ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ದಿಲ್ಲಿಯಲ್ಲಿ ಹಿಂಸಾಚಾರಕ್ಕೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಕುಮ್ಮಕ್ಕು ನೀಡಿರುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಬುಧವಾರ ವಾಗ್ದಾಳಿ ನಡೆಸಿದ್ದು, ದಿಲ್ಲಿಯ ಜಾಮೀಯಾ ನಗರ್, ಸೀಲಂಪುರ್ ಮತ್ತು ಜಾಮ ಮಸೀದಿ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಜಾಮೀಯಾ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಅಸಿಬ್ ಖಾನ್ ಮತ್ತು ಆಮ್ ಆದ್ಮಿ ಪಕ್ಷದ ಅಮಾನತುಲ್ಲಾ ಖಾನ್ ಆರಂಭಿಕ ಭಾಷಣ ಮಾಡಿದ್ದರು. ನಂತರ ಈ ತಪ್ಪು ಮಾಹಿತಿ ಎಲ್ಲೆಡೆ ಹರಡಿತ್ತು. ಕಾನೂನು ಜನರಿಗೆ ಪೌರತ್ವವನ್ನು ನೀಡಿದೆ ಹೊರತು ಪೌರತ್ವವನ್ನು ಕಿತ್ತುಕೊಳ್ಳಲು ಅಲ್ಲ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ದೇಶದ ಜನರಿಗೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಯ ಉದ್ದೇಶ ಏನು ಎಂಬುದು ತಿಳಿದಿದೆ. ಎರಡೂ ಪಕ್ಷಗಳೂ ಕ್ಷಮೆಯಾಚಿಸಬೇಕೆಂದು ಜಾವ್ಡೇಕರ್ ಒತ್ತಾಯಿಸಿದ್ದಾರೆ.
ನಾವು ಸತ್ಯವನ್ನು ಬಯಲಿಗೆಳೆಯುತ್ತೇವೆ. ಇದು ಅರಾಜಕತೆ ಮತ್ತು ಯಾರು ಸಿಎಎಯನ್ನು ವಿರೋಧಿಸುತ್ತಿದ್ದಾರೋ ಅವರ ನಡುವಿನ ಹೋರಾಟವಾಗಿದೆ. ನಮ್ಮ ಉದ್ದೇಶ ಇರುವುದು ದೆಹಲಿಯ ಅಭಿವೃದ್ಧಿ ಬಗ್ಗೆ. ಮಹಾನಗರ ಪಾಲಿಕೆಯ ಅಭಿವೃದ್ಧಿಯನ್ನು ಆಪ್ ಸರ್ಕಾರ ತಡೆದಿದೆ. ಕೇಂದ್ರ ನೀಡಿರುವ 900 ಕೋಟಿ ರೂಪಾಯಿ ಹಣವನ್ನು ಕೊಟ್ಟಿಲ್ಲ. 4.5 ವರ್ಷಗಳ ಕಾಲ ಆಪ್ ಅಭಿವೃದ್ಧಿಯನ್ನು ಮರೆತು, ಇದೀಗ ಉಳಿದಿರುವ ಆರು ತಿಂಗಳಲ್ಲಿ ಆಪ್ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು.
ಕೆಲಸ ಮಾಡುವುದು ಬೇರೆಯವರು, ಆದರೆ ಅದರ ಲಾಭವನ್ನು ಮತ್ತೊಬ್ಬರು ಪಡೆಯುತ್ತಿದ್ದಾರೆ ಎಂದು ಜಾವ್ಡೇಕರ್ ಅವರು ಬಿಜೆಪಿ ಆಡಳಿತದ ಮಹಾನಗರ ಪಾಲಿಕೆ ಮಾಡಿದ ಅಭಿವೃದ್ಧಿಯ ಕ್ರೆಡಿಟ್ ಅನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಪಡೆಯುತ್ತಿರುವುದಾಗಿ ಪರೋಕ್ಷವಾಗಿ ತಿರುಗೇಟು ನೀಡಿದರು.