Advertisement

Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ

01:07 AM Nov 25, 2024 | Team Udayavani |

ಬೆಂಗಳೂರು: ಉಪಸಮರದಲ್ಲಿ “ಕ್ಲೀನ್‌ ಸ್ವೀಪ್‌ ‘ ಮಾಡಿ ಬೀಗುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಈಗ ಮೇಲ್ಮನೆಯ ನಾಮನಿರ್ದೇಶನಕ್ಕೆ ಸಂಬಂಧಿಸಿದ ಚಟುವಟಿಕೆ ಗರಿಗೆದರಿದ್ದು, ತೆರವಾದ ಮತ್ತು ತೆರವಾಗಲಿರುವ ಸ್ಥಾನಗಳಿಗಾಗಿ ಆಕಾಂಕ್ಷಿಗಳಿಂದ ಲಾಬಿ ಆರಂಭವಾಗಿದೆ.

Advertisement

ವಿಧಾನ ಪರಿಷತ್ತಿನ ಒಟ್ಟು 75 ಸ್ಥಾನಗಳ (ಸಭಾಪತಿ ಸೇರಿ) ಪೈಕಿ ನೂತನ ಶಾಸಕ ಸಿ.ಪಿ. ಯೋಗೇಶ್ವರ್‌ ರಾಜೀನಾಮೆಯಿಂದ ತೆರವಾದ ಸ್ಥಾನ ಸೇರಿ 3 ಸ್ಥಾನಗಳು ಈಗಾಗಲೇ ಖಾಲಿಯಾಗಿದ್ದರೆ, ಮತ್ತೂಂದು ಸ್ಥಾನ ಜನವರಿಯಲ್ಲಿ ತೆರವಾಗಲಿದೆ. ಇವುಗಳಿಗಾಗಿ ಪೈಪೋಟಿ ನಡೆದಿದೆ.

ವೆಂಕಟೇಶ್‌, ರಾಠೊಡ್‌ಗಿಲ್ಲ ಅವಕಾಶ?
ಕಾಂಗ್ರೆಸ್‌ನಿಂದ ನಾಮನಿರ್ದೇಶನಗೊಂಡಿದ್ದ ಬ್ರಾಹ್ಮಣ ಸಮುದಾಯದ ಯು.ಬಿ. ವೆಂಕಟೇಶ್‌ ಮತ್ತು ಲಂಬಾಣಿ ಸಮುದಾಯದ ಪ್ರಕಾಶ ರಾಠೊಡ್‌ ಅವರ ಅವಧಿ ಕಳೆದ ತಿಂಗಳಷ್ಟೇ ಮುಕ್ತಾಯವಾಗಿದೆ. ಈ ಪೈಕಿ ಈಗಾಗಲೇ ಪ್ರಕಾಶ ರಾಠೊಡ್‌ 2 ಬಾರಿ ಮೇಲ್ಮನೆ ಪ್ರವೇಶಿಸಿದ್ದರೆ, ವೆಂಕಟೇಶ ಅವರು ವಿಧಾನಸಭಾ ಚುನಾವಣೆಯ ಟಿಕೆಟ್‌ ಗಿಟ್ಟಿಸಿಕೊಂಡು ಸೋತಿದ್ದರು. ಈ ಎರಡೂ ಕಾರಣಗಳಿಂದ ಇಬ್ಬರಿಗೂ ಮತ್ತೆ ಅವಕಾಶ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಆದರೂ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

ಅಧಿವೇಶನ ವೇಳೆ ಸ್ಪಷ್ಟ ಚಿತ್ರಣ?
ಆಕಾಂಕ್ಷಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹಿತ ಪ್ರಮುಖ ನಾಯಕರ ಮೂಲಕ ಪ್ರಭಾವ ಬೀರುತ್ತಿದ್ದಾರೆ. ಈ ಸಂಬಂಧದ ಆಯ್ಕೆಯಲ್ಲೂ ಬಣಗಳ ನಡುವೆ ಪೈಪೋಟಿ ಉಂಟಾಗುವ ಸಾಧ್ಯತೆ ಇದೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಹೊತ್ತಿಗೆ ಇದಕ್ಕೆ ಸ್ಪಷ್ಟ ಚಿತ್ರಣ ಸಿಗಬಹುದು ಎಂದು ಹೇಳಲಾಗುತ್ತಿದೆ.

ಆಕಾಂಕ್ಷಿಗಳು
ವಿ.ಎಸ್‌. ಉಗ್ರಪ್ಪ, ಸಿ.ಎಸ್‌. ದ್ವಾರಕನಾಥ್‌, ಬಾಲರಾಜ ನಾಯ್ಕ, ಬಿ.ಎಲ್‌. ಶಂಕರ್‌, ವಿನಯ ಕಾರ್ತಿಕ್‌, ನಟರಾಜ ಗೌಡ, ಪ್ರಕಾಶ ರಾಠೊಡ್‌, ಯು.ಬಿ. ವೆಂಕಟೇಶ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next