Advertisement

ಕಾಂಗ್ರೆಸ್‌ ಕಗ್ಗಂಟು; ಸಸ್ಪೆನ್ಸ್‌ ಆಗಿಯೇ ಉಳಿದ ಎರಡನೇ ಪಟ್ಟಿ

11:06 PM Apr 04, 2023 | Team Udayavani |

ಬೆಂಗಳೂರು:ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಮಂಗಳವಾರ ಸರಣಿ ಸಭೆಗಳು ನಡೆದರೂ ಬಹುನಿರೀಕ್ಷಿತ ಪಟ್ಟಿ ಕೊನೆಗೂ ಬಿಡುಗಡೆ ಆಗಲೇ ಇಲ್ಲ. ಇದರೊಂದಿಗೆ ಬಾಕಿ ನೂರು ಕ್ಷೇತ್ರಗಳ ಪಟ್ಟಿ ಅಂತಿಮಗೊಳಿಸುವುದು ತೀವ್ರ ಕಗ್ಗಂಟಾಗಿ ಪರಿಣಮಿಸಿದೆ.

Advertisement

ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದ ವಲಸಿಗರಿಗೆ ಟಿಕೆಟ್‌ ನೀಡುವುದಕ್ಕೆ ಸ್ಥಳೀಯವಾಗಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದು ಹಾಗೂ ಬಹುತೇಕ ಕಡೆ ಎರಡಕ್ಕಿಂತ ಹೆಚ್ಚು ಮಂದಿ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಿರುವುದು ಅಂತಿಮ ಪಟ್ಟಿ ಸಿದ್ಧಪಡಿಸುವುದಕ್ಕೆ ದೊಡ್ಡ ತಲೆ ನೋವಾಗಿದೆ. ಮೊದಲ ಪಟ್ಟಿಯಲ್ಲಿ ಮಿಸ್‌ ಆಗಿದ್ದ ಹಾಲಿ 6 ಶಾಸಕರ ಟಿಕೆಟ್‌ ಭವಿಷ್ಯದ ಬಗ್ಗೆಯೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.

ಪುಲಕೇಶಿನಗರದ ಅಖಂಡ ಶ್ರೀನಿವಾಸಮೂರ್ತಿ, ಹರಿಹರದ ರಾಮಪ್ಪ, ಕುಂದಗೋಳದ ಕುಸುಮಾ ಶಿವಳ್ಳಿ, ಲಿಂಗಸುಗೂರಿನ ಡಿ.ಎಸ್‌.ಹೂಲಗೇರಿ, ಶಿಡ್ಲಘಟ್ಟದ ವಿ.ಮುನಿಯಪ್ಪ ಹಾಗೂ ಅಫ‌jಲ್‌ಪುರದ ಎಂ.ವೈ.ಪಾಟೀಲ್‌ಗೆ ಟಿಕೆಟ್‌ ಕೊಡಬೇಕೋ-ಬೇಡವೋ ಎಂಬುದರ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಹೀಗಾಗಿ ಕಾಂಗ್ರೆಸ್‌ನ 2ನೇ ಪಟ್ಟಿ ಸಾಕಷ್ಟು ಸಸ್ಪೆನ್ಸ್‌ ಆಗಿದೆ.

ಎಐಸಿಸಿ ಕಚೇರಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುಜೇìವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಅವರನ್ನೊಳಗೊಂಡ ಕೇಂದ್ರ ಚುನಾವಣಾ ಸಮಿತಿಯು ಎರಡು ಸಲ ಸಭೆ ಸೇರಿದರೂ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಮಧ್ಯಾಹ್ನದ ಸಭೆ ಬಳಿಕ ಮಾಧ್ಯಮದವರ ಜತೆ ಮಾತನಾಡಿದ್ದ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು, “ಈ ದಿನವೇ ಪಟ್ಟಿ ಬಿಡುಗಡೆ ಆಗಲಿದೆ’ ಎಂದು ಹೇಳಿದ್ದರು.

ಬಹುತೇಕ 35 ಕ್ಷೇತ್ರಗಳ ಪಟ್ಟಿ ಸಿದ್ಧವಾಗಿದೆ, ಯಾವುದೇ ಗಳಿಗೆಯಲ್ಲಿ ಬಿಡುಗಡೆ ಆಗಬಹುದೆಂಬ ನಿರೀಕ್ಷೆ ಇತ್ತು. ಆದರೆ ತಡರಾತ್ರಿಯಾದರೂ ಪಟ್ಟಿ ಬಿಡುಗಡೆ ಆಗಲಿಲ್ಲ. ಇದರೊಂದಿಗೆ ಅಭ್ಯರ್ಥಿಗಳ ಆಯ್ಕೆ ಸಾಕಷ್ಟು ಗೊಂದಲದ ಗೂಡಾಗಿದೆ.

