ತೀರ್ಥಹಳ್ಳಿ: ಗಾಂಧಿ ಜಯಂತಿಯಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು, ನೂರಾರು ಕಾರ್ಯಕರ್ತರು ಈ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆತಂದಿರುವ ಭೂ ಸುಧಾರಣೆ, ಕಾರ್ಮಿಕ, ಎಪಿಎಂಸಿ ಮಸೂದೆ ತಿದ್ದುಪಡಿ ವಿರೋಧಿಸಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಕಿಮ್ಮನೆ ರತ್ನಾಕರ್ ಮಾತನಾಡಿ, ವಿಶ್ವದಲ್ಲಿ ಗಾಂ ಧಿ ಮೇರು ವ್ಯಕ್ತಿ. ತಮ್ಮ ಬದುಕನ್ನು ದೇಶಕ್ಕೆ ಮೀಸಲಿಟ್ಟ ಮಹಾನ್ ನಾಯಕ. ಆದರೆ ಬಿಜೆಪಿಗೆ ಗಾಂಧಿ ಕೊಲೆ ಮಾಡಿದ ಗೋಡ್ಸೆ ಹೀರೋ. ಬಿಜೆಪಿ ಜನರ ಬದುಕು, ಜೀವನ, ಅಭಿವೃದ್ಧಿ ಬದಲು ಧರ್ಮ, ಜಾತಿ ಹೆಸರಲ್ಲಿ ರಾಜಕೀಯ ಮಾಡುವ ಶ್ರೀಮಂತರ ಪರವಾದ ಪಕ್ಷ ಎಂದು ಆರೋಪಿಸಿದರು.
ಅಂಬೇಡ್ಕರ್ ಹಿಂದೂ ಧರ್ಮ ಬಿಟ್ಟಿದ್ದೇಕೆ ಎಂಬ ಬಗ್ಗೆ ಬಿಜೆಪಿ ಬಳಿ ಉತ್ತರ ಇಲ್ಲ. ಸೋಫಾ ಮೇಲೆ ನಾಯಿ ಕೂರಿಸಿಕೊಳ್ಳುವ ಈ ಜನ ದಲಿತರು, ಬಡವರನ್ನು ಮನೆಯೊಳಗೇ ಸೇರಿಸಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಗಾಂಧಿ ಗೆ ಇನ್ನೆರಡು ಗುಂಡು ಹೊಡಿಬೇಕಿತ್ತು ಅಂತಾರೆ. ಮತ್ತೂಬ್ಬ ನಾಯಕ ಅನಂತ್ ಕುಮಾರ್ ಹೆಗಡೆ ಗಾಂಧಿ ಸಾಯಿಸಿದ್ದು ಒಳ್ಳೆಯದೇ ಆಯಿತು ಎನ್ನುತ್ತಾರೆ. ಗಾಂಧಿ ಕೊಲೆಯ ಆರೋಪಿಗೆ ಭಾರತ ರತ್ನಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ದೇಶದ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಏನೂ ಇಲ್ಲ. ಜನ ಬೇಸತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರಲಿದೆ ಎಂದರು.
ಮಾಧ್ಯಮಗಳು ಈಗ ಮಾರಾಟವಾಗಿವೆ. ಜನ ಊಟ, ಉದ್ಯೋಗ ಇಲ್ಲದೆ ಸಾಯುತ್ತಿದ್ದಾರೆ. ಸರ್ಕಾರ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಜನತೆಗೆ ನ್ಯಾಯ ಕೊಡಬೇಕಾದ ಮಾಧ್ಯಮಗಳು ರಾಗಿಣಿ, ಸಂಜನಾ ತೋರಿಸುತ್ತಾ ಜನರ ದಿಕ್ಕು ತಪ್ಪಿಸುತ್ತಿವೆ. ನಮಗೆ ರಾಗಿಣಿ, ಸಂಜನಾ ಹಾಡು ಕುಣಿತ ಬೇಕಾ? ಒಂದು ನಿಮಿಷ ಕೂಡ ಕಾಗೋಡು ಹೋರಾಟ ತೋರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ನಾರಾಯಣ ರಾವ್, ಕೆಸ್ತೂರು ಮಂಜುನಾಥ್, ಮುಡುಬ ರಾಘವೇಂದ್ರ, ಭಾರತಿ ಬಾಳೇಹಳ್ಳಿ ಪ್ರಭಾಕರ್, ಕಲ್ಪನಾ ಪದ್ಮನಾಭ, ಬಾಳೆಹಳ್ಳಿ ಪ್ರಭಾಕರ್, ಪದ್ಮನಾಭ, ಬಂಡೆ ವೆಂಕಟೇಶ್, ಕೇಳೂರು ಮಿತ್ರ, ಮಳಲೇಕೊಪ್ಪ ಧರಣೇಶ್, ಪಡುವಳ್ಳಿ, ಮಹಾಬಲೇಶ್, ಗೀತಾ ರಮೇಶ್, ಆದರ್ಶ ಹುಂಚದಕಟ್ಟೆ, ಸಂದೀಪ್ ಕುಡುಮಲ್ಲಿಗೆ, ವಾದಿರಾಜ್ ಭಟ್, ಪ್ರಶಾಂತ್ ಪ್ರಭು, ನೆಂಪೆ ದೇವರಾಜ್, ನಿಶ್ಚಲ್ ಜಾದೂಗಾರ, ರಾಘವೇಂದ್ರ , ಫಣಿರಾಜ್ ಕಟ್ಟೆಹಕ್ಕಲು, ಪೂರ್ಣೆàಶ್ ಕೆಳಕೆರೆ ಇತರರು ಇದ್ದರು.