Advertisement

360 ಡಿಗ್ರಿ ಬ್ರ್ಯಾಂಡಿಂಗ್‌ ಪ್ರಚಾರ ನಡೆಸಲು ಕಾಂಗ್ರೆಸ್‌ ಮುಖಂಡರಿಗೆ ಟಾಸ್ಕ್

11:25 PM Jan 27, 2023 | Team Udayavani |

ಬೆಂಗಳೂರು: ಬೇರು ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುತ್ತಿರುವ ಕಾಂಗ್ರೆಸ್‌ ಈಗ ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಮತ್ತು ಬಿಜೆಪಿ ಸರಕಾರದ ವೈಫ‌ಲ್ಯಗಳನ್ನು ಜನರಿಗೆ ತಲುಪಿಸುವಂತೆ ಸ್ಥಳೀಯ ಮುಖಂಡರಿಗೆ ಸೂಚನೆ ಕೊಟ್ಟಿದೆ. ಜತೆಗೆ 360 ಡಿಗ್ರಿ ಬ್ರ್ಯಾಂಡಿಂಗ್‌ ಪ್ರಚಾರ ನಡೆಸಲು ಟಾಸ್ಕ್ ನೀಡಿದೆ.

Advertisement

ಮಂಡ್ಯ ಪ್ರಜಾಧ್ವನಿ ಯಾತ್ರೆ ಬಳಿಕ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಕೈ ಮುಖಂಡರ ಸಭೆ ನಡೆಸಿದ ಕಾಂಗ್ರೆಸ್‌ ರಾಜ್ಯಉಸ್ತುವಾರಿ ರಣದೀಪ್‌ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಫೆ.3ರಿಂದ ಮಾರ್ಚ್‌ 10ರ ವರೆಗೆ ಪ್ರತಿ ವಿಧಾನ ಸಭಾಕ್ಷೇತ್ರಗಳಲ್ಲಿ ಪ್ರತಿ ಮನೆ ಮನೆಗೆ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯ ಕರಪತ್ರಗಳನ್ನು ಹಂಚುವಂತೆ ಟಿಕೆಟ್‌ ಆಕಾಂಕ್ಷಿಗಳಿಗೆ, ಜಿಲ್ಲಾ ಮತ್ತು ಬ್ಲಾಕ್‌ ಕಾಂಗ್ರೆಸ್‌ ಮುಖಂಡರಿಗೆ ಸಲಹೆ ನೀಡಿದರು.

ಜತೆಗೆ 50 ಸದಸ್ಯರ ತಂಡ ಪ್ರತಿ ದಿನ 2,500 ಮನೆಗೆ ಭೇಟಿ ನೀಡಿ 30 ಕ್ಷೇತ್ರಗಳಲ್ಲಿ ತಲಾ 75 ಸಾವಿರ ಮನೆಗಳನ್ನು ತಲುಪಬೇಕು. ಪ್ರತಿ ಯೊಂದು ಮನೆಯಲ್ಲಿ ಸದಸ್ಯರ ನೋಂದಣಿ ಮಾಡಬೇಕು ಎಲ್ಲ ಹಂತದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿ ಕೊಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ಸಮುದಾಯದ ಮನೆಗಳಿಗೆ ಭೇಟಿ ನೀಡಿ ಸಮಾಲೋಚಿಸಬೇಕು. ಸ್ಥಳೀಯ ಪ್ರಭಾವಿ ವ್ಯಕ್ತಿಗಳನ್ನು ಪಕ್ಷಕ್ಕೆ ಕರೆತರಬೇಕು ಎಂದು ಸೂಚಿಸಿದರು.

ಮಿಸ್ಡ್ ಕಾಲ್‌ ನೋಂದಣಿ ಮಾಡಿಕೊಂಡವರಿಗೂ ಸಂಪೂರ್ಣ ಮಾಹಿತಿ ನೀಡಬೇಕು. ಕಾಂಗ್ರೆಸ್‌ ಸ್ಟಿಕ್ಕರ್‌ ಅನ್ನು ಪ್ರತಿ ಮನೆ ಬಾಗಿಲಿಗೆ ಅಂಟಿಸಬೇಕು. ಪ್ರತಿ 10 ಬೂತ್‌ಗೆ ಒಂದು ನೋಂದಣಿ ಕೇಂದ್ರ ಸ್ಥಾಪಿಸಬೇಕು. ಪ್ರತಿ ಗ್ರಾಮ ಮತ್ತು ವಾರ್ಡ್‌ ವ್ಯಾಪ್ತಿಯಲ್ಲಿ ಕನಿಷ್ಠ ಎರಡು ಸಭೆಗಳನ್ನು ಆಯೋಜಿಸಬೇಕು ಎಂದು ತಾಕೀತು ಮಾಡಿದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 360 ಡಿಗ್ರಿ ಬ್ರ್ಯಾಂಡಿಂಗ್‌ ಪ್ರಚಾರ ನಡೆಸಬೇಕು. ಕಾಂಗ್ರೆಸ್‌ನ ಗ್ಯಾರಂಟಿ ಪ್ರಚಾರದಲ್ಲಿ ನಾಯಕರು ಮುಂದಾಗಬೇಕು. ಬ್ರ್ಯಾಂಡಿಂಗ್‌ ಕುರಿತ ವಿವರಗಳನ್ನು ಲೋಕಸಭಾ ಕ್ಷೇತ್ರದ ಎಐಸಿಸಿ ಸಮನ್ವಯಕಾರರರು/ ಕೆಪಿಸಿಸಿ ಉಪಾಧ್ಯಕ್ಷರು/ ಪ್ರಧಾನ ಕಾರ್ಯದರ್ಶಿಗಳು, ಕ್ಷೇತ್ರವಾರು ಸಮನ್ವಯಕಾರರು, ಶಾಸಕರು, ಜಿಲ್ಲಾ ಮತ್ತು ಬ್ಲಾಕ್‌ಅಧ್ಯಕ್ಷರು ಈ ಎಲ್ಲ ಚಟುವಟಿಕೆಗಳನ್ನು ಕಾರ್ಯ ರೂಪಕ್ಕೆ ತರಬೇಕು ಎಂದು ಖಡಕ್‌ ಸೂಚನೆ ನೀಡಲಾಯಿತು.

Advertisement

ಪ್ರಣಾಳಿಕೆ ಪ್ರಚಾರ ಮಾಡಿ
ಡಿಜಿಟಲ್‌ ಮತ್ತು ಗೋಡೆ ಚಿತ್ರಗಳ ಮೂಲಕ ಪ್ರಣಾಳಿಕೆ ಪ್ರಚಾರ ಮಾಡಬೇಕು, ಪ್ರತಿ ಗ್ರಾಮಗಳಲ್ಲಿ ಫ್ಲೆಕ್ಸ್‌ ಮೂಲಕ ಪಕ್ಷದ ಭರವಸೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಜಗಲಿ ಕಟ್ಟೆ ಸಭೆ ನಡೆಸಿ ಸ್ತ್ರೀ ಸ್ವ ಸಹಾಯ ಸಂಘ, ಅಂಗನವಾಡಿ ಕಾರ್ಯಕರ್ತೆಯರು ಕಾಂಗ್ರೆಸ್‌ನ ಭರವಸೆಗಳನ್ನು ಮಹಿಳೆಯರಿಗೆ ವಿವರಿಸುವಂತೆ, ಬೀದಿ ನಾಟಕ ಮತ್ತು ಆಟೋ ಮೂಲಕ ಪ್ರಚಾರ ಮಾಡುವಂತೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next