ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷಕ್ಕೆ ಕಡೂರು ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕೆ.ಎಸ್.ಆನಂದ್ ಹೆಸರು ಘೋಷಣೆಯಾಗುತ್ತಿದ್ದಂತೆ ದತ್ತ ಮೇಷ್ಟ್ರು ನಡೆ ಏನು ಎಂಬ ಚರ್ಚೆ ಕ್ಷೇತ್ರದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಮೇಷ್ಟ್ರು ಪಕ್ಷೇತರರವಾಗಿ ನಿಲ್ಲುತ್ತಾರೋ, ಕಾಂಗ್ರೆಸ್‌ನವರು ಮನವೊಲಿಸುತ್ತಾರೋ, ಬಂಡಾಯ ಏಳುತ್ತಾರೋ, ಅಭಿಮಾನಿಗಳನ್ನು ಸಮಾಧಾನ ಪಡಿಸುತ್ತಾರೋ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.
ದೊಡ್ಡಗೌಡರ ಮಾನಸಪುತ್ರ ಎಂದೇ ಗುರುತಿಸಿಕೊಂಡಿದ್ದ ದತ್ತ ಮೇಷ್ಟ್ರು ಕಳೆದ ಕೆಲವು ತಿಂಗಳ ಹಿಂದೆ ತೆನೆ ಇಳಿಸಿ ಕಾಂಗ್ರೆಸ್ ನಾಯಕರ ಕೈ ಹಿಡಿದಿದ್ದರು. ಮೇಷ್ಟ್ರು ಕಾಂಗ್ರೆಸ್ ಸೇರ್ಪ ಡೆಗೊಳ್ಳುತ್ತಿದ್ದಂತೆ ಕ್ಷೇತ್ರದಾದ್ಯಂತ ಈ ಬಾರಿ ದತ್ತಣ್ಣನಿಗೆ ಟಿಕೆಟ್ ಎನ್ನಲಾಗುತ್ತಿತ್ತು. ಮೇಷ್ಟ್ರು ನಾನು ಯಾವುದೇ ಷರತ್ತು ವಿ ಧಿಸದೆ ಕೈ ಹಿಡಿ ದಿದ್ದೇನೆ ಎನ್ನುತ್ತಿದ್ದರೂ ಒಳಗೊಳಗೆ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದರು. ಆದರೆ ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಮೇಷ್ಟ್ರಿಗೆ ಕೈ ನಾಯಕರು ಬಿಗ್ ಶಾಕ್ ನೀಡಿದ್ದಾರೆ.
ಕೈ ನಾಯಕರನ್ನು ನಂಬಿ ಬಂದಿದ್ದ ಮೇಷ್ಟ್ರು ಕೈ ಬಿಟ್ಟಿದ್ದಾರೆ. ಇತ್ತ ಜೆಡಿಎಸ್ ಮನೆ ತೊರೆದಿದ್ದಾರೆ. ಇದೇ ನನ್ನ ಕೊನೆಯ ಚುನಾವಣೆ ಎನ್ನುತ್ತಿದ್ದ ಮೇಷ್ಟ್ರು ಅಡಕತ್ತರಿಯಲ್ಲಿ ಸಿಲುಕಿದ್ದು, ಯಾವ ನಿರ್ಧಾರಕ್ಕೆ ಬರಲಿದ್ದಾರೆಂಬ ಕುತೂಹಲ ಕೆರಳಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಎ.9ರಂದು ಅಭಿಮಾ ನಿಗಳ ಸಭೆ ಕರೆದಿರುವುದು ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರೋ? ಕಾಂಗ್ರೆಸ್ ನಾಯಕರ ಮನವೊಲಿಸ್ತಾರೋ? ಕಾಂಗ್ರೆಸ್ ವಿರುದ್ಧ ಬಂಡಾಯವಾಗಿ ಕಣಕ್ಕಿಳಿಯುತ್ತಾರೋ, ಅಭಿಮಾನಿಗಳನ್ನು ಸಮಾ ಧಾನ ಪಡಿಸುತ್ತಾರೋ ಎಂಬ ಚರ್ಚೆಗಳು ರೆಕ್ಕೆಪುಕ್ಕ ಪಡೆದು ಕೊಂಡಿದೆ. ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಕೆ.ಎಸ್.