ಜೈಪುರ:”ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸಲೇಬೇಕು. ಈ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಮಂಗಳವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವೆ’- ಹೀಗೆಂದು ಘೋಷಣೆ ಮಾಡಿದ್ದು ರಾಜಸ್ಥಾನದ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್ ನಡುವಿನ ಬಾಂಧವ್ಯ ಈಗಾಗಲೇ ಹಳಸಿದೆ. ಅಲ್ಲದೇ, ವರ್ಷಾಂತ್ಯಕ್ಕೆ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಯೂ ಇದ್ದು, ಚುನಾವಣೆ ಸಮೀಪಿಸುತ್ತಿರುವಂತೆಯೇ ಪೈಲಟ್ ಅವರ ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಭಾನುವಾರ ಜೈಪುರದಲ್ಲಿ ಮಾತನಾಡಿದ ಅವರು, “ನಾವು ಪ್ರತಿಪಕ್ಷದಲ್ಲಿ ಇದ್ದಾಗ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ ನಡೆಸಿದ್ದ 45 ಸಾವಿರ ಕೋಟಿ ರೂ. ಮೌಲ್ಯದ ಗಣಿ ಅಕ್ರಮದ ಬಗ್ಗೆ ತನಿಖೆ ನಡೆಸುವ ವಾಗ್ಧಾನ ಮಾಡಿದ್ದೆವು. ಇದುವರೆಗೆ ಅದರ ಬಗ್ಗೆ ಕ್ರಮವನ್ನೇ ಕೈಗೊಳ್ಳಲಾಗಿಲ್ಲ. ರಾಜ್ಯದಲ್ಲಿ ಚುನಾವಣೆಗೆ ಆರರಿಂದ ಏಳು ತಿಂಗಳು ಮಾತ್ರ ಬಾಕಿ ಉಳಿದಿದೆ. ವಾಗ್ಧಾನದಂತೆ ಕ್ರಮ ಕೈಗೊಳ್ಳದೇ ಇದ್ದರೆ, ಗೆಹ್ಲೋಟ್ ಮತ್ತು ರಾಜೇ ನಡುವೆ ಏನೋ ಒಳ ಒಪ್ಪಂದ ಉಂಟಾಗಿದೆ ಎಂಬ ಭಾವನೆ ಮೂಡುವುದು ಖಚಿತ. ಜತೆಗೆ ಪಕ್ಷದ ಕಾರ್ಯಕರ್ತರಲ್ಲಿ ಕೂಡ ತಪ್ಪು ಭಾವನೆ ಉಂಟಾಗಲು ಕಾರಣವಾದೀತು’ ಎಂದು ಎಚ್ಚರಿಕೆ ನೀಡಿದ್ದಾರೆ.
ತನಿಖೆ ನಡೆಸಲೇಬೇಕು ಎಂಬ ಬಗ್ಗೆ ಒತ್ತಡ ಹೇರುವ ನಿಟ್ಟಿನಲ್ಲಿ ಏ.11ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿಯೂ ಪ್ರಕಟಿಸಿದರು. ಆ ದಿನ ಮಹಾತ್ಮಾ ಜ್ಯೋತಿಬಾ ಫುಲೆ ಅವರ ಜನ್ಮದಿನವೂ ಆಗಿದೆ. ಅವರು ಸೈನಿ ಸಮುದಾಯಕ್ಕೆ ಸೇರಿದವರು. ಗೆಹ್ಲೋಟ್ ಅವರೂ ಇದೇ ಸಮುದಾಯಕ್ಕೆ ಸೇರಿದವರು.