Advertisement

ಇಂಧನ ಬೆಲೆ ಏರಿಕೆಗೆ ಕಾಂಗ್ರೆಸ್‌ ಆಕ್ರೋಶ

11:57 AM May 27, 2018 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ಪಾಲಿಕೆ ಆವರಣದಲ್ಲಿ ಪ್ರತಿಭಟಿಸಿದರು. ಪಾಲಿಕೆ ಆವರಣದ ಗಾಂಧಿ ಪ್ರತಿಮೆ
ಮುಂಭಾಗದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.

Advertisement

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ, ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ. ಹಾಗಾಗಿ ಸಾರ್ವಜನಿಕರಿಗೆ ತೀವ್ರ ಹೊರೆ ಆಗುತ್ತಿದೆ. ಪೆಟ್ರೋಲ್‌ ಬೆಲೆ ಲೀಟರ್‌ಗೆ 80 ರೂ. ಆಸುಪಾಸಿಗೆ ಬಂದಿದೆ. ಚುನಾವಣೆಗೂ ಮುನ್ನ ನರೇಂದ್ರ ಮೋದಿ ಜನರ ಜೀವನ ಸುಧಾರಣೆಗೆ ಭಾರೀ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ಯಾವುದೇ ಅವರ ಭರವಸೆ ಕಾರ್ಯಗತ ಆಗಿಲ್ಲ ಎಂದರು. 

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದಿದ್ದರು. ಆದರೆ, ಇವರೆಗೆ ಅಂತಹ ಒಳ್ಳೆಯ ದಿನಗಳು ಸಾರ್ವಜನಿಕರ ಪಾಲಿಗೆ ಬರಲೇ ಅಲ್ಲ. ದೊಡ್ಡ ದೊಡ್ಡ ಕಂಪನಿಗಳ ಪಾಲಿಗೆ ಒಳ್ಳೆಯ ದಿನಗಳು ಬಂದಿವೆ. ದೊಡ್ಡ ದೊಡ್ಡ ವಂಚನೆಕೋರರು ದೇಶದ ಅಮಾಯಕ ಜನರ
ಹಣ ಕೊಳ್ಳೆ ಹೊಡೆದು ಓಡಿ ಹೋದರು. ಅವರ ಪಾಲಿಗೆ ಒಳ್ಳೆಯ ದಿನಗಳು ಬಂದಿವೆ. ಆದರೆ, ದೇಶದ ಸಾಮಾನ್ಯ ಜನರ ಪಾಲಿಗೆ ದಿನಂಪ್ರತಿ ಕಷ್ಟದ ದಿನಗಳೇ ಎದುರಾಗುತ್ತಿವೆ ಎಂದು ಅವರು ಆರೋಪಿಸಿದರು.

ನೋಟು ಅಮಾನ್ಯಕರಣದಿಂದ ಯಾರಿಗೂ ಲಾಭ ಆಗಲಿಲ್ಲ. ಭಯೋತ್ಪದನಾ ಚಟುವಟಿಕೆ ನಿಲ್ಲಲಿಲ್ಲ. ಇದರ ಜೊತೆಗೆ ಜಿಎಸ್‌ಟಿ ಜಾರಿಯಾಗಿ ಜನರು ದುಡ್ಡು ಖರ್ಚು ಮಾಡಲು ಹಿಂದೆ ಮುಂದೆ ಯೋಚಿಸುವಂತಹ ಸ್ಥಿತಿ ಬಂತು. ಇದರಿಂದಾಗಿ ಹಲವರಿಗೆ ಕೆಲಸ ಇಲ್ಲದಂತಾಗಿ ಹೋಯಿತು. ಇಂದು ಬಡ ಜನರು, ಶ್ರಮಿಕ ವರ್ಗ ಸಾಕಷ್ಟು ಸಮಸ್ಯೆಯಿಂದ ಜೀವನ ಮಾಡುವಂತೆ ಆಯಿತು ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಯುಪಿಎ ಸರ್ಕಾರ ಮಾಡಿದಂತೆ ತೆರಿಗೆ ಪ್ರಮಾಣ ಕಡಮೆ ಮಾಡಿ, ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಚಮನ್‌ ಸಾಬ್‌, ಜಿಪಂ ಸದಸ್ಯ ಕೆ.ಎಚ್‌. ಓಬಳೇಶಪ್ಪ, ಮುಖಂಡರಾದ ಆಯೂಬ್‌ ಪೈಲ್ವಾನ್‌. ಪಿ. ರಾಜಕುಮಾರ, ಎ. ನಾಗರಾಜ, ಕೆ.ಜಿ. ಶಿವಕುಮಾರ, ಮುಜಾಹಿದ್‌ ಪಾಷ ಹೋರಾಟದ ನೇತೃತ್ವ ವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next