ಆನಂದ್ ಹೆಸರು ಘೋಷಣೆಯಾಗುತ್ತಿದ್ದಂತೆ ದತ್ತ ಅಭಿಮಾನಿಗಳು, ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್ ಪ್ರಾಮಾಣಿಕ ವ್ಯಕ್ತಿಗೆ ವಿಶ್ವಾಸ ದ್ರೋಹ ಮಾಡಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಮರಳಿ ಜೆಡಿಎಸ್‌ಗೆ ಬನ್ನಿ ಎಂದು ಕಾರ್ಯಕರ್ತರು ಆಹ್ವಾನಿಸುತ್ತಿದ್ದರೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಾಗಿಲು ಬಂದ್ ಮಾಡಿದ್ದಾರೆ. ಇದರ ನಡುವೆ ದತ್ತ ಅವರು ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಪತ್ರ ಬರೆದು ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪತ್ರ ಹರಿಯ ಬಿಡುತ್ತಿದ್ದಂತೆ ದತ್ತ ಮೇಷ್ಟ್ರು ನಡೆಯ ನಿಗೂಢತೆ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ. “ಅತ್ತ ಧರೆ, ಇತ್ತ ಹುಲಿ’ ಎಂಬ ಸ್ಥಿತಿಗೆ ಸಿಲುಕಿರುವ ಮೇಷ್ಟ್ರು ತಮ್ಮ ನಿರ್ಧಾರದ ಮೇಲೆ ಅವರ ರಾಜಕೀಯ ಭವಿಷ್ಯ ನಿಂತಿದೆ ಎನ್ನುವುದು ಅಭಿಮಾನಿಗಳು, ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಮೇಷ್ಟ್ರು ಅಭಿಮಾನಿಗಳಿಗೆ ಬರೆದ ಪತ್ರದಲ್ಲೇನಿದೆ?: ಆತ್ಮೀಯರೂ ನನ್ನ ಪ್ರೀತಿ ಪಾತ್ರರಾದ ನನ್ನ ಎಲ್ಲ ಅಭಿಮಾನಿಗಳಲ್ಲಿ ವಿನಂತಿ ಎಂದು ಆರಂಭಿಸಿರುವ ಅವರು, ನೀವು ನನಗೆ ಪ್ರೀತಿಯನ್ನು ಧಾರೆ ಎರೆದಿದ್ದೀರಿ. ಹಣವಿಲ್ಲದ, ಜಾತಿಯಿಲ್ಲದ ನನ್ನನ್ನು ದತ್ತ, ನಮ್ಮ ದತ್ತಣ್ಣ ಎಂದು ಅಭಿಮಾನದಿಂದ ತಬ್ಬಿಕೊಂಡು ಬೆಳೆಸಿದ್ದೀರಿ. ಈಗ ಬಂದಿರುವ ವಿಶೇಷ ರಾಜಕೀಯ ಪರಿಸ್ಥಿತಿಯಲ್ಲಿ, ನಿಮ್ಮ ಜತೆಗೆ ನಾನಿರಬೇಕು. ನನ್ನ ಜತೆಗೆ ನೀವಿರಬೇಕು. ಎಂಬುದು ಅನಿವಾರ್ಯ ವಾಗಿದೆ. ಈ ಕಾರಣದಿಂದ ಇದು ನನ್ನ ಮತ್ತು ನಿಮ್ಮೆಲ್ಲರ ಆತ್ಮಗೌರವಕ್ಕೆ, ಸ್ವಾಭಿಮಾನಕ್ಕೆ ಆದ ಅವಮಾನವಾಗಿದೆ. ಕ್ಷೇತ್ರದ ಮತದಾರರ ಸ್ವಾಭಿಮಾನಕ್ಕಾಗಿ ನಾನು ನಿಮ್ಮೆಲ್ಲರ ಆಶೀರ್ವಾದವನ್ನು ಬೇಡಲು ಕಡೂರು ಪಟ್ಟಣದಲ್ಲಿ ಎ.9ರಂದು ಬೆಳಗ್ಗೆ 11ಕ್ಕೆ ನನ್ನ ಅಭಿಮಾನಿಗಳ ಸಭೆ ಕರೆದಿದ್ದೇನೆ. ನನ್ನನ್ನು ಹರಸಿ ಆಶೀರ್ವದಿಸಬೇಕೆಂದು ಕೋರುತ್ತೇನೆ’ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.