Advertisement

ಇಂದು ಸಂಜೆ 4ಕ್ಕೆ ಸ್ಕ್ರೀನಿಂಗ್‌ ಕಮಿಟಿ ಸಭೆ
ಕೇಂದ್ರ ಚುನಾವಣಾ ಸಮಿತಿ ಸಭೆಗೂ ಮುನ್ನ ಬೆಂಗಳೂರಿನಲ್ಲಿ ಎರಡೆರಡು ಸಲ ಸ್ಕ್ರೀನಿಂಗ್‌ ಕಮಿಟಿ ಸಭೆ ನಡೆಸಿದ್ದ ರಾಜ್ಯ ಕಾಂಗ್ರೆಸ್‌ ನಾಯಕರು ಬಹುತೇಕ ಶೇ.98ರಷ್ಟು ಟಿಕೆಟ್‌ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಕೇವಲ ಕೇಂದ್ರ ಚುನಾವಣಾ ಸಮಿತಿ ಅನುಮೋದನೆಯಷ್ಟೇ ಬಾಕಿ ಇದೆ. ಯಾವುದೇ ಗದ್ದಲ, ಗೊಂದಲಗಳಿಲ್ಲದೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ ದಿಲ್ಲಿಯಲ್ಲಿ ಮಂಗಳವಾರ ಎರಡು ಸಲ ಚುನಾವಣಾ ಸಮಿತಿ ಸಭೆ ಸೇರಿದರೂ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಮತ್ತೆ ಬುಧವಾರ ಸಂಜೆ 4 ಗಂಟೆಗೆ ಸ್ಕ್ರೀನಿಂಗ್‌ ಕಮಿಟಿ ಸಭೆ ಸೇರಲು ನಿರ್ಧರಿಸಲಾಗಿದೆ.

ಅಂದರೆ ಬೆಂಗಳೂರಿನಲ್ಲಿ ನಡೆದ ಸ್ಕ್ರೀನಿಂಗ್‌ ಕಮಿಟಿ ಸಿದ್ಧಪಡಿಸಿದ್ದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಗೆ ಕೇಂದ್ರ ಚುನಾವಣಾ ಸಮಿತಿ ಆಕ್ಷೇಪ ಇಲ್ಲವೇ ಅಸಮಾಧಾನ ವ್ಯಕ್ತಪಡಿಸಿರುವುದು ಇದರಿಂದ ಗೊತ್ತಾಗುತ್ತದೆ. ಹೀಗಾಗಿ ಪಟ್ಟಿ ಪರಿಷ್ಕರಣೆಗೆ ಮತ್ತೂಮ್ಮೆ ಸ್ಕ್ರೀನಿಂಗ್‌ ಕಮಿಟಿ ಸೇರಲು ಸೂಚಿಸಿರುವುದರಿಂದ ಟಿಕೆಟ್‌ ಆಕಾಂಕ್ಷಿಗಳಲ್ಲಿ ಆತಂಕ ಮನೆ ಮಾಡಿದೆ.

ಡಬಲ್‌ ಟ್ರಬಲ್‌
ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದ ಜತೆಗೆ ಕೋಲಾರದಿಂದಲೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಹೈಕಮಾಂಡ್‌ ಮುಂದೆ ಡಬಲ್‌ ಟಿಕೆಟ್‌ಗೆ ಬೇಡಿಕೆ ಇಟ್ಟಿರುವುದೇ ಈಗ ಟ್ರಬಲ್‌ಗೆ ಕಾರಣವಾಗಿದೆ. ಬಹುತೇಕ ಎರಡು ಕಡೆಯಿಂದಲೂ ಸಿದ್ದರಾಮಯ್ಯ ಸ್ಪರ್ಧೆಗೆ ಹೈಕಮಾಂಡ್‌ ಇಂಗಿತ ವ್ಯಕ್ತಪಡಿಸಿದ್ದರ ನಡುವೆಯೇ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಕೂಡ ತಮಗೂ ಎರಡು ಕಡೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂಬ ದಾಳ ಉರುಳಿಸಿರುವುದು ಪಟ್ಟಿ ಬಿಡುಗಡೆ ವಿಳಂಬಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next