Advertisement

ಇಂದು ದಿಲ್ಲಿಗೆ ಕಾಂಗ್ರೆಸ್‌ ನಾಯಕರ ದಂಡು; ನಾಳೆ ಖರ್ಗೆ, ರಾಹುಲ್‌ ಗಾಂಧಿ ಜತೆ ಸಭೆ

08:45 PM Jul 31, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಹೈಕಮಾಂಡ್‌ ಬುಧವಾರ ನಿಗದಿಪಡಿಸಿರುವ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲು ಪಕ್ಷದ ಹಿರಿಯ ನಾಯಕರು ಹಾಗೂ ಸಚಿವರ ದಂಡು ಮಂಗಳವಾರವೇ ದಿಲ್ಲಿಗೆ ಹಾರಲಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಸಚಿವರು ಬುಧವಾರ ಬೆಳಿಗ್ಗೆ ತೆರಳಲಿದ್ದಾರೆ.

Advertisement

ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದ ಬಳಿಕ ಇದೇ ಮೊಟ್ಟ ಮೊದಲ ಬಾರಿಗೆ ಹೈಕಮಾಂಡ್‌ ದಿಲ್ಲಿಯಲ್ಲಿ ರಾಜ್ಯದ ಹಿರಿಯ ನಾಯಕರು, ಸಚಿವರು ಹಾಗೂ ಸಂಸದರ ಸಭೆ ನಡೆಸುತ್ತಿದೆ. ಲೋಕಸಭಾ ಚುನಾವಣೆಗೆ ತಯಾರಿ ಜತೆಗೆ ಎರಡೂವರೆ ತಿಂಗಳ ಅವಧಿಯಲ್ಲಿ ಸಚಿವರು ತಮ್ಮ ತಮ್ಮ ಇಲಾಖೆಗಳಲ್ಲಿ ಮಾಡಿರುವ ಅಭಿವೃದ್ಧಿ -ಪ್ರಗತಿ ಕಾರ್ಯಗಳ ಅವಲೋಕನ ನಡೆಸಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಸಿ.ವೇಣುಗೋಪಾಲ್‌, ರಣದೀಪ್‌ಸಿಂಗ್‌ ಸುರ್ಜೇವಾಲ ಅವರ ಸಮ್ಮುಖದಲ್ಲಿ ನಡೆಯಲಿರುವ ಸಭೆಗೆ ಸಚಿವರು ಸಾಕಷ್ಟು ತಯಾರಿ (ರಿಪೋರ್ಟ್‌ ಕಾರ್ಡ್‌) ಮಾಡಿಕೊಂಡಿದ್ದಾರೆ.

ಇಲಾಖಾ ಪ್ರಗತಿ ವರದಿ ಕೊಡುವಂತೆ ಹೈಕಮಾಂಡ್‌ ಸೂಚಿಸಿರುವುದಕ್ಕೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸೇರಿದಂತೆ ಹಲವರು ಅಪಸ್ವರ ತೆಗೆದಿದ್ದಾರೆ. ಆದರೂ ಬಹುತೇಕ ಸಚಿವರು ರಿಪೋರ್ಟ್‌ಕಾರ್ಡ್‌ ಸಲ್ಲಿಸಲು ಈಗಾಗಲೇ ವರದಿ ಸಿದ್ಧಪಡಿಸಿಕೊಂಡಿದ್ದಾರೆ. ಈ ಮಧ್ಯೆ ಕೆಲವು ಸಚಿವರು ಪ್ರತ್ಯೇಕವಾಗಿ ಹೈಕಮಾಂಡ್‌ ಭೇಟಿಗೆ (ರಾಹುಲ್‌ ಗಾಂಧಿ) ಸಮಯ ಕೋರಿದ್ದಾರೆಂದು ತಿಳಿದುಬಂದಿದೆ.ಆದರೆ, ಇದನ್ನು ಅಧಿಕೃತವಾಗಿ ಯಾರೂ ಖಚಿತಪಡಿಸುತ್ತಿಲ್ಲ.

