ಕಾರಟಗಿ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ ಅಧಿಕಾರ ವಹಿಸಿಕೊಂಡು ವರ್ಷಕ್ಕೂ ಹೆಚ್ಚು ಕಾಲವಾದರೂ ಈವರೆಗೂ ಪದಾಧಿ ಕಾರಿಗಳ ನೇಮಕ ಮಾಡಿಲ್ಲ. ಸುದೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್‌ಗೆ ಸ್ವತಂತ್ರವಾಗಿ ಪದಾಧಿಕಾರಿಗಳ ನೇಮಕಾತಿ ಮಾಡುವುದಕ್ಕೂ ಕ್ಲಿಷ್ಟಕರ ಸ್ಥಿತಿ ನಿರ್ಮಾಣವಾಗಿ ಇದೀಗ ದಿವಾಳಿ ಅಂಚಿಗೆ ಬಂದು ನಿಂತಿದೆ. ಕಾಂಗ್ರೆಸ್ ಅವನತಿಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ? ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಅಶ್ವತ್ ನಾರಾಯಣ ವ್ಯಂಗ್ಯವಾಡಿದರು.
ಪಟ್ಟಣದ ಪದ್ಮಶ್ರೀ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ರಾಯಚೂರು, ಕೊಪ್ಪಳ ಜಿಲ್ಲೆಗಳ ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ನಡೆದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಅಧಿಕಾರ ಅನುಭವಿಸುತ್ತ ಕಾರ್ಯಕರ್ತರನ್ನು ಮರೆತಿದೆ. ಇಂದು ಅದರ ಸಂಘಟನೆ ಪಾತಾಳಕ್ಕೆ ಕುಸಿದಿದೆ ಎನ್ನುವುದಕ್ಕೆ ಇತ್ತೀಚಿನ ಪಂಜಾಬ ಹಾಗೂ ರಾಜಸ್ಥಾನದಲ್ಲಿ ನಡೆದಿರುವ ಘಟನೆಗಳೇ ಸಾಕ್ಷಿ. ಕಳೆದ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ಸಿಗರು ಈ ಬಾರಿ ಚುನಾವಣೆಗೆ ನಿಲ್ಲಲ್ಲ ಎಂದು ಹಿಂದೇಟು ಹಾಕುತ್ತಿದ್ದಾರೆ ಎಂದರೆ ಕಾಂಗ್ರೆಸ್ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎನ್ನುವುದನ್ನು ನೀವೇ ಊಹಿಸಿ ಎಂದರು.
ಕಳೆದ 40 ವರ್ಷಗಳಿಂದಲೂ ಬಿಜೆಪಿ ಸಂಘಟನೆಗೆ ಹೆಚ್ಚು ಮಹತ್ವ ಕೊಟ್ಟಿದೆ. ಕಾರ್ಯಕರ್ತರ ಪಾತ್ರ, ಅವರ ಮಹತ್ವ ಅರಿತುಕೊಂಡೇ ಮುನ್ನಡೆಯುತ್ತಿದೆ. ಆ ಕಾರಣಕ್ಕೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವುದು ಇಂದಿನ ಪೂರ್ವಭಾವಿ ಸಭೆಯಲ್ಲಿ ಸೇರಿದವರ ಜವಾಬ್ದಾರಿಯಾಗಿದೆ ಎಂದರು. ಸಂಸದರಾದ ಸಂಗಣ್ಣ ಕರಡಿ ಹಾಗೂ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಪ್ರಧಾನಿ ಮೋದಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ್ದಾರೆ.
ಮನೆ-ಮನೆಗೆ ಕುಡಿವ ನೀರೊದಗಿಸುವ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆ ಮೂಲಕ ರಾಜ್ಯಕ್ಕೆ 6800 ಕೋಟಿ ರೂ. ನೀಡಿದ್ದಾರೆ. ರಾಯಚೂರು ಜಿಲ್ಲೆಗೆ ಪ್ರತ್ಯೇಕವಾಗಿ ಜಲಧಾರೆ ಯೋಜನೆಯಡಿ 1980 ಕೋಟಿ ರೂ.ನೀಡುವ ಮೂಲಕ ಕೃಷ್ಣಾ ನದಿಯಿಂದ ನೇರವಾಗಿ ಶುದ್ಧ ಕುಡಿವ ನೀರೊದಗಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇಂತಹ ಮಹತ್ವದ ಯೋಜನೆಗಳ ಬಗ್ಗೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರಿಗೆ ಮಾಹಿತಿ ನೀಡಿ ಗೆಲುವು ಸಾಧಿಸಬೇಕಿದೆ ಎಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಹೇಮಲತಾ ನಾಯಕ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೊಲ್ಲಾ ಶೇಷಗಿರಿರಾವ್, ಶರಣು ತಳ್ಳಿಕೇರಿ, ತಿಪ್ಪೇರುದ್ರಸ್ವಾಮಿ, ಮಾಜಿ ಶಾಸಕರಾದ ಕೆ. ಶರಣಪ್ಪ, ಗಂಗಾಧರ ನಾಯಕ, ಅಮರೇಶ ಕರಡಿ, ಚಂದ್ರಶೇಖರ ಹಲಗೇರಿ, ಭೋಜಪ್ಪ, ಪ್ರಭು ಕಪಗಲ್, ನವೀನ್ ಗುಳಗಣ್ಣನವರ, ರಮೇಶ ನಾಡಿಗೇರ ಸೇರಿದಂತೆ ರಾಯಚೂರು, ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಇದ್ದರು.
ವಿಧಾನ ಪರಿಷತ್ ಚುನಾವಣೆ ಮಹತ್ವದ್ದಾಗಿದೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ನಮ್ಮ ಅಭ್ಯರ್ಥಿ ಸಿ.ವಿ. ಚಂದ್ರಶೇಖರ ಪರಾಭವಗೊಂಡಿದ್ದಾರೆ. ಅದಕ್ಕೆ ಈ ಬಾರಿಯೂ ಅತಿಯಾದ ಆತ್ಮವಿಶ್ವಾಸ ಹೊಂದದೇ ವಿರೋಧ ಪಕ್ಷ ಮಣಿಸಲು ತಂತ್ರಕ್ಕೆ ಪ್ರತಿತಂತ್ರ ಹೂಡಿ ಈ ಬಾರಿ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದೇವೆ.
ದೊಡ್ಡನಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