Advertisement

ರಾಜ್ಯಪಾಲರ ವಿರುದ್ಧ ಕಾಂಗ್ರೆಸ್‌-ಜೆಡಿಎಸ್‌ ಪ್ರತಿಭಟನೆ

11:36 AM May 19, 2018 | Team Udayavani |

ಬೀದರ: ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿದ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್‌ ಮತ್ತು ಜೆಡಿಎಸ್‌
ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕೈಗೆ ಕಪ್ಪು ಪಟ್ಟಿ ಧರಿಸಿ ಕಪ್ಪು ದಿನವನ್ನಾಗಿ
ಆಚರಿಸಿದರು.

Advertisement

ಜಿಲ್ಲಾ ಯುವಕಾಂಗ್ರೆಸ್‌ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ನಗರದ
ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ನಂತರ ರಾಷ್ಟ್ರಪತಿಗಳಿಗೆ
ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿರದಿದ್ದರೂ ಅಧಿಕಾರ ಸ್ವೀಕರಿಸಿರುವ ಬಿ.ಎಸ್‌. ಯಡಿಯೂರಪ್ಪ
ಅವರು, ತಮ್ಮ ಪಕ್ಷದಿಂದ ಪೂರ್ಣ ಪ್ರಮಾಣದ ಬಹುಮತ ತೋರಿಸದೇ ಅಕ್ರಮವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ
ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉನ್ನತ ಸ್ಥಾನದಲ್ಲಿರುವ ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಈ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಹ ಫರೀದುಲ್ಲಾ ಖಾನ, ಅಕ್ಮಲ್‌ ಪಾಶಾ ಚಿದ್ರಿ, ಸೈಯದ್‌ ಅಲಿಶಾನ ಖಾದ್ರಿ, ಅಜ್ಮತ ಅಲ್ಲೂರೆ, ಮಹ್ಮದ್‌ ಹಕ್‌, ಶೇಕ್‌ ನಜೀಬ್‌, ಪರ್ವೇಜ್‌ ಕಮಲ್‌, ಪ್ರೇಮ್‌ ಸಾಗರ, ವೆಂಕಟ್‌ ಮತ್ತಿತರರು ಇದ್ದರು.

ಹುಮನಾಬಾದ: ಕರ್ನಾಟಕ ರಾಜ್ಯಪಾಲರು ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಿಪಿಐಎಂ ಮತ್ತು ಪ್ರಗತಿ ಪರ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. 

ಕೇಂದ್ರದ ಬಿಜೆಪಿ ಸರಕಾರ ಮತ್ತು ರಾಜ್ಯ ಪಾಲರ ಕಚೇರಿಯ ಅಧಿಕಾರ ದುರುಪಯೋಗ ಮಾಡಿಕೊಂಡು ಬಹುಮತ ಇಲ್ಲದ ಹಾಗೂ ಶೇ.36ರಷ್ಟು ಮತ ಪಡೆದ ಬಿಜೆಪಿ ಮುಖಂಡ ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ಮಾಡಿದ್ದು, ಶೇ.56ಕ್ಕೂ ಹೆಚ್ಚು ಮತಪಡೆದು ಬಹು ಸಂಖ್ಯಾಬಲ ಹೊಂದಿದ ಜೆಡಿಎಸ್‌ -ಕಾಂಗ್ರೆಸ್‌ ಪಕ್ಷಗಳಿಗೆ ಸರಕಾರ ರಚನೆಗೆ ಅವಕಾಶ ನೀಡದ ರಾಜ್ಯಪಾಲರದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಸಂಘಟನೆಗಳು ಖಂಡಿಸಿದವು.

Advertisement

ಸಿಪಿಐಎಂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಭು ಸಂತೋಷಕರ್‌, ಬಸವರಾಜ ಮಾಳಗೆ, ಇಸಾಮೋದ್ದಿನ್‌
ಮಿರಾಸಾಬ್‌, ಜನವಾದಿ ಮಹಿಳಾ ಸಂಘಟನೆಯ ರೇಷ್ಮಾ ಹಂಸರಾಜ, ಕುಶಲಾ ಹುಣಜಿ, ಶಂಶಿಕಾಂತ ಡಾಂಗೆ, ಕಟ್ಟಡ ಕಾರ್ಮಿಕ ಮುಖಂಡ ಸೈಯದ ಗೌಸೋದ್ದಿನ್‌, ಸೋಮು ಡಾಂಗೆ, ಸೋಮಶೇಖರ ಗಡವಂತಿ, ಶೇಖ ವಾಜೀದ್‌ ಪಾಶಾ, ಮಹಮ್ಮದ ಫಿರೋಜ, ಮಹಮ್ಮದ ಗೌಸ, ಖೂರೇಶಿ, ಸೈಯದ ವಾಸಿಮ್‌ ಇದ್ದರು 

Advertisement

Udayavani is now on Telegram. Click here to join our channel and stay updated with the latest news.

Next