ದಾವಣಗೆರೆ: ಕಾಂಗ್ರೆಸ್ ಅಧಿಕಾರದಲ್ಲಿ ಲಿಂಗಾಯತ ಸಮಾಜದ ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆಗಳಲ್ಲಿ ಅನ್ಯಾಯ ಆಗುತ್ತಿದೆ ಎಂದು ಹೇಳಿರುವ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ನೋವನ್ನ ಸರ್ಕಾರ ಅರ್ಥ ಮಾಡಿಕೊಂಡು ಸರಿಪಡಿಸುವ ನಿಟ್ಟಿ ನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಿಂಗಾಯತ ಸಮಾಜದ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬುದಾಗಿ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದಾರೆ. ತಮಗೂ ಕೆಲವಾರು ಅಧಿಕಾರಿಗಳು ಅದೇ ರೀತಿ ತಿಳಿಸಿದ್ದಾರೆ ಎಂದರು.
ಯಾವುದೇ ಸರ್ಕಾರವೇ ಅಧಿಕಾರಕ್ಕೆ ಬಂದಾಗ ಒಂದು ಸಮುದಾಯದ ಅಧಿಕಾರಿಗಳಿಗೆ ತಾರತಮ್ಯಮಾಡು ವುದು ಸಹಜ. ಅದರಂತೆ ಕಾಂಗ್ರೆಸ್ ಸರ್ಕಾರದಲ್ಲೂ ಆಗುತ್ತಿದೆ. ಒಂದೊಮ್ಮೆ ಶಾಮನೂರು ಶಿವಶಂಕರಪ್ಪ ಅವರು ಹೇಳಿರುವಂತೆ ಅನ್ಯಾಯ, ತಾರತಮ್ಯ ಆಗಿದ್ದರೆ ಸರ್ಕಾರ ಕೂಡಲೇ ಅದನ್ನು ಸರಿಪಡಿಸಬೇಕು. ಕಾಂಗ್ರೆಸ್ ಸರ್ಕಾರ ಲಿಂಗಾಯತ ಸಮಾಜದ ಋಣಭಾರದಲ್ಲಿದೆ ಎಂಬುದನ್ನೂ ಮರೆಯಬಾರದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಮುಂದಿನ 2024ರ ಲೋಕಸಭಾ ಚುನಾವಣೆಗೆ ಮುನ್ನವೇ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-2 ಎ ಮೀಸಲಾತಿ ನೀಡಬೇಕು. ಎಲ್ಲ ಲಿಂಗಾಯತ ಸಮುದಾಯಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕು ಎಂದು ಹೋರಾಟ ನಡೆಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಮ್ಮ ಬೇಡಿಕೆ ಈಡೇರಿಸಬೇಕು ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಲಾಗಿತ್ತು. ಬಜೆಟ್ ಸಭೆಯ ನಂತರ ಭೇಟಿಯಾಗುವುದಾಗಿ ಹೇಳಿದ್ದರು. ಏತನ್ಮಧ್ಯೆ ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸುವ ಮೂಲಕ ಮತ್ತೆ ನಮ್ಮ ಹೋರಾಟ ಪುನಾರಂಭಿಸಲಾಗಿದೆ. ಅ. 13ರಂದು ಧಾರವಾಡದಲ್ಲಿ ನಡೆಯಲಿದೆ. ಅತಿ ಶೀಘ್ರವೇ ದಾವಣಗೆರೆಯಲ್ಲೂ ನಮ್ಮ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಜಾತಿ ಗಣತಿ ನಡೆಸಲಿ: ಈಗ ದೇಶದೆಲ್ಲೆಡೆ ಜಾತಿಗಣತಿ ನಡೆಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಬ್ರಿಟಿಷ್ ಆಡಳಿತಾವಧಿಯಲ್ಲಿ ಜಾತಿ ಗಣತಿ ನಡೆದ ನಂತರ ಮತ್ತೆ ನಡೆದಿಲ್ಲ. ಕೇಂದ್ರ ಸರ್ಕಾರ ಸಹ ಜಾತಿ ಗಣತಿಗೆ ಮುಂದಾಗಬೇಕು. ಜಾತಿಗಣತಿಯನ್ನು ಯಾವುದೋ ಒಂದು ಸಮುದಾಯದವನ್ನು ಗುರಿಯಾಗಿಟ್ಟು ಕೊಂಡು ಮತ್ತು ದುರುದ್ದೇಶದಿಂದ ನಡೆಸಬಾರದು. ಸಂವಿಧಾನದ ಆಶಯದಂತೆ ವೈಜ್ಞಾನಿಕವಾಗಿ ದೇಶದ ಅಭಿವೃದ್ಧಿಗೆ ಪೂರಕ ಮತ್ತು ಎಲ್ಲ ಸಮುದಾಯಗಳಿಗೆ ಅಗತ್ಯ ಸೌಲಭ್ಯ ದೊರಕಿಸುವಂತೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾತಿ ಗಣತಿ ನಡೆಸಬೇಕು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.