Advertisement

ಕಾಂಗ್ರೆಸ್ ಪಕ್ಷಕ್ಕೆ ಡಾ.ಅಂಬೇಡ್ಕರ್ ಅವರ ಹೆಸರು ಹೇಳಿ ಮತ ಕೇಳುವ ಹಕ್ಕಿಲ್ಲ: ಸಿ.ಟಿ.ರವಿ

04:06 PM Jul 11, 2021 | Team Udayavani |

ಬೆಂಗಳೂರು: ದೇಶದ ಸಂವಿಧಾನ ಕರ್ತೃ ಮತ್ತು ಮಹಾನ್ ನಾಯಕರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಅತಿ ಹೆಚ್ಚು ಅನುಷ್ಠಾನಕ್ಕೆ ತಂದ ಮತ್ತು ಅವರಿಗೆ ಗರಿಷ್ಠ ಗೌರವ ನೀಡಿದ ಪಕ್ಷ ಬಿಜೆಪಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ವರ್ಚುವಲ್ ಆಗಿ ಸೇರಿ ಉದ್ಘಾಟಿಸಿ ಅವರು ಮಾತನಾಡಿದರು. ಎಸ್‍ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ಅವರೂ ವರ್ಚುವಲ್ ಆಗಿ ಸಭೆಯಲ್ಲಿ ಭಾಗವಹಿಸಿದ್ದರು.

ಡಾ. ಅಂಬೇಡ್ಕರ್ ಅವರನ್ನು ಸೋಲಿಸಿದ ಮತ್ತು ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಅವರ ಹೆಸರು ಹೇಳಿ ಮತ ಕೇಳುವ ಯಾವ ಹಕ್ಕೂ ಉಳಿದಿಲ್ಲ. ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ಅವಕಾಶವನ್ನೂ ಕಾಂಗ್ರೆಸ್ ನೀಡಲಿಲ್ಲ ಎಂದು ಅವರು ಟೀಕಿಸಿದರು.

ಇದನ್ನೂ ಓದಿ:ಜೆ.ಪಿ.ನಡ್ಡಾ ಗೋವಾ ಭೇಟಿ ರದ್ದು

ಡಾ.ಅಂಬೇಡ್ಕರ್ ಅವರು ಹುಟ್ಟಿದ ಮಹುವಾ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ಅದನ್ನು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸುವ ಕೆಲಸವನ್ನು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಮಾಡಿದೆ. ದೀಕ್ಷಾ ಭೂಮಿ, ಕರ್ಮ ಭೂಮಿ ಸೇರಿದಂತೆ ಅವರು ಕಾರ್ಯನಿರ್ವಹಿಸಿದ ಎಲ್ಲೆಡೆ ಅಭಿವೃದ್ಧಿ ಪಡಿಸುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡಿದೆ. ಅದನ್ನು ದಲಿತರು, ಬುದ್ಧಿಜೀವಿಗಳಿಗೆ ತಿಳಿಸುವ ಕಾರ್ಯ ನಡೆಸಬೇಕು ಎಂದು ಅವರು ಆಶಿಸಿದರು.

Advertisement

ಬಿಜೆಪಿ ದಲಿತ ವಿರೋಧಿ ಎಂಬ ಅಪಪ್ರಚಾರವನ್ನು ಪ್ರಚಾರದ ಮೂಲಕ ಎದುರಿಸಬೇಕು ಎಂದು ಅವರು ಕರೆ ನೀಡಿದರು. ಕಾಂಗ್ರೆಸ್‍ನ ಚಿಂತನೆಗಳನ್ನು ಆಧರಿಸಿದ ಡಾ. ಅಂಬೇಡ್ಕರ್ ಅವರು ಕಾಂಗ್ರೆಸ್ಸನ್ನು ಉರಿಯುವ ಮನೆ ಎಂದು ಕರೆದಿದ್ದರು. ಇದನ್ನು ತಿಳಿವಳಿಕೆ ಇರುವ ಜನರ ನಡುವೆ ಹಂಚಿಕೊಳ್ಳಬೇಕು ಎಂದು ತಿಳಿಸಿದರು.

