Advertisement

D. K. Shivakuma ಜೂ.1ರಿಂದ ಕಾಂಗ್ರೆಸ್‌ ಕುಟುಂಬ ಸದಸ್ಯತ್ವ ಅಭಿಯಾನ

09:12 PM May 27, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮುಂದಿನ ಚುನಾವಣೆಗಳಿಗಾಗಿ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್‌, “ಕಾಂಗ್ರೆಸ್‌ ಕುಟುಂಬ’ ಎಂಬ ವಿಶೇಷ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಿದೆ.

Advertisement

ಜೂ.1ರಂದು ಪಕ್ಷದ ಪದಾಧಿಕಾರಿಗಳ ಸಭೆ ಕರೆಯಲಾಗಿದ್ದು, ಅಲ್ಲಿ “ಕಾಂಗ್ರೆಸ್‌ ಕುಟುಂಬ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಸೋಮವಾರ ಪಕ್ಷದ ಕಚೇರಿಯಲ್ಲಿ ಜರಗಿದ ನೆಹರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಬೂತ್‌ನಲ್ಲಿ 50 ಸದಸ್ಯರನ್ನು ಸೇರಿಸಬೇಕು. ಆ ಬೂತ್‌ ಹಾಗೂ ಹಳ್ಳಿಗಳಲ್ಲಿ ಏನೇ ಕಾರ್ಯಕ್ರಮ ಮಾಡಿದರೂ ಆ 50 ಮಂದಿಯನ್ನು ಸೇರಿಸಿ ತೀರ್ಮಾನ ಮಾಡಬೇಕು. ಆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಕಾರ್ಯಕರ್ತರ ಪಕ್ಷವಾಗಿ ಮಾಡಬೇಕು. ಯಾರು ಎಷ್ಟೇ ದೊಡ್ಡ ನಾಯಕರಾಗಿದ್ದರೂ ಅವರು ಈ ಜವಾಬ್ದಾರಿ ತೆಗೆದುಕೊಂಡು ಕಾಂಗ್ರೆಸ್‌ ಕುಟುಂಬವನ್ನು ಬೆಳೆಸಲೇಬೇಕು. ಇದಕ್ಕೆ ನೀವು ಸಜ್ಜಾಗಬೇಕು ಎಂದು ಹೇಳಿದರು.

ಹೊಸಬರಿಗೆ ಅಧಿಕಾರ ಬಿಟ್ಟುಕೊಡಿ
ನೆಹರು ಅವರು ಪಕ್ಷದ ಕಾರ್ಯಕರ್ತನಾಗಿ ದುಡಿದಿದ್ದರು. ಜಿಲ್ಲಾ ಹಾಗೂ ಬ್ಲಾಕ್‌ ಕಾಂಗ್ರೆಸ್‌ನಲ್ಲಿ ಯಾರೆಲ್ಲ 2 ಅವಧಿ ಹಾಗೂ 10 ವರ್ಷಗಳ ಕಾಲ ಅಧಿಕಾರ ಮಾಡಿದ್ದಾರೋ ಅವರು ಅಧಿಕಾರ ಬಿಟ್ಟುಕೊಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಸಂಸತ್‌ ಚುನಾವಣೆ ವೇಳೆ ಯುವಕರಿಗೆ ಹೆಚ್ಚು ಟಿಕೆಟ್‌ ನೀಡಿದ್ದೇವೆ. ಬಿಜೆಪಿಯವರು 15 ಹಾಲಿ ಸಂಸದರಿಗೆ ಟಿಕೆಟ್‌ ನೀಡಿಲ್ಲ. ಅವರಲ್ಲಿ ಆದ ಅಸಮಾಧಾನ, ಗೊಂದಲ ನಮ್ಮಲ್ಲಿ ಆಗಿಲ್ಲ. ಈ ಯುವಕರು ಹತ್ತಾರು ವರ್ಷ ರಾಜಕಾರಣ ಮಾಡಲು ಶಕ್ತರಾಗಿದ್ದಾರೆ ಎಂದರು.

ಡಿಕೆಶಿ ಹೇಳಿದ್ದೇನು?
– “ಕಾಂಗ್ರೆಸ್‌ ಕುಟುಂಬ’ ಅಭಿಯಾನದಡಿ ಪ್ರತಿ ಬೂತ್‌ನಲ್ಲಿ 50 ಸದಸ್ಯರ ಸೇರ್ಪಡೆ ಮಾಡಿ
– ಹಳ್ಳಿಯಲ್ಲಿ ಏನೇ ಕಾರ್ಯಕ್ರಮ ಮಾಡಿದರೂ ಈ 50 ಮಂದಿಯ ಸೇರಿಸಿ ತೀರ್ಮಾನ ಕೈಗೊಳ್ಳಿ
– ಎಷ್ಟೇ ದೊಡ್ಡ ನಾಯಕರಾಗಿದ್ದರೂ ಅವರು ಈ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು
– ಕಾಂಗ್ರೆಸ್‌ ಅನ್ನು ಕಾರ್ಯಕರ್ತರ ಪಕ್ಷವಾಗಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು
– ಜಿಲ್ಲಾ, ಬ್ಲಾಕ್‌ ಕಾಂಗ್ರೆಸ್‌ನಲ್ಲಿ 10 ವರ್ಷ ಅಧಿಕಾರ ಮಾಡಿದವರು ಈಗ ಅಧಿಕಾರ ಬಿಟ್ಟುಕೊಡಬೇಕು
– ಹೊಸಬರಿಗೆ ಅವಕಾಶ ಮಾಡಿಕೊಡಲು ಎಲ್ಲರೂ ಸಜ್ಜಾಗಬೇಕು

Advertisement
Advertisement

Udayavani is now on Telegram. Click here to join our channel and stay updated with the latest news.

Next