Advertisement
ಗೃಹಲಕ್ಷ್ಮಿ ಯೋಜನೆ ಅನುಷ್ಠಾನಗೊಂಡು 1 ವರ್ಷ ಪೂರೈಸಿದ್ದು, ಇದುವರೆಗೆ 26,260 ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ರಾಜ್ಯ ಸರಕಾರ ಜಮೆ ಮಾಡಿದೆ. ಎಲ್ಲ ದಾಖಲೆಗಳನ್ನು ನೀಡಿದ್ದ ಫಲಾನುಭವಿಗಳಿಗೆ ಮಾತ್ರ ಹಣ ಜಮೆ ಆಗುತ್ತಿದ್ದು, ದಾಖಲೆಗಳಿದ್ದರೂ ತಾಂತ್ರಿಕ ಅಡಚಣೆಗಳಿಂದ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ತೆಕ್ಕೆಯಿಂದ ಹೊರಗುಳಿಯುವಂತಾಗಿದೆ.
ಇತ್ತೀಚೆಗೆ ನಡೆದ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಸಭೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕರು ಮಂಡಿಸಿರುವ ಕಡತದಲ್ಲಿ ಈ ಬಗ್ಗೆ ಉಲ್ಲೇಖಗಳಿವೆ. ಪ್ರಮುಖವಾಗಿ ಇ-ಕೆವೈಸಿ ವಿಫಲಗೊಂಡಿರುವುದು, ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ವಿಲೀನಗೊಳ್ಳದೇ ಇರುವುದು, ಎನ್‌ಪಿಸಿಐ (ಭೀಮ್ ಆ್ಯಪ್) ಮ್ಯಾಪಿಂಗ್ ಮಾಡುವುದರಲ್ಲಿ ಆಗಿರುವ ವೈಫಲ್ಯಗಳ ಫಲವಾಗಿ ರಾಜ್ಯದ 1.82 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 36.40 ಕೋಟಿ ರೂ. ಹಣ ತಲುಪಿಯೇ ಇಲ್ಲ. ಸಣ್ಣ ಮಾಹಿತಿಯನ್ನೂ ಬಿಡಬೇಡಿ
ಯೋಜನೆಯಿಂದ ಹೊರಗುಳಿದಿರುವ ಯಾವುದೇ ಫಲಾನುಭವಿಯ ಸಣ್ಣ ಮಾಹಿತಿಯಿದ್ದರೂ ಕೊಡುವಂತೆ ಬ್ಯಾಂಕ್‌ಗಳು ಎಸ್‌ಎಲ್‌ಬಿಸಿಗೆ ಮನವಿ ಮಾಡಿದ್ದು, ಹೆಸರು, ಇನೀಶಿಯಲ್, ವಿಳಾಸ, ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ ಹೀಗೆ ಯಾವ್ಯಾವ ಮಾಹಿತಿ ಇದೆಯೋ ಅದೆಲ್ಲವನ್ನೂ ನೀಡುವಂತೆ ಕೋರಿದೆ. ಅಭಿಯಾನ ಮಾದರಿಯಲ್ಲಿ ಫಲಾನುಭವಿಗಳಿಗೆ ಹಣ ಜಮೆ ಆಗುವಂತೆ ಬ್ಯಾಂಕ್‌ಗಳೂ ಆಸಕ್ತಿ ವಹಿಸಬೇಕೆಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ಕೊಟ್ಟಿದ್ದಾರೆ.
Related Articles
ಗೃಹಲಕ್ಷ್ಮೀ ಯೋಜನೆ ಜಾರಿಯಾಗಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸಂತಸ ಹಂಚಿಕೊಂಡಿದ್ದ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್, ಯಾವುದೇ ಕಾರಣಕ್ಕೂ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀಯನ್ನು ನಿಲ್ಲಿಸುವ ಮಾತೇ ಇಲ್ಲ ಎಂದ್ದಿದರು. ಅಲ್ಲದೆ, ಜೂನ್ ತಿಂಗಳವರೆಗೆ ಎಲ್ಲ ಫಲಾನುಭವಿಗಳಿಗೆ ಹಣ ಜಮೆ ಆಗಿದ್ದು, ಜುಲೈ ಮತ್ತು ಆಗಸ್ಟ್ ತಿಂಗಳ ಮೊತ್ತವನ್ನೂ ಪಾವತಿಸುವುದಾಗಿ ಹೇಳಿದ್ದರು. ಆದರೆ, ಸೆಪ್ಟೆಂಬರ್ ಮುಗಿಯುತ್ತಾ ಬಂದರೂ 3 ತಿಂಗಳ ಗೃಹಲಕ್ಷ್ಮೀ ಮೊತ್ತ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ. ತಾಂತ್ರಿಕ ಸಮಸ್ಯೆಗಳಿಂದ ಮಹಿಳೆಯರ ಕೈಗೆ ಸಿಗುತ್ತಿದ್ದ 2 ಸಾವಿರ ರೂ. ಖೋತಾ ಆಗಿದೆ.
Advertisement
ರೀಲ್ಸ್ ಕಳುಹಿಸಲು ಇಂದೇ ಕೊನೇ ದಿನಗೃಹಲಕ್ಷ್ಮೀ ಫಲಾನುಭವಿಗಳು ಯೋಜನೆಯಿಂದ ಜೀವನದಲ್ಲಿ ಏನೆಲ್ಲ ಗುಣಾತ್ಮಕ ಬದಲಾವಣೆಗಳಾಗಿವೆ ಎಂಬುದನ್ನು ಪ್ರೇರಣೆಯಾಗಿಟ್ಟುಕೊಂಡು ರೀಲ್ಸ್ ಮಾಡಿ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವಂತೆ ಸರಕಾರ ಸೂಚಿಸಿತ್ತು. ಹೆಚ್ಚು ವೀವರ್ಸ್ ಬರುವ ಮೊದಲ 50 ರೀಲ್ಸ್‌ಗೆ ಬಹುಮಾನವನ್ನೂ ಘೋಷಿಸಿತ್ತು. ಇದಕ್ಕಾಗಿ ಸೆ. 30ರವರೆಗೆ ಕಾಲಾವಕಾಶ ಕೊಡಲಾಗಿತ್ತು. ಹೀಗಾಗಿ ರೀಲ್ಸ್ ಅಪ್‌ಲೋಡ್ ಮಾಡಲು ಇಂದೇ ಕೊನೆಯ ದಿನವಾಗಿರಲಿದೆ.