ವಿಜಯಪುರ : ದಿವಾಳಿಯಾಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳನ್ನು ಜೀವಂತವಾಗಿರಿಸಲು ಇಂಧನದ ಮೇಲೆ ತೆರಿಗೆ ಹೇರಿದ್ದು, ಮದ್ಯದ ದರ ಏರಿಸುತ್ತಿದೆ. ಬಸ್ ದರ ಹೆಚ್ಚಳಕ್ಕೂ ಮುಂದಾಗಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ, ಅಭಿವೃದ್ಧಿ ಕೆಲಸಗಳಿಗೆ ಹಣ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಬೇಡವೆಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಗ್ಯಾರಂಟಿ ಸ್ಥಗಿತಗೊಂಡರೆ ಕಾಂಗ್ರೆಸ್ ಪಕ್ಷದ ಮೇಲೆ ಮತ್ತಷ್ಟು ಗಂಭೀರ ಪರಿಣಾಮ ಬೀರಲಿದೆ ಎಂಬ ಭಯದಿಂದ ಮುಂದುವರೆಸಿದ್ದಾರೆ ಎಂದು ಕುಟುಕಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮದ್ಯದ ಮೇಲಿನ ದರವನ್ನೂ ಹೆಚ್ಚಿಸಲು ಮುಂದಾಗಿದ್ದಾರೆ. ಮದ್ಯದ ದರ ಹೆಚ್ಚಿಸಿದರೆ ಹೆಚ್ಚಿಸಲಿ ಬಿಡಿ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಸರ್ಕಾರದ ಮವೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಕಂದಾಯ ಸಚಿವರ ಕ್ಷೇತ್ರದಲ್ಲೇ ಜಮೀನು ನುಂಗುವ ಕೆಲಸ ನಡೆದಿದೆ. ಬೆಂಗಳೂರಿನ ಪರಿಸರದಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಜಮೀನು ಲೂಟಿ ಮಾಡುವ ಹುನ್ನಾರವೂ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಕಲಿ ದಾಖಲೆ ಸೃಷ್ಟಿಸಿ 20 ಎಕರೆ ಜಮೀನು ಕಬಳಿಸುವ ಅವ್ಯವಹಾರ ನಡೆದಿದೆ. ಶೀಘ್ರವೇ ಸಚಿವರೊಬ್ಬರ ಹಗರಣ ಬಯಲಾಗಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.