ಎಚ್‌ಡಿಕೆ ನಿರುತ್ಸಾಹ
ಮೇಷ್ಟ್ರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮರಳಿ ಜೆಡಿಎಸ್ ಮನೆ ಸೇರಬಹುದು ಎಂಬ ಚರ್ಚೆಯೂ ನಡೆದಿತ್ತು. ಕಡೂರಿನಲ್ಲಿ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವೈ.ಎಸ್.ವಿ. ದತ್ತ ಬಗ್ಗೆ ಪ್ರತಿಕ್ರಿಯಿಸಿ ವೈ.ಎಸ್.ವಿ. ದತ್ತ ಯಾರು ಅಂತ ನನಗೆ ಗೊತ್ತಿಲ್ಲ, ಅವರು ತುಂಬಾ ದೊಡ್ಡವರು. ಅವರ ಬಗ್ಗೆ ಗೊತ್ತಿಲ್ಲ. ಅವರ ಬಗ್ಗೆ ನಾನೇಕೆ ಚರ್ಚೆ ಮಾಡಲಿ. ನನ್ನದು ಸಣ್ಣ ಪಕ್ಷ. ನನ್ನ ಪಕ್ಷಕ್ಕೆ ಅವರೇಕೆ ಬರುತ್ತಾರೆ. ಅವರು ಇಂಟರ್‌ನ್ಯಾಶನಲ್ ಪಕ್ಷ ಸೇರಲು ಹೊರಟಿರುವವರು. ನನ್ನ ಪಕ್ಷದಲ್ಲಿ ಪಾಪ ಅವರಿಗೆ ಏನು ಸಿಗುತ್ತದೆ. ಅವರು ದೊಡ್ಡ ಪಕ್ಷದಲ್ಲೇ ಇರಲಿ ಎಂದು ಹೇಳುವ ಮೂಲಕ ಜೆಡಿಸ್‌ಗೆ ಸೇರಿಸಿಕೊಳ್ಳುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಸಿದ್ದು ಜತೆ ಸಾಮೀಪ್ಯ ಮುಳುವಾಯಿತೇ?
ದತ್ತ ಅವರು ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿ ಕೊಂಡಿದ್ದು, ಈ ಸಂಬಂಧ ಇತ್ತೀಚೆಗೆ ವೈಎಸ್‌ವಿ ದತ್ತ ಮಾತನಾಡಿದ್ದಾರೆಂಬ ಆಡಿಯೋವೊಂದು ವೈರಲ್ ಆಗಿತ್ತು. ಕೆ.ಎಸ್.ಆನಂದ್ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತ. ಪಕ್ಷಕ್ಕಾಗಿ ದುಡಿದಿದ್ದಾನೆಂಬ ಕಾರಣಕ್ಕೆ ಟಿಕೆಟ್ ನೀಡಲಾಗಿದೆ. ಒಂದು ವೇಳೆ ದತ್ತರಿಗೆ ಟಿಕೆಟ್ ನೀಡಿದರೆ ಕೆ.ಎಸ್.ಆನಂದ್ ಬಂಡಾಯ ಏಳಬಹುದು ಅಥವಾ ಬೇರೆ ಪಕ್ಷಕ್ಕೆ ಜಂಪ್ ಆಗಬಹುದು ಎಂಬುದು ಮತ್ತೂಂದು ಕಾರಣ. ಹಾಗೇ ವೈಎಸ್‌ವಿ ದತ್ತ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಒಂದು ವೇಳೆ ಟಿಕೆಟ್ ನೀಡಿದಲ್ಲಿ ವಲಸೆ ಬಂದವರಿಗೆ ಕೈ ನಾಯಕರು ಮಣೆ ಹಾಕಿದ್ದಾರೆಂಬ ಅಪಕೀರ್ತಿಗೆ ಪಾತ್ರರಾಗಬೇಕಾಗುತ್ತದೆ ಎಂಬ ಕಾರ ಣ ದಿಂದ ಟಿಕೆಟ್ ನೀಡಿಲ್ಲ ಎನ್ನಲಾಗಿದೆ.
ಸಂದೀಪ ಜಿ.ಎನ್.ಶೇಡ್ಗಾರ್