ನವದೆಹಲಿ:ಗಾಂಧಿ ಕುಟುಂಬದ ನಾಯಕತ್ವದ ವಿರುದ್ಧ ಬಹಿರಂಗವಾಗಿ ಸಿಡಿದೆದ್ದಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದು, ಸಮಾಜವಾದಿ ಪಕ್ಷದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬೋಕೋ ಹರಾಂ ಉಗ್ರರಿಂದ ನರಮೇಧ; ನೈಜೀರಿಯಾದಲ್ಲಿ 50 ರೈತರ ಹತ್ಯೆ, ಹಲವರು ಚಿಂತಾಜನಕ
ಕಾಂಗ್ರೆಸ್ ನ ಹಿರಿಯ ಮುಖಂಡ ಕಪಿಲ್ ಸಿಬಲ್ ಅವರು ಮೇ 16ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವ ಬೆಳವಣಿಗೆ ನಡೆದಿದೆ.
ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಸ್ವತಃ ಕಪಿಲ್ ಸಿಬಲ್ ಬುಧವಾರ (ಮೇ 25) ವಿಷಯವನ್ನು ಘೋಷಿಸುವ ಮೂಲಕ ಮಾಧ್ಯಮದವರನ್ನು ಅಚ್ಚರಿಗೊಳಿಸಿರುವುದಾಗಿ ವರದಿ ತಿಳಿಸಿದೆ. ವಾರದ ಹಿಂದೆ ಕಾಂಗ್ರೆಸ್ ಚಿಂತನ ಶಿಬಿರ ನಡೆದಿದ್ದರೂ ಕೂಡಾ ಸಿಬಲ್ ರಾಜೀನಾಮೆ ವಿಚಾರ ರಹಸ್ಯವಾಗಿಟ್ಟಿರುವುದು ಅಚ್ಚರಿ ತಂದಿರುವುದಾಗಿ ವರದಿ ವಿವರಿಸಿದೆ.
ನಾನು ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದೇನೆ. ಸಂಸತ್ ನಲ್ಲಿ ಸ್ವತಂತ್ರವಾಗಿ ಧ್ವನಿ ಎತ್ತುವುದು ತುಂಬಾ ಮುಖ್ಯವಾಗಿದೆ. ಒಂದು ವೇಳೆ ಸ್ವತಂತ್ರವಾಗಿ ನಾವು ಧ್ವನಿ ಎತ್ತಿದಲ್ಲಿ ಜನರು ಕೂಡಾ ನಮ್ಮನ್ನು ಯಾವುದೇ ಪಕ್ಷದ ಜೊತೆ ಸೇರಿಲ್ಲ ಎಂಬುದಾಗಿ ವಿಶ್ವಾಸ ಇಟ್ಟಿರುತ್ತಾರೆ ಎಂದು ಕಪಿಲ್ ಸಿಬಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದ ಜಿ 23 ಗುಂಪಿನಲ್ಲಿ ಕಪಿಲ್ ಸಿಬಲ್ ಕೂಡಾ ಒಬ್ಬರಾಗಿದ್ದು, ಎರಡು ವರ್ಷದಿಂದ ಗಾಂಧಿ ಕುಟುಂಬವನ್ನು ಹೊರತುಪಡಿಸಿ ಬೇರೆಯವರಿಗೆ ನಾಯಕತ್ವ ವಹಿಸಿಕೊಡಬೇಕೆಂದು ಜಿ 23 ಮುಖಂಡರು ಬಹಿರಂಗವಾಗಿ ಒತ್ತಾಯಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.