ಬೆಂಗಳೂರು: ಆಡಳಿತಾರೂಢ ಬಿಜೆಪಿಗೆ ಮೊದಲ ಹಂತದಲ್ಲಿ ಈಗಾಗಲೇ 36 ರೌಡಿಶೀಟರ್‌ಗಳು ಸೇರ್ಪಡೆ ಆಗಿದ್ದು ಇನ್ನೂ 24 ರೌಡಿಗಳ ಸೇರ್ಪಡೆ ಬಾಕಿ ಇದೆ ಎಂದು ಕೆಪಿಸಿಸಿ ವಕ್ತಾರರಾದ ರಮೇಶ್‌ಬಾಬು, ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಒಟ್ಟು 150 ರೌಡಿಗಳನ್ನು ಸೇರಿಸಿಕೊಳ್ಳಲು ಬಿಜೆಪಿ ಪಟ್ಟಿ ಮಾಡಿದೆ ಎಂದು ದೂರಿದರು. ಬಿಜೆಪಿ ಸೇರಲು ಮುಂದಾಗಿರುವ 60 ರೌಡಿಗಳ ಪಟ್ಟಿ ಬಿಡುಗಡೆ ಮಾಡಿದರು.
ಈಗಾಗಲೇ 36 ರೌಡಿಗಳ ಪೈಕಿ ಸೈಲೆಂಟ್ ಸುನೀಲ್ ಹಾಗೂ 9 ಇತರರು. ವಿಲ್ಸನ್ ಗಾರ್ಡನ್ ನಾಗ ಹಾಗೂ 6 ಇತರರು, ನಾಗಮಂಗಲದ ಫೈಟರ್ ರವಿ ಹಾಗೂ 5 ಇತರರು, ಬೆತ್ತನಗೆರೆ ಶಂಕರ ಹಾಗೂ 8 ಇತರರು, ಈತ ಈಗಾಗಲೇ ಹೆಸರು ಬದಲಾವಣೆ ಮಾಡಿಕೊಂಡು ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ಒಬ್ಬ ರೌಡಿ ನಲ್ಲೂರು ಶಂಕರೇಗೌಡ ಎಂದು ಹೆಸರು ಬದಲಾವಣೆ ಮಾಡಿಕೊಂಡು ಸಂಸದ ಪ್ರತಾಪ್ ಸಿಂಹ ಹಾಗೂ ಸಿದ್ದರಾಜು ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದಾನೆ. ಒಂಟೆ ರೋಹಿತ್ ಹಾಗೂ ಇತರರು, ಕುಣಿಗಲ್ ಗಿರಿ ಈತ ಜೈಲಿನಲ್ಲಿದ್ದು, ಅಲ್ಲಿಂದಲೇ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಮಂಜುನಾಥ್ ಅಲಿಯಾಸ್ ಉಪ್ಪಿ, ಸೈತಾನ್ ರವಿ (ಸಿ.ಟಿ ರವಿ) ರೌಡಿ ಶಿಟರ್ ಆಗಿದ್ದಾರೆ. ಮೈಸೂರು ಯುವ ದಸರಾದ ಅಧ್ಯಕ್ಷರು ಸೇರಿದಂತೆ ಮುಂದಿನ ಹಂತದಲ್ಲಿ ಉಳಿದ 24ರೌಡಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.
ಆರ್‌ಎಸ್‌ಎಸ್ ಕಡೆಯಿಂದ ನಿರ್ದೇಶನ: ಈ ಬಗ್ಗೆ ಬಿಜೆಪಿ ಸ್ನೇಹಿತರೊಬ್ಬರನ್ನು ಕೇಳಿದಾಗ ನಮಗೆ ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಕಡೆಯಿಂದ ನಿರ್ದೇಶನವಿದೆ. ಈ ವಿಚಾರವಾಗಿ ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಪ್ರಯೋಗ ಮಾಡಿದ್ದಾರೆ. ಎಲ್ಲಿ ಮತ ಸಿಗುವುದಿಲ್ಲವೋ ಅಲ್ಲಿ ರೌಡಿಗಳನ್ನು ಕಳಿಸಿ ಪ್ರಚಾರ ಮಾಡಿಸಿ ಯಶಸ್ವಿಯಾಗಿದ್ದೇವೆ. ಈಗ ಅದನ್ನು ಕರ್ನಾಟಕದಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ಸಿ.ಟಿ.ರವಿ ಮನೆ ಮೇಲೂ ರೈಡ್ ಆಗಿದೆ: ಸಿ.ಟಿ.ರವಿ ಅವರು ನನ್ನ ಮೇಲೂ ರೌಡಿ ಶೀಟರ್ ಇತ್ತು ಎಂದು ಒಪ್ಪಿಕೊಂಡಿದ್ದಾರೆ. ಸಿ.ಟಿ.ರವಿ ಅವರ ಮೇಲೆ 8 ಜೂನ್ 2012ರಲ್ಲಿ ಐಟಿ ರೈಡ್ ಆಗಿತ್ತು. ಆರ್ ಟಿಐ ಕಾರ್ಯಕರ್ತ ಎ.ಸಿ.ಕುಮಾರ್ ಎಂಬುವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿ, 2004ರಲ್ಲಿ ಚುನಾವಣಾ ಆಯೋಗಕ್ಕೆ ರವಿ ಅವರು ಸಲ್ಲಿಸಿರುವ ಅಫಿಡವಿಟ್ ನಲ್ಲಿ ಒಟ್ಟು ಆಸ್ತಿ 10.1 ಲಕ್ಷ ರೂ.ಹಾಗೂ 1.2 ಲಕ್ಷ ರೂ ವಾರ್ಷಿಕ ಆದಾಯ ಎಂದು ನಮೂದಿಸಲಾಗಿತ್ತು. ಆದರೆ 2012ರ ಅಫಿಡವಿಟ್ ನಲ್ಲಿ ಇವರ ಆದಾಯ 50 ಕೋಟಿ ಘೋಷಣೆ ಮಾಡಿದ್ದಾರೆ ಎಂದು ದೂರು ನೀಡಿದ್ದಾಗ ಐಟಿ ದಾಳಿ ಆಗಿತ್ತು. ಈಗ ನಮ್ಮ ಪ್ರಕಾರ ಸಿ.ಟಿ.ರವಿ ಅವರು ಬೇನಾಮಿ ಹೆಸರಿನಲ್ಲಿ 3 ಸಾವಿರ ಕೋಟಿ ರೂ.ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ದೂರಿದರು.