ನಂಜನಗೂಡು: ದಕ್ಷಿಣ ಕಾಶಿ ಎಂದೇ ಹೆಸರಾದ ನಂಜನಗೂಡು ವಿಧಾನಸಭೆ ಕ್ಷೇತ್ರದಲ್ಲಿ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಕಾವು ಉಪ ಚುನಾವಣೆಯಂತೆ ಏರತೊಡಗಿದೆ. ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಸಂಭಾವ್ಯ ಅಭ್ಯರ್ಥಿಗಳು ಕ್ಷೇತ್ರಾದ್ಯಂತ ಒಂದು ಸುತ್ತಿನ ಪ್ರಚಾರವನ್ನೇ ಮುಗಿಸಿದ್ದು, ಈಗ ಜಿಪಂ ಕ್ಷೇತ್ರವಾರು ಪ್ರಚಾರ ಪ್ರಾರಂಭಿಸಿದ್ದಾರೆ. ಆದರೆ, ಭಾರತೀಯ ಜನತಾ ಪಕ್ಷ ಮಾತ್ರ ಇಲ್ಲಿ ದಾತರಿಲ್ಲದೆ ಸೊರಗಿದೆ.
ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ, ಹಾಲಿ ಶಾಸಕ ಕಳಲೆ ಕೇಶವಮೂರ್ತಿ ತಮ್ಮ ಸಹೋದರ ಸಂಸದ ಆರ್.ಧ್ರುವನಾರಾಯಣ ಜೊತೆ ಕ್ಷೇತ್ರ ಪ್ರವಾಸ ಮಾಡುತ್ತಾ ಜೋರಾಗಿಯೇ ಮತ ಪ್ರಚಾರ ಪ್ರಾರಂಭಿಸಿದ್ದಾರೆ. ಇನ್ನು ಜೆಡಿಎಸ್‌ನ ಅಭ್ಯರ್ಥಿ ನಾನೇ ಎಂದು ಹೇಳಿಕೊಳ್ಳುತ್ತಿದ್ದ ಬೆಳವಾಡಿ ಶಿವಕುಮಾರ ಹಾಗೂ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ, ಮಾಜಿ ಸಂಸದ ಎಚ್.ವಿಶ್ವನಾಥರ ಬಲಗೈ ಭಂಟ ಸೋಮಸುಂದರ ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿ ಪಕ್ಷವನ್ನು ಸಂಘಟಿಸಿದ್ದಾರೆ.
ಇಂತಹ ಸಮಯದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದ ಹಾಲಿ ಜಿಪಂ ಸದಸ್ಯ ಹಾಗೂ ಮಾಜಿ ಶಾಸಕ ಹೆಜ್ಜಿಗೆ ಶ್ರೀನಿವಾಸಯ್ಯ ಅವರ ಪುತ್ರ ದಯಾನಂದ ಮೂರ್ತಿ ತಾನೇ ಜೆಡಿಎಸ್ ಅಭ್ಯರ್ಥಿ ಎಂದು ಜಿಪಂ ಕ್ಷೇತ್ರವಾರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಹೀಗಾಗಿ ಬೆಳವಾಡಿ ಶಿವಕುಮಾರ, ಸೋಮಸುಂದರ ಸದ್ದಿಲ್ಲದೆ ಕ್ಷೇತ್ರದಿಂದ ಕಾಣೆಯಾಗಿದ್ದಾರೆ.
ಈ ಎರಡು ಪಕ್ಷಗಳು ಮೇ 12ರ ಚುನಾವಣೆಯ ತಾಲೀಮನ್ನು ಜೋರಾಗಿಯೇ ಆರಂಭಿಸಿದ್ದರೂ ತಾಲೂಕು ಪಂಚಾಯ್ತಿಯಲ್ಲಿ ಅಧಿಕಾರ ಅನುಭವಿಸುತ್ತಿರುವ ಬಿಜೆಪಿ ಮಾತ್ರ ಈವರೆಗೂ ತನ್ನ ಸಂಭಾವ್ಯ ಅಭ್ಯರ್ಥಿಯನ್ನೂ ಘೋಷಿಸಿಲ್ಲ. ಕ್ಷೇತ್ರದಲ್ಲೂ ಪ್ರಭಾವಿ ಮುಖಂಡರಿಲ್ಲದೇ, ಕಾರ್ಯಕರ್ತರಲ್ಲಿ ಚುನಾವಣೆ ಉತ್ಸಾಹವೇ ಕಾಣುತ್ತಿಲ್ಲ. ಕೇವಲ ಒಂದು ವರ್ಷದ ಹಿಂದೆ ನಡೆದ ಉಪಚುನಾವಣೆಯಲ್ಲಿ ಸೋತು ಸುಣ್ಣಾದ ಪಕ್ಷಕ್ಕೆ ನವಚೇತನ ತುಂಬುವವರ್ಯಾರು ಎಂಬುದು ಸ್ವತಃ ಕಾರ್ಯಕರ್ತರೂ ಗೊತ್ತಿಲ್ಲ.
ಪ್ರಸಾದ್ ಅಳಿಯನಿಗೆ ಬಿಜೆಪಿ ಟಿಕೆಟ್?: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರೇ ಈ ಬಾರಿಯೂ ಕಮಲದ ಅಭ್ಯರ್ಥಿಯಾಗುವರೇ ಅಥವಾ ಮತ್ತೂಬ್ಬ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಹದೇವಯ್ಯ ಸ್ಪರ್ಧಿಸುವರೇ ಎಂಬ ಗೊಂದಲ ಮೂಡಿರುವ ಮಧ್ಯೆ, ಪ್ರಸಾದ್ ಅವರ ಅಳಿಯ ಹರ್ಷವರ್ಧನ ಸದ್ದಿಲ್ಲದೇ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾ ಮಹದೇವಯ್ಯ ಅವರಿಗಿಂಥ ತಾವೇ ಪ್ರಬಲ ಸ್ಪರ್ಧಿ ಎಂದು ಓಡಾಡುತ್ತಿದ್ದಾರೆ.
ಒಟ್ಟಾರೆಯಾಗಿ ಮಾವನೂ? ಅಳಿಯನೂ? ಮಹದೇವಯ್ಯನೋ ಅಥವಾ ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣನೋ ಯಾರು ಕ್ಷೇತ್ರದಲ್ಲಿ ಕಮಲದ ಕೈ ಹಿಡಿಯಲಿದ್ದಾರೋ ಎಂಬುದು ತಿಳಿಯದೇ ಪಕ್ಷದ ಕಾರ್ಯಕರ್ತರು ಮಾತ್ರ ಗೊಂದಲದಲ್ಲಿ ಸಿಲುಕಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪ್ರಚಾರ ಕಾರ್ಯವನ್ನು ಕಂಡು ಹತಾಷರಾಗಿ ಕೈ ಹಿಸುಕಿಕೊಳ್ಳಲಾರಂಭಿಸಿದ್ದಾರೆ. ಒಟ್ಟಾರೆ ಬಿಜೆಪಿ ಅಧಿಕೃತ ಪಟ್ಟಿ ಹೊರಬೀಳುವವರೆಗೂ ಇಲ್ಲಿ ತಾವರೆಯ ಪಕ್ಷದ ಚಟುವಟಿಕೆ ನಿಂತನೀರಾಗಿದೆ.
* ಶ್ರೀಧರ್ ಆರ್. ಭಟ್