Advertisement

ಮೂಡಬಿದಿರೆಯ ಅಭಿವೃದ್ಧಿಗೆ ಕಾಂಗ್ರೆಸ್‌ ಕಾರಣ: ಅಭಯ ಚಂದ್ರ

07:18 PM May 05, 2023 | Team Udayavani |

ಮಹಾನಗರ: ಮೂಡುಬಿದಿರೆಯ ಅಭಿವೃದ್ಧಿಯಲ್ಲಿ ಕಾಂಗ್ರೆಸ್‌ ಸರಕಾರದ ಪಾತ್ರ ಹಿರಿದಾಗಿದ್ದು, ನಾನು ಶಾಸಕನಾಗಿದ್ದಾಗ ಕುಡಿಯುವ ನೀರಿನ ಯೋಜನೆ, ರಿಂಗ್‌ ರೋಡ್‌ನೊಂದಿಗೆ ರಸ್ತೆಗಳ ಅಭಿವೃದ್ಧಿಯಾಗಿದೆ. ಜನರ ಹಿತ ಕಾಯುವ ಜತೆಗೆ ಅಭಿವೃದ್ಧಿ ಪರವಾದ ಕೆಲಸ ಕಾಂಗ್ರೆಸ್‌ ಸರಕಾರದಿಂದ ಮಾತ್ರ ಸಾಧ್ಯ ಎನ್ನುವ ನಂಬಿಕೆ ಮತದಾರರಿಗೆ ಬಂದಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಹೇಳಿದ್ದಾರೆ.

Advertisement

ಅವರು ಗುರುವಾರ ನಗರದ ಪ್ರಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1999ರಲ್ಲಿ ನಾನು ಶಾಸಕನಾಗಿದ್ದಾಗ ಅಂದಿನ ಕಾಂಗ್ರೆಸ್‌ ಸರಕಾರದಿಂದ ಮೂಡುಬಿದಿರೆಗೆ ವಿಶೇಷ ತಹಶೀಲ್ದಾರ್‌ ಅವರ ನೇಮಕ, ತಾಲೂಕು ಕಚೇರಿಯನ್ನು ಮಾಡಲಾಯಿತು. ಇದೇ ರೀತಿ ಮೂಲ್ಕಿಯಲ್ಲೂ ತಾಲೂಕು ರಚನೆ ಹಾಗೂ ಸಿದ್ದರಾಮಯ್ಯ ಅವರ ಕಾಲದಲ್ಲಿ ಅದಕ್ಕೆ ಕಚೇರಿಯನ್ನು ನಿರ್ಮಿಸಲಾಗಿದೆ ಎಂದರು.

ಮರವೂರಿನಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಪುಚ್ಚೆಮೊಗರಿನಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ 24 ಗಂಟೆಗಳ ವಿದ್ಯುತ್‌ ಪೂರೈಕೆ ವ್ಯವಸ್ಥೆ, ಕೋರ್ಟ್‌ ನಿರ್ಮಾಣ, ಮೂಡುಬಿದಿರೆಯಿಂದ ಎರಡೇ ನಿಮಿಷದಲ್ಲಿ ಮುಖ್ಯ ಪೇಟೆ ತಪ್ಪಿಸಿಕೊಂಡು ಕಾರ್ಕಳ ರಸ್ತೆಗೆ ಸಂಪರ್ಕ ಸಾಧಿಸುವ ರಿಂಗ್‌ ರೋಡ್‌ ಕೂಡ ಕಾಂಗ್ರೆಸ್‌ ಸರಕಾರದ ಸಮಯದಲ್ಲಿ ಆಗಿರುವ ಅಭಿವೃದ್ದಿ ಕಾರ್ಯಗಳು ಎಂದು ಅವರು ಹೇಳಿದರು.

ಈ ಹಿಂದೆ ಕಾಂಗ್ರೆಸ್‌ ಸರಕಾರ ಇದ್ದಾಗ ತಾಲೂಕು ಕಚೇರಿಗೆ ಜಾಗ ಗುರುತಿಸಿ ಕಟ್ಟಡ ನಿರ್ಮಾಣ ಮಾಡುವ ಕೆಲಸದ ಜತೆಗೆ ಕುಡಿಯುವ ನೀರಿಗಾಗಿ ಕಿನ್ನಿಗೋಳಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು 18 ಕೋಟಿ ರೂ.ಗಳಲ್ಲಿ ಮಾಡಲಾಯಿತು ಎಂದರು.