ಹೈಕಮಾಂಡ್‌ ಭೇಟಿ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರು ತಮ್ಮನ್ನು ಕಾರ್ಯಾಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಿ ಮತ್ತೂಬ್ಬರಿಗೆ ಅವಕಾಶ ಕಲ್ಪಿಸುವಂತೆ ಕೋರುವ ಸಾಧ್ಯತೆಗಳಿವೆ. ಎರಡೆರಡು ಜವಾಬ್ದಾರಿಗಳನ್ನು ನಿರ್ವಹಿಸುವುದು ಕಷ್ಟ ಎಂದು ಅವರೇ ಹೇಳಿಕೊಂಡಿದ್ದಾರೆ.

ಈ ಭೇಟಿ ವೇಳೆ ಸರ್ಕಾರದ 5 ಗ್ಯಾರಂಟಿಗಳ ಅನುಷ್ಠಾನದ ಸಾಧಕ ಬಾಧಕಗಳು, ಜನರ ಸ್ಪಂದನೆ ಹೇಗಿದೆ? ಎರಡೂವರೆ ತಿಂಗಳಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ಜತೆಗೆ ಸರ್ಕಾರ ಹಾಗೂ ಸಚಿವರ ಮಟ್ಟದಲ್ಲಿ ಸೃಷ್ಟಿಯಾದ ವಿವಾದಗಳು, ವರ್ಗಾವಣೆ ದಂಧೆ ಆರೋಪಗಳ ಬಗ್ಗೆ ಯೂ ಚರ್ಚೆಯಾಗುವ ಸಾಧ್ಯತೆಗಳಿವೆ. ಜತೆಗೆ ಲೋಕಸಭಾ ಚುನಾವಣೆಯ ಜವಾಬ್ದಾರಿಯನ್ನು ಸಚಿವರಿಗೆ ವಹಿಸುವ ಬಗ್ಗೆ ಚರ್ಚೆಯಾಗಲಿದೆ.

Advertisement

ನಿಗಮ, ಮಂಡಳಿ ನೇಮಕ: ಈ ಭೇಟಿ ವೇಳೆ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ವಿವಿಧ ನಿಗಮ, ಮಂಡಳಿಗಳ ನೇಮಕದ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಸಚಿವ ಸ್ಥಾನ ವಂಚಿತ ಶಾಸಕರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಕಲ್ಪಿಸಲು ಸಿಎಂ ಬಯಸಿದ್ದರೆ, ಈ ನೇಮಕಾತಿಯನ್ನು ಪಕ್ಷದ ಮುಖಂಡರು/ಕಾರ್ಯಕರ್ತರಿಗೆ ಮೀಸಲಿಡುವುದು ಸೂಕ್ತವೆಂಬುದು ಡಿ.ಕೆ.ಶಿವಕುಮಾರ್‌ ನಿಲುವಾಗಿದೆ. ಈ ಮಧ್ಯೆ ಹೈಕಮಾಂಡ್‌ನ‌ದು 50:50 ಲೆಕ್ಕಾಚಾರವಾಗಿದೆ. ನೇಮಕಾತಿ ಮಾಡಬಹುದಾದ ನಿಗಮ-ಮಂಡಳಿಗಳ ಪಟ್ಟಿಯಲ್ಲಿ ಅರ್ಧದಷ್ಟು ಶಾಸಕರಿಗೆ ಉಳಿದ ಅರ್ಧದಷ್ಟು ಕಾರ್ಯಕರ್ತರಿಗೆ ಎಂಬುದು ಹೈಕಮಾಂಡ್‌ ಲೆಕ್ಕಾಚಾರವಾಗಿದೆ. ಈ ಬಗ್ಗೆ ಅಂತಿಮ ನಿರ್ಣಯ ಹೈಕಮಾಂಡ್‌ ಜತೆಗಿನ ಸಭೆ ಬಳಿಕ ಹೊರಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next