Advertisement

ಕೈ ಪಾಳಯದಲ್ಲಿ ಹಿರಿಯರ ಹಗ್ಗ ಜಗ್ಗಾಟ

06:25 AM May 31, 2018 | Team Udayavani |

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಖಾತೆ ಹಂಚಿಕೆ ಕುರಿತು ಜೆಡಿಎಸ್‌ನೊಂದಿಗಿನ ಗೊಂದಲ ಬಗೆಹರಿಸಿಕೊಂಡಿರುವ ಕಾಂಗ್ರೆಸ್‌ ಪಕ್ಷದಲ್ಲಿಯೇ ಹಿರಿಯ ಶಾಸಕರು ಎಷ್ಟು ಜನ ಸಂಪುಟ ಸೇರಬೇಕು ಎನ್ನುವ ಗೊಂದಲ ಮುಂದುವರಿದಿದೆ ಎಂದು ತಿಳಿದು ಬಂದಿದೆ.

Advertisement

ನಾಲ್ವರು ಹಿರಿಯ ಶಾಸಕರು ಸಂಪುಟ ಸೇರಲಿ, ಉಳಿದ ಹಿರಿಯ ಶಾಸಕರು ಮುಂದಿನ ವರ್ಷ ಲೋಕಸಭೆ ಚುನಾ ವಣೆ ಇರುವುದರಿಂದ ಪಕ್ಷ ಸಂಘಟನೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಗೆಲ್ಲಿಸಿಕೊಂಡು ಬರಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಪ್ರಮುಖವಾಗಿ ಹಿಂದಿನ ಸರ್ಕಾರದಲ್ಲಿ ಹಿರಿಯ ಶಾಸಕರಾದ ಆರ್‌. ವಿ.ದೇಶಪಾಂಡೆ, ಎಚ್‌.ಕೆ. ಪಾಟೀಲ್‌, ಎಂ.ಬಿ.ಪಾಟೀಲ್‌,ರಾಮಲಿಂಗಾರೆಡ್ಡಿ, ರೋಷನ್‌ ಬೇಗ್‌, ಕೆ.ಜೆ.ಜಾರ್ಜ್‌, ಶಾಮನೂರು ಶಿವಶಂಕರಪ್ಪ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈಗ ಸಮ್ಮಿಶ್ರ ಸರ್ಕಾರದಲ್ಲಿಯೂ ಎಲ್ಲರೂ ಮತ್ತೆ ಸಂಪುಟ ಸೇರುವ ಕಸರತ್ತು ಆರಂಭಿಸಿದ್ದಾರೆ.

ನಾಲ್ವರಿಗೆ ಸಂಪುಟ ಸೇರಿ ಉಳಿದವರು ಪಕ್ಷ ಸಂಘಟನೆ ಮಾಡಲು ಸೂಚಿಸಿರುವುದು ಎಲ್ಲ ಹಿರಿಯ ಶಾಸಕರನ್ನು ನಿದ್ದೆಗೆಡಿಸಿದೆ ಎನ್ನಲಾಗುತ್ತಿದೆ.

ಆದರೆ, ಹೈಕಮಾಂಡ್‌ ಸೂಚನೆಯ ನಂತರವೂ ಸಮ್ಮಿಶ್ರ ಸರ್ಕಾರದಲ್ಲಿ ಅನುಭವಿ ಸಚಿವರು ಇಲ್ಲದಿದ್ದರೆ, ಪ್ರತಿಪಕ್ಷವನ್ನು ಎದುರಿಸುವುದು ಕಷ್ಟ ಎಂಬ ವಾದ ಮುಂದಿಟ್ಟು ಸಂಪುಟ ಸೇರಲು ನಿರಂತರ ಪ್ರಯತ್ನ ನಡೆಸಿದ್ದಾರೆ
ಎಂದು ತಿಳಿದು ಬಂದಿದೆ.

