ಯಳಂದೂರು: ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ನಿರೀಕ್ಷೆಯಂತೆ ಅಧ್ಯಕ್ಷೆಯಾಗಿ ಶಾಂತಮ್ಮ ಹಾಗೂ ಉಪಾಧ್ಯಕ್ಷೆಯಾಗಿ ಲಕ್ಷ್ಮೀ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 11ನೇ ವಾರ್ಡ್‌ನಶಾಂತಮ್ಮ ಹಾಗೂ ಬಿಸಿಎ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 10ನೇ ವಾರ್ಡ್‌ನ ಲಕ್ಷ್ಮೀ ಮಾತ್ರ ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು.
ಸಂಭ್ರಮಾಚರಣೆ: ಚುನಾವಣೆ ಬಳಿಕ ಕಾರ್ಯಕರ್ತರು ಸಂಭ್ರಮಾಚರಿಸಿದರು. ಪಟ್ಟಣದ ಪ್ರವಾಸಿ ಮಂದಿರದ ಬಳಿ ಮಾಜಿ ಶಾಸಕರಾದ ಎ.ಆರ್.ಕೃಷ್ಣ ಮೂರ್ತಿ ಹಾಗೂ ಎಸ್. ಬಾಲರಾಜು ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಮತದಾರರು ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಭಂಗ ತರದೆ ಇತರೆ ಸದಸ್ಯರು ಹಾಗೂ ಹಿರಿಯ ಸದಸ್ಯರ ಸಲಹೆ ಪಡೆದು ಅಭಿವೃದ್ಧಿಗೆ ಶ್ರಮಿಸಿ ಎಂದರು.
ಈ ವೇಳೆ ಜಿಪಂ ಸದಸ್ಯ ಜೆ. ಯೋಗೇಶ್, ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಚಂದ್ರು, ವಡಗೆರೆದಾಸ್, ಆರ್. ಮಹಾದೇವ, ನಿಂಗರಾಜು ಇದ್ದರು.
ದಾಖಲೆ ಬರೆದ ಕಾಂಗ್ರೆಸ್ : ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 11 ವಾರ್ಡ್‌ಗಳಲ್ಲಿ ಕಾಂಗ್ರೆಸ್ 10 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿತ್ತು. ಪಕ್ಷದಿಂದ 4ನೇ ವಾರ್ಡ್‌ಹೊರತುಪಡಿಸಿ ಮಹೇಶ್, ವೈ.ಜಿ. ರಂಗನಾಥ, ಮಹಾದೇವನಾಯಕ,ಕೆ.ಮಲ್ಲಯ್ಯ, ಮಂಜು, ಪ್ರಭಾವತಿ,ಬಿ.ರವಿ,ಸುಶೀಲಾ, ಲಕ್ಷ್ಮೀ, ಶಾಂತಮ್ಮ ಆಯ್ಕೆಯಾಗಿದ್ದರು. 4ನೇ ವಾರ್ಡ್ ನಿಂದ ಬಿಜೆಪಿಯ ಸವಿತಾ ಆಯ್ಕೆ ಯಾಗಿದ್ದರು. ಅದಾಗಲೇ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವಾಗಿತ್ತು. ಈ ಹಿಂದಿನ ಅವಧಿಯಲ್ಲೂ ಇದೇ ಪಕ್ಷ ಅಧಿಕಾರಕ್ಕೆ ಬಂದಿತ್ತು. ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಶಾಂತಮ್ಮ ಹಾಗೂ ಲಕ್ಷ್ಮೀ ಆಯ್ಕೆ ಖಚಿತವಾಗಿತ್ತು.