ಹುಬ್ಬಳ್ಳಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ವಿಧಾನಸೌಧದಲ್ಲಿ ಬಹುಮತ ಸಾಬೀತು ಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ನಗರದಲ್ಲಿ ಪ್ರತ್ಯೇಕವಾಗಿ ಸಂಭ್ರಮಾಚರಣೆ ನಡೆಸಿದರು.
ದುರ್ಗದ ಬಯಲಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ ನೇತೃತ್ವದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ನಂತರ ದಾಜಿಬಾನ ಪೇಟೆಯ ತುಳಜಾ ಭವಾನಿ ವೃತ್ತ, ಡಾಕಪ್ಪ ವೃತ್ತ, ಹಳೇಹುಬ್ಬಳ್ಳಿ ದುರ್ಗದ ಬಯಲು, ಕಾರವಾರ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿ ಬಳಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ಮಹೇಂದ್ರ ಸಿಂಘಿ, ಬಂಗಾರೇಶ ಹಿರೇಮಠ, ಮೆಹಮೂದ ಕೋಳೂರ, ರಜತ ಉಳ್ಳಾಗಡ್ಡಿಮಠ, ಶಾರುಖ ಮುಲ್ಲಾ, ನವೀದ ಮುಲ್ಲಾ, ವಾದಿರಾಜ ಕಟ್ಟಿ, ಶಹಜ್ಮಾನ ಮುಜಾಹಿದ, ನಿಜಾಮುದ್ದೀನ ಮಹಿಯಾರ, ವೀರಣ್ಣ ಹಿರೇಹಾಳ, ಅಷ್ಪಾಕ ಕುಮಟಾಕರ, ದೀಪಾ ಮೆಹರವಾಡೆ, ಕಾಳುಸಿಂಗ್ ಚವ್ಹಾಣ, ನಾಗರಾಜ ಹೆಗ್ಗಣವರ ಇನ್ನಿತರರು ಪಾಲ್ಗೊಂಡಿದ್ದರು.
ಜೆಡಿಎಸ್‌ನಿಂದ ಬೈಕ್ ರ್ಯಾಲಿ: ಜೆಡಿಎಸ್ ಕಾರ್ಯಕರ್ತರು ಪಾಲಿಕೆ ಸದಸ್ಯ ರಾಜಣ್ಣಾ ಕೊರವಿ ನೇತೃತ್ವದಲ್ಲಿ ನಗರದ ವಿವಿಧ ಪ್ರಮುಖ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಗುಲಾಲು ಎರಚಿ ಸಂಭ್ರಮ ಆಚರಿಸಿದರು. ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದ ಕಾರ್ಯಕರ್ತರು ನಂತರ ಬೈಕ್ ರ್ಯಾಲಿ ಮುಖಾಂತರ ದುರ್ಗದ ಬಯಲು, ಹಳೇಹುಬ್ಬಳ್ಳಿ ಇಂಡಿ ಪಂಪ್, ಗಣೇಶ ಪೇಟೆ, ತುಳಜಾ ಭವಾನಿ ವೃತ್ತ ಸೇರಿದಂತೆ ಇನ್ನಿತರೆಡೆ ಸಂಚರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಾಗನಗೌಡ ಗದಿಗೆಪ್ಪಗೌಡರ, ನವೀನ ಮುನಿಯಪ್ಪನವರ, ಶ್ರೀಕಾಂತ ಬಡಕಣ್ಣವರ, ಅಶೋಕ ಬಿಲ್ಲಣ್ಣವರ, ಸುರೇಶ ಬಾಗಮ್ಮನವರ, ಇರ್ಷಾದ ಭದ್ರಾಪುರ, ಕಲ್ಲಂದರ ಮುಲ್ಲಾ, ಬಾಳುಸಾ ದಾನಿ ಮೊದಲಾದವರಿದ್ದರು.