಂಚಾಲಕ ರವಿ ಜಲ್ದಾರ್, ಭದ್ರಾವತಿ ಐವಿಎಸ್‌ಎಲ್ ಪ್ರಧಾನ ವ್ಯವಸ್ಥಾಪಕ ಪುಟ್ಟಸ್ವಾಮಿಗೌಡ, ಹಾವೇರಿ ಜೆಡಿಎಸ್ ಉಪಾಧ್ಯಕ್ಷ ಎ.ಬಿ.ಮಾಳಗಿ ಸೇರಿದಂತೆ 14ಕ್ಕೂ ಹೆಚ್ಚು ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಇದೇ ವೇಳೆ ಬಿಜೆಪಿ ಸೇರಿದರು.
ಮಾಜಿ ಸಚಿವ ಸಿ.ಎಂ.ಉದಾಸಿ, ಶಾಸಕರಾದ ಬಸವ ರಾಜ ಬೊಮ್ಮಾಯಿ, ಶಿವನಗೌಡ ನಾಯಕ್, ತಿಪ್ಪರಾಜು ಹವಾಲ್ದಾರ್, ಗುರು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಯು.ಬಿ.ಬಣಕಾರ್, ವಿಶ್ವನಾಥ್ ಪಾಟೀಲ್, ಡಿ.ಎಸ್.ವೀರಯ್ಯ, ರಘುನಾಥರಾವ್ ಮಲ್ಕಾಪುರೆ, ಮಾಜಿ ಶಾಸಕ ಬಸವನಗೌಡ ಬ್ಯಾಗೋಟ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಎನ್.ರವಿಕುಮಾರ್ ಮತ್ತಿತರರಿದ್ದರು.