Advertisement

ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕಾಂಗ್ರೆಸ್‌ ಮುಖಂಡರೇ ಕಾರಣ

09:38 PM Apr 02, 2019 | Team Udayavani |

ಬೇಲೂರು: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಬೆಳೆಯಲು ಕಾಂಗ್ರೆಸ್ಸಿನ ಹಿರಿಯ ಮುಖಂಡರೇ ಕಾರಣವಾಗಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಆಪಾದಿಸಿದರು.

Advertisement

ತಾಲೂಕಿನ ಗೆಂಡೇಹಳ್ಳಿಯಲ್ಲಿ ಜೆಡಿಎಸ್‌ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಇಂದು ಬಿಜೆಪಿ ಪಕ್ಷ ಇಷ್ಟು ಪ್ರಬಲ ವಾಗಲು ಕಾಂಗ್ರೆಸ್‌ ಮುಖಂಡರಾದ ಬಂಗಾರಪ್ಪ, ರಾಜಶೇಖರಮೂರ್ತಿ, ಬಿಜೆಪಿ ಪಕ್ಷಕ್ಕೆ ಹೋಗಿದ್ದೇ ಕಾರಣ ಎಂದರು.

ಬಿಜೆಪಿಯೊಂದಿಗೆ ಕುಮಾರಸ್ವಾಮಿ ಕೈ ಜೋಡಿಸಿ ಮುಖ್ಯ ಮಂತ್ರಿಯಾಗಿದ್ದು ನನಗೆ ಎಂದೂ ಮರೆಯಲಾಗದ ನೋವು ಎಂದರು. ನನ್ನ ರಾಜಕೀಯ ಜೀವನದಲ್ಲಿ ಕೋಮುವಾದಿ ಶಕ್ತಿಗಳೊಂದಿಗೆ ಎಂದೂ ರಾಜಿ ಮಾಡಿಕೊಂಡಿಲ್ಲ ಎಂದು ಹೇಳಿದರು.

ಅವರು ಭಾರತೀಯ ಜನತಾ ಪಕ್ಷವನ್ನು ಮಣಿಸಲು ಜೆಡಿಎಸ್‌ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಂಡಿದ್ದು, ಮತದಾರರು ಪಕ್ಷವನ್ನು ಗೆಲ್ಲಿಸಲೇ ಬೇಕಾದ ಅನಿವಾರ್ಯತೆ ಇದ್ದು ದೇಶದ ಸಮಗ್ರತೆಗೆ ತಾವೆಲ್ಲರೂ ಕೈಗೊಡಿಸಬೇಕೆಂದು ಮನವಿ ಮಾಡಿದರು.

ಅಧಿಕಾರದ ದುರಾಸೆಯಿಲ್ಲ: ಕಳೆದ ವಿಧಾನ ಸಭಾ ಚುನಾವಣೆಯ ನಂತರ ಕಾಂಗ್ರೆಸ್‌ ಹಿರಿಯ ಮುಖಂಡರು 37ಶಾಸಕರನ್ನು ಹೊಂದಿರುವ ಜೆಡಿಎಸ್‌ ಮುಖಂಡನಾದ ನನ್ನನ್ನು ಭೇಟಿ ಮಾಡಿ ಕುಮಾರಸ್ವಾಮಿಯನ್ನು ಮುಖ್ಯ ಮಂತ್ರಿ ಮಾಡುತ್ತೇವೆ ಎಂದಾಗ ಕೋಮುವಾದಿ ಪಕ್ಷ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬ ಒಂದೇ ಉದ್ದೇಶದಿಂದ ಒಪ್ಪಿಕೊಂಡೆನೇ ಹೊರತು ಇದರಲ್ಲಿ ಅಧಿಕಾರದ ದುರಾಸೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಹಿಂದುಳಿದವರಿಗೆ ಮೀಸಲಾತಿ: ಜೆಡಿಎಸ್‌ ಅಧಿಕಾರದ ಅವಧಿಯಲ್ಲಿ ಹಿಂದೂಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ ಕೀರ್ತಿ ನಮ್ಮದು ಎಸ್ಸಿ,ಎಸ್ಟಿ , ಮುಸ್ಲಿಂ, ಲಿಂಗಾಯತ, ಕುರುಬ ಎಂಬ ಭೇದಭಾವ ಮಾಡದೆ ಎಲ್ಲಾ ಸಮುದಾಯಕ್ಕೂ ರಾಜಕೀಯ ಅಧಿಕಾರ ನೀಡಿದ್ದೇನೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಾರಿಗೆ ತಂದಿದ್ದೇವೆ ಎಂದರು.

