ಆನೇಕಲ್: ಭ್ರಷ್ಟಾಚಾರ ಹಾಗೂ ಕಾಂಗ್ರೆಸ್ ಪಕ್ಷ ಎರಡಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿಆದಿತ್ಯನಾಥ್ ಹೇಳಿದರು. ತಾಲೂಕಿನ ಅತ್ತಿಬೆಲೆಯಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದ ಪ್ರಚಾರ ಸಭೆಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಎಲ್ಲಾ ವರ್ಗದ ಜನರನ್ನು ಒಡೆದು ಆಳುವ ನೀತಿ ಏನಾದರೂ ಗೊತ್ತಿದೆ ಎಂದರೆ ಅದು ಸಿದ್ದರಾಮಯ್ಯನವರಿಗೆ ಮಾತ್ರ ಎಂದರು.
ಉತ್ತರ ಪ್ರದೇಶದಲ್ಲಿ ಶ್ರೀರಾಮ ಜನನವಾಗಿದ್ದು, ಕರ್ನಾಟಕದಲ್ಲಿ ಆಂಜನೇಯ ಜನಿಸಿದ್ದು, ಶ್ರೀರಾಮ ಆಂಜನೇಯ ಸೇರಿದಾಗ ರಾಮರಾಜ್ಯ ಜನನವಾಗುತ್ತದೆ, ಅದರಂತೆ ಕರ್ನಾಟಕ ರಾಮರಾಜ್ಯ ಆಗಲಿದೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ, ಇನ್ನು ಮುಂದೆ ಜನತೆ ಭಯವಿಲ್ಲದೆ ಬದುಕಬಹುದಾಗಿದೆ ಎಂದು ತಿಳಿಸಿದರು.
ಬಿಜೆಪಿಯಿಂದ ಮಾತ್ರ ರಾಮರಾಜ್ಯ ಮಾಡಲು ಸಾಧ್ಯ, ಕಳೆದ ನಾಲ್ಕು ವರ್ಷದಿಂದ ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರ ಇದೆ, ಜನಧನ್ ಯೋಜನೆ, ಮುದ್ರಾ ಯೋಜನೆಯಂತಹ ಯೋಜನೆಯನ್ನು ಜಾರಿಗೆ ತಂದಿದ್ದಾರೆ, ಆದರೆ ಕರ್ನಾಟಕದಲ್ಲಿ ನೋಡಿ ಸಿದ್ದರಾಮಯ್ಯ ಒಂದು ವರ್ಗದ ಜನರನ್ನು ಓಲೈಸುವ ಯೋಜನೆ ಜಾರಿಗೆ ತಂದು ಅತಿ ಕೆಟ್ಟ ಸರ್ಕಾರ ಎಂದರು.
ಕೇಂದ್ರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ನೀಡಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಸುಭಿಕ್ಷ ಸರ್ಕಾರ ಕೊಡಬಹುದಿತ್ತು, ಆದರೆ ವಿರೋಧಿ ಆಡಳಿತವನ್ನು ನಡೆಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಇಲ್ಲಿನ ರೈತರ ಹತ್ಯೆಗಳು ನಡೆಯುತ್ತಿದ್ದರು, ಮಹಿಳೆಯರ ಅತ್ಯಾಚಾರ ಆಗುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿತ್ತು, ಇನ್ನು ಈ ಆಟ ನಡೆಯುವುದಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಎಲ್ಲಾ ವರ್ಗದವರ ಸುರಕ್ಷತೆ ನೋಡುತ್ತಿದೆ, ಒಂದು ವರ್ಗದ ಕಲ್ಯಾಣ ನೋಡುತ್ತಿಲ್ಲ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ.
ಇವೆಲ್ಲವೂ ಜನಪರ ಕಲ್ಯಾಣದ ಕಾರ್ಯಕ್ರಮಗಳಾಗಿದ್ದು, ಕರ್ನಾಟಕದಲ್ಲಿ ಬದಲಾವಣೆಗಾಗಿ, ಅಭಿವೃದ್ಧಿ ಗಾಗಿ ಬಿಜೆಪಿ
ಬೆಂಬಲಿಸಿ ಎಂದರು.