ಸಿದ್ದರಾಮಯ್ಯ ನೆರವು
ಕಾಂಗ್ರೆಸ್‌ ಆಡಳಿತ ಸಮಯದಲ್ಲಿ ಸಿದ್ದರಾಮಯ್ಯ ಅವರು ಕೃಷಿ, ನೀರಾವರಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಸಾಕಷ್ಟು ಅನುದಾನ ನೀಡಿ ಜನರ ಹಿತ ಕಾಪಾಡಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್‌ ಅಭಿವೃದ್ಧಿ ಪರವಾಗಿದ್ದು, ದಕ ಜಿಲ್ಲೆಯಲ್ಲಿ ಎನ್‌ಎಂಪಿಟಿ, ಎಂಆರ್‌ಪಿಎಲ್‌, ವಿಮಾನ ನಿಲ್ದಾಣ ಸೇರಿದಂತೆ ಸಾಕಷ್ಟು ಕೈಗಾರಿಕೆ, ಉದ್ಯಮಗಳ ಸ್ಥಾಪನೆಗೆ ಕಾರಣ. ಯುವಜನತೆಗೆ ಉದ್ಯೋಗ ನೀಡುವಲ್ಲಿ ಸಾಕಷ್ಟು ಕೆಲಸ ಮಾಡಿದೆ ಎಂದು ಅವರು ಹೇಳಿದರು.

Advertisement

ಕ್ಷೇತ್ರದ ಪ್ರಗತಿಗೆ ಮಿಥುನ್‌ ಅಗತ್ಯ
ಮೂಡುಬಿದಿರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಅವರಿಂದ ಮಾತ್ರ ಅಭಿವೃದ್ಧಿ ಕೆಲಸಗಳು ನಡೆಯಲು ಸಾಧ್ಯ. ಈಗಾಗಲೇ ಕ್ಷೇತ್ರದ ಬಹುತೇಕ ಕಡೆಯಲ್ಲಿ ಓಡಾಟ ನಡೆಸಿದ ಸಂದರ್ಭ ಕಾಂಗ್ರೆಸ್‌ ಪರವಾದ ಒಲವು ವ್ಯಕ್ತವಾಗಿದೆ. ಈ ಬಾರಿ ಕಮಿಷನ್‌ ಸರಕಾರದ ವಿರುದ್ಧ ಜನರು ಮತದಾನ ಮಾಡುತ್ತಾರೆ, ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಎಲ್ಲಾ 8 ಅಭ್ಯರ್ಥಿಗಳೂ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅಭಯಚಂದ್ರ ಹೇಳಿದರು.

ಅನುದಾನ ಬಳಕೆ ಮಾಡಿಲ್ಲ
ಸಿದ್ದರಾಮಯ್ಯ ಸರಕಾರವಿದ್ದಾಗ ಮುಲ್ಕಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ 8 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿತ್ತು. ಆದರೆ ಆ ಅನುದಾನವನ್ನು ಬಳಸಿಕೊಂಡು ಬಸ್‌ ನಿಲ್ದಾಣವನ್ನು ಮಾಡುವ ಗೋಜಿಗೆ ನಂತರ ಶಾಸಕರಾದವರು ಹೋಗಿಲ್ಲ. ಅನುದಾನ ಖಜಾನೆಯಲ್ಲೇ ಕೊಳೆಯುತ್ತಿದೆ. ಬಿಜೆಪಿ ಸರಕಾರ ಶೇ.40ರಷ್ಟು ಕಮಿಷನ್‌ನಲ್ಲೇ ನಿರತವಾಗಿತ್ತು ಎಂದು ಅಭಯಚಂದ್ರ ಆರೋಪಿಸಿದರು.

ನೀಟ್‌ನಿಂದ ವಿದ್ಯಾರ್ಥಿಗಳಿಗೆ ಅಡ್ಡಿ
ವೀರಪ್ಪಮೊಯ್ಲಿ ಅವರು ತಂದ ಸಿಇಟಿಯಿಂದಾಗಿ ಜನಸಾಮಾನ್ಯರ ಲಕ್ಷಾಂತರ ಮಕ್ಕಳು ಎಂಜಿನಿಯರ್‌ಗಳು ಹಾಗೂ ವೈದ್ಯರಾಗಿದ್ದಾರೆ. ಬಿಜೆಪಿಯ ಡಬಲ್‌ ಎಂಜಿನ್‌ ಸರಕಾರ ಇದಕ್ಕೆ ಅಡ್ಡಿಪಡಿಸಿ ನೀಟ್‌ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಅಭಯಚಂದ್ರ ಆಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next