ಬೆಂಗಳೂರು :ಚುನಾವಣೆ ಹತ್ತಿರವಾಗುತ್ತಿರುವಂತೆ ಕಾಂಗ್ರೆಸ್ ಹೈ ಕಮಾಂಡ್ ಮುಂದಿನ ಚುನಾವಣೆಯಲ್ಲಿ ಸೋಲುವ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದಾರೆ. ಶತಾಯ ಗತಾಯ 2018 ರ ಚುನಾವಣೆ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಸೋಲುವ ಸೂಚನೆ ಇದ್ದರೆ ಹಾಲಿ ಶಾಸಕರನ್ನು ಕೈ ಬಿಟ್ಟು ಗೆಲುವಿನ ಕುದುರೆಗಳನ್ನು ಪತ್ತೆ ಹಚ್ಚಲು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿರುವ ರಾಹುಲ್ ಗಾಂಧಿ ಪಕ್ಷದ ನಾಯಕರಲ್ಲಿ ಈಗಿರುವ ಒಗ್ಗಟ್ಟು ಮತ್ತು ಪಕ್ಷ ಹಾಗೂ ಸರ್ಕಾರದ ಬಗ್ಗೆ ಇರುವ ಇಮೇಜನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗಲು ಸೂಚಿಸಿದ್ದು, ಚುನಾವಣೆ ಸಿದ್ದತೆ ಜೊತೆಗೆ ಹಾಲಿ ಇರುವ ಶಾಸಕರ ಬಗ್ಗೆ ಪ್ರತಿ ಕ್ಷೇತ್ರದಲ್ಲಿಯೂ ಜನರ ಅಭಿಪ್ರಾಯ ಏನಿದೆ. ಗೆಲ್ಲುವ ಪ್ರಮಾಣ ಮತ್ತು ಸೋಲುವ ಸಂಭಾವ್ಯತೆ ಎಷ್ಟರ ಮಟ್ಟಿಗೆ ಎನ್ನುವನ್ನು ಖಚಿತ ಪಡಿಸಿಕೊಂಡು ಮಾಹಿತಿ ನೀಡುವಂತೆ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ.
ವಿಭಾಗ ಮಟ್ಟದಲ್ಲಿ ಸಮೀಕ್ಷೆ: ರಾಜ್ಯ ಕಾಂಗ್ರೆಸ್‌ನಲ್ಲಿ ಹಾಲಿ ಇರುವ 124 ಶಾಸಕರಿಗೆ ಎಲ್ಲರಿಗೂ ಈಗಲೇ ಟಿಕೆಟ್ ಖಾತರಿ ನೀಡದಂತೆ ಸೂಚಿಸಿದ್ದು, ಪಕ್ಷ ನಡೆಸುವ ಸಮೀಕ್ಷೆ, ಕ್ಷೇತ್ರಗಳಲ್ಲಿ ಜನರ ಅಭಿಪ್ರಾಯ ಯಾರ ಪರವಾಗಿದೆ. ಪರ್ಯಾಯ ಅಭ್ಯರ್ಥಿಗಳ ಬಗ್ಗೆ ಜನರ ಮನಸ್ಥಿತಿ ಹೇಗಿದೆ ಎಲ್ಲವನ್ನು ತಿಳಿದುಕೊಂಡು ಅಂತಹ ಕ್ಷೇತ್ರಗಳಲ್ಲಿ ಗೆಲ್ಲುವ ಸಂಭವ ಇರುವ ಪರ್ಯಾಯ ಅಭ್ಯರ್ಥಿಗಳನ್ನು ಪತ್ತೆ ಹಚ್ಚಲು ತಿಳಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರ್ಗಿ ಕಂದಾಯ ವಿಭಾಗಗಳಲ್ಲಿ ಕೆಪಿಸಿಸಿ ಬೇರೆ ಬೇರೆ ಖಾಸಗಿ ಎಜನ್ಸಿಗಳ ಮೂಲಕ ಸಮೀಕ್ಷೆ ನಡೆಸಿ ವರದಿ ಪಡೆಯಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಇದಲ್ಲದೇ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಸಂದರ್ಭದಲ್ಲಿಯೂ ಕೆಪಿಸಿಸಿ ಜನರ ಅಭಿಪ್ರಾಯ ಸಂಗ್ರಹಿಸಲು ಒಂದು ಸಮೀಕ್ಷೆ ನಡೆಸುತ್ತಿದ್ದು ಅದರಲ್ಲಿ ಬರುವ ಅಭಿಪ್ರಾಯವನ್ನೂ ಗಮನದಲ್ಲಿಟ್ಟುಕೊಂಡು ಹಾಲಿ ಇರುವ ಶಾಸಕರ ಗೆಲುವಿಗೆ ಎಷ್ಟರ ಮಟ್ಟಿಗೆ ಹತ್ತಿರ ಇದ್ದಾರೆ. ಸೋಲುವ ಶೇಕಡಾವಾರು ಪ್ರಮಾಣ ಎಷ್ಟಿದೆ ಎನ್ನುವುದನ್ನೂ ಪರಿಶೀಲಿಸಿ, ಒಂದು ವೇಳೆ, ಶಾಸಕರ ವಿರುದ್ಧ ಸೋಲುವ ಶೇಕಡಾವಾರು ಪ್ರಮಾಣ ಶೇಕಡಾ 10 ಕ್ಕಿಂತ ಹೆಚ್ಚಿದ್ದರೆ, ಅದನ್ನು ಸರಿಪಡಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಶಾಸಕರಿದ್ದರೆ, ಅವರ ಬದಲಿಗೆ ಪರ್ಯಾಯವಾಗಿ ಕ್ಷೇತ್ರದಲ್ಲಿ ಯಾರನ್ನು ಅಭ್ಯರ್ಥಿ ಮಾಡಬಹುದೆಂದು ಪಕ್ಷ ಗುರುತಿಸಿಕೊಳ್ಳಲು ನಿರ್ಧರಿಸಿದೆ.
ಒಂದು ವೇಳೆ, ಹಾಲಿ ಶಾಸಕರು ಈಗಿನ ಸಮೀಕ್ಷೆಯಲ್ಲಿ ಸೋಲುವ ಪ್ರಮಾಣ ಶೇಕಡಾ 5 ಕ್ಕಿಂತ ಕಡಿಮೆ ಇದ್ದರೆ, ಅದನ್ನು ಚುನಾವಣೆಯ ಒಳಗಾಗಿ ಗೆಲುವಾಗಿ ಪರಿವರ್ತಿಸಿಕೊಳ್ಳಲು ಬೇಕಾದ ಪ್ರಯತ್ನ ಮಾಡುವಂತೆಯೂ ಹಾಲಿ ಶಾಸಕರಿಗೆ ಸೂಚಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಸಧ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದ್ದರೂ, ಕೆಲವು ಕ್ಷೇತ್ರಗಳಲ್ಲಿ ಶಾಸಕರ ವಯಕ್ತಿಕ ನಡವಳಿಕೆಯಿಂದ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿರುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಕ್ಷೇತ್ರಗಳಲ್ಲಿ ಹಾಲಿ ಶಾಸಕರನ್ನೂ ಬದಲಾಯಿಸಲು ಹೈ ಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. ಚುನಾವಣೆಗೂ ಮುಂಚೆಯೇ ಜನರ ಅಭಿಪ್ರಾಯದ ಅಧಾರದ ಮೇಲೆ ಕಾಂಗ್ರೆಸ್ ಹಾಲಿ ಶಾಸಕರ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.
ಟಿಕೆಟ್ ಖಾತ್ರಿಗಾಗಿ ಕಾಯುತ್ತಿರುವ ಶಾಸಕರು:
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವ ಆಲೋಚನೆಯಲ್ಲಿರುವ ಇಪ್ಪತ್ತಕ್ಕೂ ಹೆಚ್ಚು ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಕೆಪಿಸಿಸಿ ಅಧ್ಯಕ್ಷರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸ್ಥಿತಿಗತಿ ಹಾಗೂ ತಾವು ಕಾಂಗ್ರೆಸ್ ಸೇರಿದರೆ ಟಿಕೆಟ್ ಸಿಗುವುದಾದರೆ ತಾವು ಕೈ ಪಾಳಯ ಸೇರುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ತಕ್ಷಣ ಪರಮೇಶ್ವರ್ ಯಾರಿಗೂ ತಕ್ಷಣಕ್ಕೆ ಟಿಕೆಟ್ ಭರವಸೆ ನೀಡದೇ ಪರಿಸ್ಥಿತಿ ನೋಡಿಕೊಂಡು ಪಕ್ಷಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.