ಬೀದರ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಹೋದರ ಡಿ.ಕೆ ಸುರೇಶ್ ಮನೆಗಳ ಮೇಲೆ ಸಿಬಿಐ ದಾಳಿ ದೇಶದಲ್ಲಿ ಪ್ರತಿ ಪಕ್ಷಗಳ ಧ್ವನಿ ಮೊಟಕುಗೊಳಿಸಲು ಮತ್ತು ಹೆದರಿಸುವ ಷಡ್ಯಂತ್ರವಾಗಿದೆ. ಯಾವುದೇ ದಬ್ಬಾಳಿಕೆ, ಬೆದರಿಕೆಗೆ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ. ಜನರ ಪರ ಪಕ್ಷದ ಚಳುವಳಿ ನಿರಂತರವಾಗಿ ನಡೆಯುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಹೇಳಿದರು.
ಬಿಜೆಪಿ ಸರ್ಕಾರದ ಕುಮ್ಮಕ್ಕು, ನಿರ್ದೇಶನದಂತೆ ಸಿಬಿಐ ದಾಳಿ ನಡೆದಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಉಪ ಚುನಾವಣೆಯಲ್ಲಿ ಸೋಲಿನ ಭೀತಿ ಹಾಗೂ ತಮ್ಮ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಂಡು ಜನರ ಗಮನ ಬೇರೆಡೆಗೆ ಸೆಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಈ ದಾಳಿಯನ್ನು ಕಾನೂನು ಹೋರಾಟ ಮೂಲಕವೇ ಎದುರಿಸಿ ನ್ಯಾಯ ಪಡೆಯುತ್ತೇವೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ:ಸಿಬಿಐ ದಾಳಿಗೆ ಆಕ್ರೋಶ: ಸಿಎಂ ಯಡಿಯೂರಪ್ಪ ಮನೆಗೆ ಮುತ್ತಿಗೆ ಯತ್ನ
ಅನ್ನದಾತರನ್ನು ಗುಲಾಮರನ್ನಾಗಿ ಮಾಡಲು ಕೇಂದ್ರ ಸರ್ಕಾರ ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದ್ದು, ಇದನ್ನು ವಿರೋಧಿಸಿ ರೈತರೇ ಬಿದಿಗಿಳಿದು ಹೋರಾಡುತ್ತಿದ್ದಾರೆ. ಕೋವಿಡ್-19 ನಿಯಂತ್ರಣದಲ್ಲಿ ವಿಫಲತೆ, ಆರ್ಥಿಕತೆ ಕುಸಿದಿದೆ. ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ಅತ್ಯಾಚಾರದಂಥ ಘಟನೆಗಳಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಂತ್ರಸ್ತ ಮಹಿಳೆ ಪರ ನ್ಯಾಯಕ್ಕಾಗಿ ಹೋರಾಡುತ್ತಿರುವ ರಾಹುಲ್ ಗಾಂಧಿ ಮತ್ತು ಪ್ರಿಯಂಕಾ ಗಾಂಧಿಗೆ ಅಡ್ಡಪಡಿಸಲಾಗುತ್ತಿದೆ. ದೇಶದಲ್ಲಿ ಜಂಗಲ್ ರಾಜ್ ನಡೆಯುತ್ತಿದೆ ಎಂದ ಖಂಡ್ರೆ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಲು ಬಿಜೆಪಿ ಸರ್ಕಾರಕ್ಕೆ ಯೋಗವಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ಉಪಚುನಾವಣೆ ಹೊಸ್ತಿಲಲ್ಲಿ ಸಿಬಿಐ ದಾಳಿ: ರಾಜಕೀಯ ಚದುರಂಗದಾಟದಲ್ಲಿ ಲಾಭ ಯಾರಿಗೆ?
ರಾಜ್ಯದಲ್ಲಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ, ಈಗ ಉಪ ಚುನಾವಣೆಯಲ್ಲೂ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಹಿಂಬಾಗಿಲು ಮೂಲಕ ಗೆಲ್ಲಲು ಹೊರಟಿದೆ. ಆದರೆ, ಸರ್ಕಾರದ ದುರಾಳಿತ, ವೈಫಲ್ಯದಿಂದ ಬೇಸತ್ತಿರುವ ಜನ ಈಗ ಎಚ್ಚೆತ್ತುಕೊಂಡಿದ್ದು, ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.