Advertisement

ಅಧ್ಯಕ್ಷ ಗಾದಿಯ ಲೆಕ್ಕಾಚಾರ: ಪರಮೇಶ್ವರ್‌ ಅವರಿಂದ ತೆರವಾಗುವ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಅಥವಾ ಒಕ್ಕಲಿಗ ಸಮುದಾಯದವರಿಗೆ ನೀಡುವ ಬಗ್ಗೆ ಹೈ ಕಮಾಂಡ್‌ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. 

ಹೀಗಾಗಿ ಒಕ್ಕಲಿಗ ಸಮುದಾಯದ ಹಿರಿಯ ನಾಯಕ ಡಿ.ಕೆ.ಶಿವಕುಮಾರ್‌, ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್‌ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.

ಆದರೆ, ಇಬ್ಬರೂ ನಾಯಕರು ಅಧ್ಯಕ್ಷ ಸ್ಥಾನದ ಜೊತೆಗೆ ಸಂಪುಟದಲ್ಲಿಯೂ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಈ ಬಗ್ಗೆ ಹೈಕಮಾಂಡ್‌ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ
ಎನ್ನ ಲಾಗಿದೆ. ಈ ನಡುವೆ ಇಬ್ಬರು ನಾಯಕರ ಬದಲು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲರನ್ನು ಅಧ್ಯಕ್ಷರನ್ನಾಗಿ ಮಾಡು ವಂತೆ ಸಿದ್ದರಾಮಯ್ಯ ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಜೂನ್‌ 2ಕ್ಕೆ ಆತ್ಮಾವಲೋಕನ ಸಭೆ
ಬೆಂಗಳೂರು
: ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಪಡೆಯುವಲ್ಲಿ ವಿಫ‌ಲವಾಗಿರುವ ಕಾಂಗ್ರೆಸ್‌, ಜೂನ್‌ 2ರಂದು ಆತ್ಮಾವಲೋಕನ ಸಭೆ ನಡೆಸಲು ತೀರ್ಮಾನಿಸಿದೆ.

ಅಲ್ಲದೆ, ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆಗೆ ಈಗಿನಿಂದಲೇ ಕಾರ್ಯ ಪ್ರವೃತ್ತರಾಗುವ ಕುರಿತು ಚರ್ಚಿಸಲು ನಿರ್ಧರಿಸಿದೆ.

ಸಭೆಯಲ್ಲಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್‌, ಕೆ.ಸಿ.ವೇಣುಗೋಪಾಲ್‌, ಡಿ.ಕೆ.ಶಿವಕುಮಾರ್‌ ಹಾಗೂ ರಾಜ್ಯ ಉಸ್ತುವಾರಿ ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಪಾಲ್ಗೊಳ್ಳುವಂತೆ ಎಲ್ಲಾ ಜಿಲ್ಲಾಧ್ಯಕ್ಷರು, ಎಲ್ಲಾ ಘಟಕಗಳ ಅಧ್ಯಕ್ಷರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ ಘೋರ್ಪಡೆ ಸೂಚನೆ ನೀಡಿದ್ದಾರೆ.

ಕರ್ನಾಟಕದಲ್ಲಿ ಸರ್ಕಾರ ಇಲ್ಲದೇ ಇರುವುದರಿಂದ ಸ್ವರ್ಗವೇನೂ ಬೀಳುವುದಿಲ್ಲ. ಬೆಲ್ಜಿಯಂನಲ್ಲಿ 9 ತಿಂಗಳ
ಕಾಲ ಸರ್ಕಾರ ಇರಲೇ ಇಲ್ಲ. ಇಟಲಿಯಲ್ಲಿ ಈಗ ಸರ್ಕಾರವೇ ಇಲ್ಲ. ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಪೂರ್ಣ ಪ್ರಮಾಣದ ಸರ್ಕಾರ ಹೊಂದಲು ಕನಿಷ್ಠ 15 ದಿನಗಳನ್ನಾದರೂ ನೀಡಬೇಕು.

–  ಪಿ.ಚಿದಂಬರಂ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next