Advertisement
ತಮ್ಮನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಹಾಗೂ ನಗರ ಸಾರಿಗೆ ಸಂಸ್ಥೆಗಳ ನೌಕರರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನ ಬನಶಂಕರಿ ಬಸ್ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಭೇಟಿ ಮಾಡಿ ಅವರ ಅಹವಾಲು ಆಲಿಸಿದರು.
Related Articles
Advertisement
ಸರ್ಕಾರದ ಎಲ್ಲ ಶಾಸಕರುಗಳಿಗೆ, ಮಂತ್ರಿಗಳಿಗೆ ನಿಮ್ಮ ಪರವಾಗಿ ಮನವಿ ಮಾಡುತ್ತೇನೆ. 1.25 ಲಕ್ಷ ಸಾರಿಗೆ ನೌಕರರು ಇದ್ದಾರೆ. 40 ಕೋಟಿ ಜನರಿಗೆ ಸೇವೆ ನೀಡುತ್ತಿದ್ದಾರೆ. ಅವರಿಗೆ ನೀವು ರಕ್ಷಣೆ ನೀಡಬೇಕು. ನಿಮ್ಮ ಹೋರಾಟ, ನಿಮ್ಮ ನೋವಿನಲ್ಲಿ ಕಾಂಗ್ರೆಸ್ ಜತೆಗಿದೆ ಎಂದು ಹೇಳುತ್ತೇನೆ. ನಿಮ್ಮ ಪ್ರತಿನಿಧಿಗಳು ನಮ್ಮ ಕಚೇರಿಗೆ ಬರಲಿ. ನಿಮ್ಮ ಹೋರಾಟಕ್ಕೆ ಹೇಗೆ ಕೈಜೋಡಿಸಬೇಕು ಎಂಬುದನ್ನು ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಸಾರಿಗೆ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ನಿಮ್ಮ ಪ್ರತಿನಿಧಿಗಳಾಗಿ ಇಬ್ಬರನ್ನು ನೇಮಕ ಮಾಡುತ್ತೇವೆ. ನಿಮ್ಮ ಧ್ವನಿಯಾಗಿ ಆಡಳಿತ ಮಂಡಳಿಯಲ್ಲಿ ಯಾರಾದರೂ ಇರಬೇಕು. ನಿಮ್ಮ ನೋವು ಏನು ಎಂಬುದು ಅವರಿಗೂ ಅರಿವಾಗಬೇಕು. ಇದಕ್ಕೆ ಪರಿಹಾರ ಕಂಡು ಹಿಡಿಯಬೇಕು. ಸಾರಿಗೆ ಮಂತ್ರಿಗಳು ಎಲ್ಲಿದ್ದಾರೆಂದು ತಿಳಿಯುತ್ತಿಲ್ಲ ಎಂದು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಬೇರೆ ಮಂತ್ರಿಗಳು ಕೂಡ ನಿಮ್ಮ ಮನವಿ ಆಲಿಸಲು ಬರಬಹುದಿತ್ತು. ಆದರೆ ಅವರೂ ಬಂದಿಲ್ಲ. ಹಾಗಾಗಿ ಕೂಡಲೇ ಈ ಇಲಾಖೆಗೆ ಸಂಬಂಧಿಸಿದ ಈ ಪ್ರತಿಭಟನಾನಿರತ ನೌಕರರ ಒಕ್ಕೂಟದ ಪ್ರತಿನಿಧಿಗಳ ಜತೆ ಮಾತನಾಡಿ ಈ ಸಮಸ್ಯೆ ಬಗೆಹರಿಸಿ, ನ್ಯಾಯ ಕೊಡಿ ಎಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು.
ನೌಕರರ ಜತೆ ಸರ್ಕಾರ ಕೂತು ಚರ್ಚಿಸಬೇಕು:
ಸರ್ಕಾರ, ಮೊದಲು ನೌಕರರ ಅಳಲು ಏನೆಂದು ಕರೆದು ಚರ್ಚಿಸಬೇಕಿತ್ತು. ಯಾರು ಕೂಡ ಸುಮ್ಮನೆ ಬೇಡಿಕೆ ಇಡುವುದಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಪ್ರತಿಭಟನಾನಿರತ ನೌಕರರ ಜತೆ ಚರ್ಚೆ ನಡೆಸಬೇಕು. ಆಡಳಿತ ನಿಮ್ಮ ಕೈಯಲ್ಲಿದೆ. ನೀವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು.
ಈ ಹಿಂದೆ ಪ್ರತಿಭಟನೆಗಳು ನಡೆಯುತ್ತಿದ್ದಾಗ ನೀವೇನು ಮಾಡುತ್ತಿದ್ದಿರಿ? ಸಂಸ್ಥೆಯ ವಿವಿಧ ವಲಯವಾರು ಮಂಡಳಿಗಳಲ್ಲಿ ಕಡ್ಡಾಯವಾಗಿ ಸಾರಿಗೆ ನೌಕರರ ಪ್ರತಿನಿಧಿಗಳನ್ನು ನೇಮಕ ಮಾಡಬೇಕು. ಆಗ ಅವರ ಸಮಸ್ಯೆ ಏನು? ಇವರ ಸಮಸ್ಯೆ ಏನು? ಎಂಬುದು ಅರಿವಾಗುತ್ತದೆ. ಕೋವಿಡ್ ಸಮಯದಲ್ಲಿ ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಅದೇ ರೀತಿ ಚಾಲಕರು, ವೃತ್ತಿಆಧಾರಿತ ವರ್ಗದವರಿಗೂ ಸರ್ಕಾರ ನೀಡಬೇಕಾದ ಪರಿಹಾರ ಬಾಕಿ ಇದೆ. ಅದನ್ನು ಆದಷ್ಟು ಬೇಗ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಸೌಮ್ಯರೆಡ್ಡಿ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ಪುಟ್ಟಸ್ವಾಮಿ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್, ದೊಡ್ಡ ಆಲಹಳ್ಳಿ ಕಾಂಗ್ರೆಸ್ ಮುಖಂಡ ಬಾಬು ಮತ್ತಿತರಿದ್ದರು.