ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಿಂದ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಿದ್ದು, ಇಲ್ಲದಿದ್ದರೆ, ಆಡಳಿತ ವಿರೋಧಿ ಅಲೆಯಿಂದ ನಲವತ್ತು ಸ್ಥಾನ ಮಾತ್ರ ಗಳಿಸುತ್ತಿತ್ತು ಎಂದು ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಜಾಗತಿಕ ಲಿಂಗಾಯತ ಮಹಾಸಭೆಯ ನೇತೃತ್ವದಲ್ಲಿ ವಿರಕ್ತ ಲಿಂಗಾಯತ ಮಠಾಧೀಶರ ಸಭೆಯ ನಂತರ ಮಾತನಾಡಿದ ಅವರು, 2008 ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ 2013 ರಲ್ಲಿ ಆಡಳಿತ ವಿರೋಧಿ ಅಲೆಯಿಂದ 40 ಸ್ಥಾನ ಪಡೆಯುವಂತಾಗಿತ್ತು.
ಅದೇ ರೀತಿ ಕಾಂಗ್ರೆಸ್ ಸರ್ಕಾರವೂ 2018 ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯಿಂದ 40 ಸ್ಥಾನಕ್ಕೆ ಕುಸಿಯುತ್ತಿತ್ತು. ಕಾಂಗ್ರೆಸ್ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಬೆಂಬಲ ನೀಡಿದ್ದರಿಂದ ಲಿಂಗಾಯತರು ಕಾಂಗ್ರೆಸ್ ಮತ ಹಾಕಿದ್ದಾರೆ ಎಂದರು. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಿದ್ದರೆ, ಬಿಜೆಪಿ 150 ಸ್ಥಾನ ಪಡೆಯುತ್ತಿತ್ತು. ಕಾಂಗ್ರೆಸ್ ಸೋಲಿಗೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಕಾರಣವಲ್ಲ ಎಂದರು.
ಏಕತೆಗೆ ಧಕ್ಕೆಯಾಗಿಲ್ಲ: ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ಆದಷ್ಟು ಬೇಗ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಕೇಂದ್ರ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲು ಸಮಯಾವಕಾಶ ನೀಡುತ್ತೇವೆ. ಕೇಂದ್ರ ಸರ್ಕಾರ ಇದುವರೆಗೂ ರಾಜ್ಯ ಸರ್ಕಾರದ ಶಿಫಾರಸನ್ನು ತಿರಸ್ಕರಿಸಿಲ್ಲ. ಕೆಲವರು ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವುದರಿಂದ ದೇಶದ ಏಕತೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ತಿಳಿಸಿದರು. ರಾಜ್ಯ ಸರ್ಕಾರದಲ್ಲಿಯೂ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತಿಲ್ಲ. ಈ ಸರ್ಕಾರ ಅದನ್ನು ಸರಿಪಡಿಸಬೇಕು. ಎಂ.ಬಿ.ಪಾಟೀಲರಿಗೆ ಸಚಿವ ಸ್ಥಾನ ತಪ್ಪಲು ಲಿಂಗಾಯತ ಹೋರಾಟವೇ ಕಾರಣವಲ್ಲ.
ಹಿಂದಿನ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಎಂ.ಬಿ.ಪಾಟೀಲ್ ಮತ್ತು ವಿಧಾನ ಪರಿಷತ್ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ ಅವರಿಗೆ ಅರ್ಹತೆ ಮೇಲೆ ಸಚಿವ ಸ್ಥಾನ ಕೊಡಬೇಕು. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಗದಗಿನ ತೋಂಟದಾರ್ಯ ಮಠದ ಸ್ವಾಮೀಜಿ, ಭಾಲ್ಕಿ ಸ್ವಾಮೀಜಿ, ಕಿತ್ತೂರು ಕಲ್ಮಠದ ಸ್ವಾಮೀಜಿ ಹಾಗೂ ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಪಸ್ಥಿತರಿದ್ದರು.
ಬಸವ ತತ್ವ ಒಪ್ಪಿದರೆ ಒಗ್ಗೂಡಲು ಸಿದ್ಧ: ರಾಜಕೀಯ ಪ್ರಾತಿನಿಧ್ಯಕ್ಕಾಗಿ ವೀರಶೈವ ಮತ್ತು ಲಿಂಗಾಯತರು ಒಂದಾಗಲು ಪ್ರಯತ್ನ ನಡೆಸಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ವೀರಶೈವರು ಬಸವ ತತ್ವ ಒಪ್ಪಿ ಬರುವುದಾದರೆ ನಾವೇ ಅವರ ಮನೆಗೆ ಹೋಗುತ್ತೇವೆ. ಇಲ್ಲದಿದ್ದರೆ, ಒಂದಾಗಲು ಸಾಧ್ಯವಿಲ್ಲ ಎಂದು ಹೇಳಿದರು.