ಮುಂಬೈ: ಒಂದು ವೇಳೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಬಯಸಿದ್ದಲ್ಲಿ ಆ ಸ್ಥಾನಕ್ಕೆ ಎನ್ ಸಿಪಿ ವರಿಷ್ಠ ಶರದ್ ಪವಾರ್ ಅವರ ಹೆಸರು ಪ್ರಸ್ತಾಪವಾದರೆ ನಾವು ಅದನ್ನು ಬೆಂಬಲಿಸುತ್ತೇವೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಶುಕ್ರವಾರ(ಡಿಸೆಂಬರ್ 11, 2020) ತಿಳಿಸಿದೆ.
“ಶರದ್ ಪವಾರ್ ಸರ್ ಒಂದು ವೇಳೆ ಯುಪಿಎ ಅಧ್ಯಕ್ಷರಾದರೆ ನಮಗೆ ಸಂತೋಷ. ಆದರೆ ನಮಗೆ ತಿಳಿದು ಬಂದ ಮಾಹಿತಿ ಪ್ರಕಾರ ಅವರು ಈ ವಿಷಯವನ್ನು ವೈಯಕ್ತಿಕವಾಗಿ ತಳ್ಳಿಹಾಕಿದ್ದಾರೆ ಎಂದು. ಒಂದು ಯುಪಿಎ ಅಧ್ಯಕ್ಷ ಸ್ಥಾನದ ಪ್ರಸ್ತಾಪ ಅಧಿಕೃತವಾಗಿ ಬಂದಲ್ಲಿ ನಾವು ಅದನ್ನು ಬೆಂಬಲಿಸುತ್ತೇವೆ. ಈಗ ಕಾಂಗ್ರೆಸ್ ಪಕ್ಷ ತುಂಬಾ ದುರ್ಬಲವಾಗಿದೆ, ಈ ನಿಟ್ಟಿನಲ್ಲಿ ವಿಪಕ್ಷಗಳು ಒಗ್ಗೂಡಬೇಕಾದ ಅಗತ್ಯವಿದೆ ಮತ್ತು ಯುಪಿಎ ಅನ್ನು ಬಲಗೊಳಿಸಬೇಕಿದೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎನ್ ಸಿಪಿ ನಾಯಕ ಶರದ್ ಪವಾರ್ ಅವರಿಗೆ ದೇಶವನ್ನು ಮುನ್ನಡೆಸುವ ಎಲ್ಲಾ ಅರ್ಹತೆಯೂ ಇದೆ ಎಂದು ರಾವತ್ ತಿಳಿಸಿದ್ದರು. ಮಹಾರಾಷ್ಟ್ರದಲ್ಲಿ ಪ್ರಸ್ತುತ ಶಿವಸೇನಾ ಎನ್ ಸಿಪಿ ಮತ್ತು ಕಾಂಗ್ರೆಸ್ ಜತೆ ಮೈತ್ರಿ ಸರ್ಕಾರ ನಡೆಸುತ್ತಿದೆ.
ಮುಂಬೈನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪವಾರ್ ಅವರು ಆಳವಾದ ಅನುಭವ ಹೊಂದಿದ್ದಾರೆ. ಅವರಿಗೆ ಜನರ ನಾಡಿ ಮಿಡಿತ ತಿಳಿದಿದೆ ಎಂದು ಸಂಜಯ್ ರಾವತ್ ಹೇಳಿದರು. ಈ ನಿಟ್ಟಿನಲ್ಲಿ ಅವರು ದೇಶದ ಚುಕ್ಕಾಣಿ ಹಿಡಿಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕಾಗಿ ಶಿವಸೇನಾ ಅವರಿಗೆ ಶುಭ ಹಾರೈಸುತ್ತದೆ ಎಂದು ಡಿಸೆಂಬರ್ 12ರ ಪವಾರ್ ಜನ್ಮದಿನವನ್ನು ಉಲ್ಲೇಖಿಸಿ ರಾವತ್ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಾಜಸ್ಥಾನ್ ಸರ್ಕಾರಿ ಆಸ್ಪತ್ರೆ: ಒಂದೇ ಗಂಟೆಯಲ್ಲಿ ಒಂಬತ್ತು ನವಜಾತ ಶಿಶುಗಳ ಸಾವು
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಬಯಸಿದ್ದು, ಆ ಸ್ಥಾನಕ್ಕೆ ಎನ್ ಸಿಪಿ ಸಂಸ್ಥಾಪಕ ಶರದ್ ಪವಾರ್ ಮುಂಚೂಣಿಯಲ್ಲಿದ್ದಾರೆ ಎಂಬ ಊಹಾಪೋಹದ ವರದಿಯಾಗಿತ್ತು. ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ರಾವತ್, ರಾಜಕೀಯದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಮುಂದೇನಾಗಲಿದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ ಎಂದು ಹೇಳಿದರು.