ದೇಶ ಮೊದಲು ಎಂಬ ಚಿಂತನೆಯುಳ್ಳ ಬಿಜೆಪಿಯನ್ನು ಬಲಪಡಿಸಲು ವಿವಿಧ ಮೋರ್ಚಾಗಳು ಕಾರ್ಯ ನಿರ್ವಹಿಸಬೇಕು. ಶೇ 35ಕ್ಕೂ ಹೆಚ್ಚು ಜನಸಂಖ್ಯೆಯನ್ನು ಪ್ರತಿನಿಧಿಸುವ ಈ ಮೋರ್ಚಾವು ಗರಿಷ್ಠ ಜವಾಬ್ದಾರಿಯನ್ನು ಹೊಂದಿದೆ. ಈ ಮೋರ್ಚಾದ ಜವಾಬ್ದಾರಿ ನೀಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಧನ್ಯವಾದಗಳು. 100ಕ್ಕೂ ಹೆಚ್ಚು ದಲಿತರಿರುವ ಬೂತ್‍ನಲ್ಲಿ ದಲಿತ ಮೋರ್ಚಾದ ಸಂಘಟನೆಯನ್ನು ದೃಢಗೊಳಿಸಬೇಕು. ಎಸ್‍ಸಿ ವಿದ್ಯಾರ್ಥಿ ನಿಲಯಗಳಲ್ಲಿ ಉಸ್ತುವಾರಿಗಳನ್ನು ನೇಮಿಸಿ ವಾಸ್ತವಿಕ ಸಂಗತಿಗಳನ್ನು ತಿಳಿಸಬೇಕು. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ದಲಿತ ಸಮುದಾಯದ ಮೇಲೆ ಪ್ರಭಾವ ಬೀರಬಹುದಾದ ನಾಯಕರನ್ನು ಗುರುತಿಸಿ ಅವರಿಗೆ ಪಕ್ಷದ ಕಾರ್ಯವನ್ನು ತಿಳಿಸಬೇಕು. ಇದರಿಂದ ನಮ್ಮ ಪಕ್ಷವನ್ನು ಬಲಪಡಿಸಲು ಅವಕಾಶವಿದೆ ಎಂದರು.

ಕಾಂಗ್ರೆಸ್‍ನವರು ಬಡವರ ಬಡತನ ದೂರ ಮಾಡಲು ಯಾವುದೇ ಯೋಜನೆ ರೂಪಿಸಲಿಲ್ಲ. ಆದರೆ, ನರೇಂದ್ರ ಮೋದಿ ಅವರು ಜನ್‍ಧನ್ ಖಾತೆಗಳ ಮೂಲಕ ಬಡವರನ್ನು ಬ್ಯಾಂಕಿಂಗ್ ಜೊತೆ ಜೋಡಿಸಿದರು. ಅವರ ಖಾತೆಗೆ ಹಣ ಹಾಕಿ ಅವರ ಬದುಕಿನ ಆಲೋಚನೆಗಳನ್ನು ಬದಲಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ, ದೀನದಯಾಳ್ ವಿದ್ಯುತ್ತೀಕರಣ ಯೋಜನೆ, ಸೌಭಾಗ್ಯ ಯೋಜನೆ, ಉಜ್ವಲಾ ಗ್ಯಾಸ್ ಯೋಜನೆ- ಇವೆಲ್ಲವೂ ಬಡಜನರಿಗಾಗಿ ರೂಪಿತವಾದ ಯೋಜನೆಗಳು ಎಂದು ವಿವರಿಸಿದರು. ಕೋವಿಡ್ ಸಂಕಷ್ಟವನ್ನು ಗಮನಿಸಿ ಬಡವರಿಗೆ ಉಚಿತ ಪಡಿತರ ನೀಡುವ ಕಾರ್ಯವನ್ನೂ ಕೇಂದ್ರ ಸರಕಾರ ಮಾಡಿದೆ ಎಂದು ಸಿ.ಟಿ ರವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next