Advertisement

ಇಂದಿರಾ ಕ್ಯಾಂಟಿನ್‌ ಹೆಸರು ಬದಲಾಯಿಸಿದರೆ ಹೋರಾಟ: ಸತೀಶ ಜಾರಕಿಹೊಳಿ ಎಚ್ಚರಿಕೆ

01:09 PM Aug 20, 2021 | Team Udayavani |

ಗೋಕಾಕ: ರಾಜ್ಯ ಬಿಜೆಪಿ ನಾಯಕರು ಇಂದಿರಾ ಕ್ಯಾಂಟಿನ್‌ ಹೆಸರು ಬದಲಾವಣೆ ವಿಚಾರವಾಗಿ ನೀಡಿರುವ ಹೇಳಿಕೆ ಕುರಿತಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಒಂದು ವೇಳೆ ಬದಲಾವಣೆ ಮಾಡಲು ಪ್ರಯತ್ನಿಸಿದರೆ ಕಾಂಗ್ರೆಸ್‌ ಪಕ್ಷದಿಂದ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

Advertisement

ರವಿವಾರ ನಗರದ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು, ಬಡವರ ಪರವಾಗಿ ಕೆಲಸ ಮಾಡಿದವರು. ಆ ಉದ್ದೇಶದಿಂದಲೇ ಇಂದಿರಾ ಕ್ಯಾಂಟಿನ್‌ ಎಂದು ಹೆಸರಿಡಲಾಗಿದೆ. ಬಿಜೆಪಿ ನಾಯಕರ ಈ ನಿರ್ಧಾರ ಸರಿಯಲ್ಲ. ತಪ್ಪು ತೀರ್ಮಾನದಿಂದ ಹಿಂದೆ ಸರಿಯಬೇಕು ಎಂದರು.

ಈಗಾಗಲೇ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರು, ನಾಯಕರು ಎಲ್ಲರೂ ಮಾತನಾಡಿದ್ದೇವೆ. ವಿರೋಧದ ನಡುವೆಯೂ ಇಂದಿರಾ ಕ್ಯಾಂಟಿನ್‌ ಹೆಸರು ಬದಲಾವಣೆಗೆ ಮುಂದಾದರೆ ಕಾಂಗ್ರೆಸ್‌ ಪಕ್ಷದಿಂದ ಉಗ್ರ ಪ್ರತಿಭಟನೆ ಮಾಡಲಿದ್ದೇವೆ ಎಂದು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಅನುದಾನವನ್ನು ಪ್ರತಿ ವರ್ಷ ಹಂತ ಹಂತವಾಗಿ ಹೆಚ್ಚಿಸಬೇಕು. ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ಸರ್ಕಾರ ಗಣನೀಯವಾಗಿ ಕಡಿತಗೊಳಿಸುವುದು ಸರಿಯಲ್ಲ. ಹೀಗೆ ಮಾಡುವುದರಿಂದ ಕ್ರೀಡೆಯ ಬಗ್ಗೆ ನಿರ್ಲಕ್ಷ ತೋರಿದಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಪಾನ್‌ ದಲ್ಲಿ ನಡೆದ ಟೋಕಿಯೋ ಒಲಿಂಪಿಕ್‌ ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟ ನೀರಜ್‌ ಚೋಪ್ರಾ ಅವರ ಹೆಸರು ಪ್ರಸ್ತಾಪಿಸಿ, ಜಾವೆಲಿನ್‌ನಲ್ಲಿ ನೀರಜ್‌ ಚೋಪ್ರಾ ಅವರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಅವರ ಸಾಧನೆ ಇಡೀ ದೇಶಕ್ಕೆ ಗೌರವ ತರುವಂತಹದ್ದಾಗಿದೆ. ದೇಶ ಹಾಗೂ ರಾಜ್ಯದಲ್ಲಿ ಇಂತಹ ಕ್ರೀಡಾ ಪಟುಗಳು ಅನೇಕರಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವರೆಲ್ಲರನ್ನು ಪ್ರೋತ್ಸಾಹಿಸಬೇಕು ಎಂದರು.

Advertisement

ಕೋವಿಡ್‌ ನಿಯಂತ್ರಣದಲ್ಲಿ ಸರ್ಕಾರ ಮೊದಲ ಹಾಗೂ ಎರಡನೇ ಅಲೆಯಲ್ಲಿ ವಿಫಲವಾಗಿದೆ. ಈಗ ಮೂರನೇ ಅಲೆ ಎದುರಾಗುವ ಸಾಧ್ಯತೆ ಇದೆ. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು. ಕೈ ಮೀರಿದ ಬಳಿಕ ನಿಯಂತ್ರಣಕ್ಕೆ ಪ್ರಯತ್ನಿಸುವುದು ಸರಿಯಾದ ಕ್ರಮವಲ್ಲ. ಸರ್ಕಾರ ಬೇಡಿಕೆಗೆ ತಕ್ಕಂತೆ ವ್ಯಾಕ್ಸಿನ್‌ ಪೂರೈಕೆ ಮಾಡಬೇಕು. ಇದರಿಂದ ಮೂರನೇ ಅಲೆ ತಡೆಯಲು ಸಾಧ್ಯ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next