ಅಹಮ್ಮದಾಬಾದ್: ಆಮ್ ಆದ್ಮಿ ಪಕ್ಷದ ವಿರುದ್ಧ ಆರೋಪಿಸಿದ್ದಕ್ಕೆ ತಿರುಗೇಟು ನೀಡಿರುವ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಕಥೆ ಮುಗಿದು ಹೋಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಸರ್ಕಾರದ ರಸ್ತೆ ಡಾಂಬಾರಿಗಿಂತ ರಾಗಿ ಹಿಟ್ಟೇ ಹೆಚ್ಚು ಸ್ಟ್ರಾಂಗ್!: ಕಾಂಗ್ರೆಸ್ ಟೀಕೆ
ಮುಂದಿನ ವರ್ಷ ಚುನಾವಣೆ ನಡೆಯಲಿರುವ ಗುಜರಾತ್ ನಲ್ಲಿ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಈ ಸಂದರ್ಭದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಪಂಜಾಬ್ ನಲ್ಲಿರುವ ಆಮ್ ಆದ್ಮಿ ಸರ್ಕಾರ ಗುಜರಾತ್ ನಲ್ಲಿ ಚುನಾವಣಾ ಪ್ರಚಾರದ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಇದರಿಂದ ರಾಜ್ಯ ದಿವಾಳಿಯಾಗಿ, ನೌಕರರಿಗೆ ಸಂಬಳ ಕೊಡಲು ಹಣವಿಲ್ಲದಂತಾಗಲಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಯಾರು ಈ ಪ್ರಶ್ನೆ ಕೇಳಿದ್ದು ಎಂದು ಕೇಜ್ರಿವಾಲ್ ಪತ್ರಕರ್ತರನ್ನು ಪ್ರಶ್ನಿಸಿದಾಗ, ಇದು ಕಾಂಗ್ರೆಸ್ ಮುಖಂಡರ ಆರೋಪ ಎಂದಿದ್ದರು. ಆಗ ಕೇಜ್ರಿವಾಲ್, ಕಾಂಗ್ರೆಸ್ ಅವನತಿಯಾಗಿದೆ. ಕಾಂಗ್ರೆಸ್ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಬೇಡಿ. ಜನರು ಕೂಡಾ ಈ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಆಮ್ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್ ಗಿಂತ ಬಿಜೆಪಿ ಪ್ರಮುಖ ಎದುರಾಳಿಯಾಗಿದೆ. ಜನರು ಕಾಂಗ್ರೆಸ್ ಗೆ ಮತ ಹಾಕಿ ತಮ್ಮ ಮತ ಹಾಳು ಮಾಡಬೇಡಿ. ಆ ಪಕ್ಷ ಎಲ್ಲಿಯೂ ಇಲ್ಲ. ಗುಜರಾತ್ ನಲ್ಲಿ ಬಿಜೆಪಿ ಆಡಳಿತ ನಡೆಸುವುದು ಜನರಿಗೆ ಬೇಕಾಗಿಲ್ಲ. ರಾಜ್ಯದಲ್ಲಿ ಮತದಾರರಿಗೆ ಆಮ್ ಆದ್ಮಿ ಪಕ್ಷ ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ಕೇಜ್ರಿವಾಲ್ ಹೇಳಿದರು.