Advertisement

ಕಾಂಗ್ರೆಸ್‌ ಸಾಮಾಜಿಕ ನ್ಯಾಯದ ಪರ: ಸುಧಾಕರ್‌

09:23 AM Apr 09, 2019 | Team Udayavani |

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಪಕ್ಷ ಸರ್ವರಿಗೂ ಸೇರಿದ್ದು, ಸಾಮಾಜಿಕ ನ್ಯಾಯದ ಪರವಾಗಿದೆ. ಎಲ್ಲಾ ಸಮುದಾಯಗಳಿಗೆ ರಾಜಕೀಯ ಕ್ಷೇತ್ರದಲ್ಲಿ ಆದ್ಯತೆ ನೀಡಿರುವ ಪಕ್ಷ ಕಾಂಗ್ರೆಸ್‌. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಬಹುಮತ ತಂದು ಕೊಡಬೇಕೆಂದು ಶಾಸಕ ಡಾ.ಕೆ.ಸುಧಾಕರ್‌, ಕಾಂಗ್ರೆಸ್‌ ಕಾರ್ಯಕರ್ತರಿಗೆ ಹೇಳಿದರು.

Advertisement

ನಗರದ ಮರಳು ಸಿದ್ದೇಶ್ವರ ಸಮುದಾಯ ಭವನದಲ್ಲಿ ಸೋಮವಾರ ನಗರ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಅಭಿವೃದ್ಧಿಗೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಕಾರಣ ಎಂದರು.

ಸಾಮಾಜಿಕ ಪರಿಕಲ್ಪನೆ ಮರೆತಿಲ್ಲ: ಕಾಂಗ್ರೆಸ್‌ ಪಕ್ಷ ಸಮಾಜದಲ್ಲಿನ ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದೆ. ಆದರೆ ಬೇರೆ ಪಕ್ಷಗಳು ಕೆಲವೇ ವರ್ಗಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ ಕಾಂಗ್ರೆಸ್‌ ಎಂದೂ ಕೂಡ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಬಿಟ್ಟಿಲ್ಲ.

ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಕಾಂಗ್ರೆಸ್‌ ಪಕ್ಷದ ಪ್ರಮುಖ ಧ್ಯೇಯವಾಗಿದೆ. ಕಳೆದ ಬಾರಿ ನನಗೆ 80 ಸಾವಿರ ಮತಗಳನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಂದುಕೊಟ್ಟಿದ್ದೀರಿ. ಜೆಡಿಎಸ್‌ಗೆ 50 ಸಾವಿರ ಮತಗಳು ಬಂದಿವೆ. ಪ್ರಸಕ್ತ ಚುನಾವಣೆಯಲ್ಲಿ ಮೈತ್ರಿ ಆಗಿರುವುದರಿಂದ ಕಾಂಗ್ರೆಸ್‌ಗೆ ಕನಿಷ್ಠ 1.30 ಲಕ್ಷ ಮತಗಳು ಈ ಬಾರಿ ಬರಬೇಕು ಎಂದರು.

50 ಸಾವಿರ ಲೀಡ್‌ ಬೇಕು: ರಾಜಕೀಯ ಗಣಿತವಲ್ಲ ಎಂದು ನಾನು ಮೊದಲೇ ಹೇಳಿದ್ದೇನೆ. ಸ್ವಲ್ಪ ವ್ಯತ್ಯಾಸ ಆಗಬಹುದು. ಆದರೆ ಕ್ಷೇತ್ರದಲ್ಲಿ ಬಿಜೆಪಿಗಿಂತ ಕನಿಷ್ಠ 50 ಸಾವಿರ ಮತಗಳು ಕಾಂಗ್ರೆಸ್‌ಗೆ ಹೆಚ್ಚಿಗೆ ಬರಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಏನೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ಸಂಸದರಾದ ಎಂ.ವೀರಪ್ಪ ಮೊಯ್ಲಿ ಗೆಲುವುಗೆ ಶ್ರಮಿಸಬೇಕು. ಚಿಕ್ಕಬಳ್ಳಾಪುರ ನಗರದಲ್ಲಿ ಕಾಂಗ್ರೆಸ್‌ ಪಕ್ಷದ ಅಸ್ತಿತ್ವಕ್ಕಾಗಿ ಪ್ರತಿಯೊಬ್ಬರು ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಬೇಕೆಂದರು.

Advertisement

ಜಿಪಂ ಮಾಜಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಅನಸೂಯಮ್ಮ, ಕೋಚಿಮುಲ್‌ ನಿರ್ದೇಶಕ ಕೆ.ವಿ.ನಾಗರಾಜ, ಕೆಪಿಸಿಸಿ ಕಾರ್ಯದರ್ಶಿ ಮರಳಕುಂಟೆ ಕೃಷ್ಣಮೂರ್ತಿ, ಬೆಂಗಳೂರು ವಿಭಾಗದ ಉದಯಶಂಕರ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ, ಕೋಚಿಮುಲ್‌ ನಾಮ ನಿರ್ದೇಶಕ ಸುಬ್ಟಾರೆಡ್ಡಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಆವುಲರೆಡ್ಡಿ, ಮುಖಂಡರಾದ ರಫೀಕ್‌, ಅಪ್ಪಾಲು ಮಂಜು, ರಾಮ್‌ ಕುಮಾರ್‌, ಮಮತಾಮೂರ್ತಿ ಭಾಗವಹಿಸಿದ್ದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಎಂ.ವೀರಪ್ಪ ಮೊಯ್ಲಿ ಪರ ಮಂಗಳವಾರ ಜಿಲ್ಲಾ ಕೇಂದ್ರದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿ ಚುನಾವಣಾ ಪ್ರಚಾರ ಸಭೆಯನ್ನು ಹಮ್ಮಿಕೊಂಡಿದ್ದು, ಕಾಂಗ್ರೆಸ್‌ ಪಕ್ಷದ ಮುಖಂಡರು, ನಾಯಕರು ಸಮಾವೇಶಕ್ಕೆ ಹೆಚ್ಚಿನ ಕಾರ್ಯಕರ್ತರನ್ನು ಕರೆ ತರಬೇಕು.
-ಡಾ.ಕೆ.ಸುಧಾಕರ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next