ಮೋದಿ ವಿರುದ್ಧ ಪ್ರಾದೇಶಿಕ ಪಕ್ಷಗಳ ಹೋರಾಟ: ಜಾತ್ಯತೀತ ರಾಷ್ಟ್ರ ಭಾರತದ ಭದ್ರತೆಗಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಸೋನಿಯಾಗಾಂಧಿ ಕಂಕಣ ಬದ್ಧರಾಗಿದ್ದು ಮೋದಿಯ ದುರಾಡಳಿತದ ವಿರುದ್ಧಹೋರಾಟ ನಡೆಸುತ್ತಿದ್ದು, ಈ ಹೋರಾಟಕ್ಕೆ ಪ್ರಾಧೇಶಿಕ ಪಕ್ಷಗಳ ಮುಖಂಡರಾದ ಮಯಾವತಿ, ಅಖೀಲೇಶ್‌, ಮಮತಾಬ್ಯಾನರ್ಜಿ, ಚಂದ್ರಬಾಬುನಾಯ್ಡು, ಇನ್ನಿತರೆ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದು ಇವರೊಂದಿಗೆ ಜೆಡಿಎಸ್‌ ಪಕ್ಷವೂ ಸಹ ಕೈ ಜೋಡಿಸಿದೆ ಎಂದರು.

ಹಿಂದೂ ರಾಷ್ಟ್ರ ಕನಸು ನನಸಾಗದು: ಪ್ರಧಾನಿ ನರೇಂದ್ರ ಮೋದಿ ಭಾರತ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇನೆ ಎಂದು ಪದೇ ಪದೇ ಹೇಳುತಿದ್ದಾರೆ. ದೇಶದ ಜಾತ್ಯತೀತ ರಾಷ್ಟ್ರವಾಗಿದ್ದು ಹಿಂದೂ, ಮುಸ್ಲಿಂ, ಕ್ರಿಸ್ತನ್‌, ಪಾರಸಿ, ಜೈನ, ಸಿಖ್‌ ಸಮುದಾಯಗಳು ದೇಶದ ಭದ್ರ ಬುನಾದಿ ಯಾಗಿದ್ದು ಇವೆಲ್ಲವೂಗಳನ್ನು ಕಡೆಗಣಿಸಿ ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದರು. ಇಂದು ಕಾಶ್ಮೀರದ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ನಾನು ಪ್ರದಾನಿಯಾಗಿದ್ದಾಗ ಅನೇಕ ರಾಜ ತಾಂತ್ರಿಕ ಮಾತುಕತೆಗಳ ಮೂಲಕ ಶಾಂತಿ ನೆಲಸುವಂತೆ ಮಾಡಿದ್ದೆ ಎಂದರು.

ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ: ಈ ಬಾರಿ ಲೋಕಸಭಾ ಚುನಾವಣೆ ಮಹತ್ತವಾಗಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಪಕ್ಷದ 20 ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರಲ್ಲದೇ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಪ್ರಜ್ವಲ್‌ ರೇವಣ್ಣ ಅವರನ್ನು ಗೆಲ್ಲಿಸಬೇಕಾಗಿ ಮನವಿ ಮಾಡಿದರು.

ಪ್ರಚಾರ ಸಭೆಯಲ್ಲಿ ಶಾಸಕ ಕೆ.ಎಸ್‌.ಲಿಂಗೇಶ್‌, ಅಭ್ಯರ್ಥಿ ಪ್ರಜ್ವಲ್‌ರೇವಣ್ಣ, ತಾಲೂಕು ಜೆಡಿಎಸ್‌
ಅಧ್ಯಕ್ಷ ತೊ.ಚ.ಅನಂತ ಸುಬ್ಟಾರಾಯ, ಕಾಂಗ್ರೆಸ್‌ ಅಧ್ಯಕ್ಷ ಕೆ.ಎಸ್‌.ಪೂರ್ಣೇಶ್‌, ಮುಖಂಡರಾದ ವೈ.ಎನ್‌.ಕೃಷ್ಣೇಗೌಡ, ಎಂ.ಎ.ನಾಗರಾಜ್‌, ಸಿ.ಎಸ್‌.ಪ್ರಕಾಶ್‌, ಬಿ.ಎಸ್‌.ತಮ್ಮಣ್ಣಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲತಾ ಮಂಜೇಶ್ವರಿ, ಸೈಯದ್‌ತೋಫಿಕ್‌, ಜಿ.ಟಿ.ಇಂದಿರಾ , ಮೊಗಪ್ಪಗೌಡ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next