Advertisement

ಜ.15ರೊಳಗೆ ಕಾಂಗ್ರೆಸ್‌ ಕರಡು ಚು. ಪ್ರಣಾಳಿಕೆ ಸಿದ್ಧ: ವೀರಪ್ಪ  ಮೊಲಿ

12:07 PM Dec 04, 2017 | |

ಮಂಗಳೂರು: 2018ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಕರಡು ಪ್ರಣಾಳಿಕೆ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಜ.15ರೊಳಗೆ ಕರಡು ಪ್ರತಿಯನ್ನು  ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಲಾಗುವುದು ಎಂದು ಕರಡು ಪ್ರಣಾಳಿಕೆ ಸಮಿತಿ ಅಧ್ಯಕ್ಷ, ಸಂಸದ ಡಾ| ಎಂ. ವೀರಪ್ಪ ಮೊಲಿ ಹೇಳಿದ್ದಾರೆ.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರಡು ಪ್ರಣಾಳಿಕೆ  ಕುರಿತಂತೆ 15 ಉಪ ಸಮಿತಿ ರಚಿಸಲಾಗಿದ್ದು  ಪ್ರಣಾಳಿಕೆಗೆ ತಮ್ಮ ಭಾಗದಲ್ಲಿ ಏನೇನು ಸೇರ್ಪಡೆಯಾಗಬೇಕು ಎಂಬುದನ್ನು ನಿರ್ಧರಿಸಿ ಸಮಿತಿಗೆ ವರದಿ ನೀಡಬೇಕು. ಈಗಾಗಲೇ ಕೆಲವು ಸಮಿತಿಗಳು ವರದಿ ನೀಡಿವೆ.

ಪ್ರಣಾಳಿಕೆ ಸಿದ್ಧಪಡಿಸುವ ನಿಟ್ಟಿನಲ್ಲಿ  ರಾಜ್ಯವನ್ನು ಆರು ವಲಯಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಲಯಕ್ಕೆ  ಕರಡು ಸಮಿತಿ ಭೇಟಿ ನೀಡಿ ಸಮಾಲೋಚನೆ ನಡೆಸುತ್ತಿದೆ. ಮಂಗಳೂರಿನಲ್ಲಿ  ನಡೆದ ಸಭೆಯಲ್ಲಿ ದ.ಕ., ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಶಾಸಕರು, ವಿವಿಧ ಘಟಕಗಳ ಪ್ರಮುಖರು ಸಭೆ ಸೇರಿ ಕರಡು ಪ್ರಣಾಳಿಕೆಗೆ ಅಭಿಪ್ರಾಯಗಳನ್ನು ನೀಡಿದ್ದಾರೆ. 

ಸಮಿತಿ ಸಭೆ:  ಹುಬ್ಬಳ್ಳಿಯಲ್ಲಿ  ಡಿ.7ರಂದು  ಹುಬ್ಬಳ್ಳಿ, ಧಾರವಾಡ, ಗದಗ, ಬಿಜಾಪುರ, ಬೆಳಗಾವಿ, ಹಾವೇರಿ, ವಿಜಯಪುರ, ಬಾಗಲಕೋಟೆ, ಡಿ.11ರಂದು ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ, ಗುಲ್ಬರ್ಗದಲ್ಲಿ   ಡಿ.16ರಂದು ರಾಯಚೂರು, ಬೀದರ್‌, ಬಳ್ಳಾರಿ, ಕೊಪ್ಪಳ, ಮೈಸೂರುನಲ್ಲಿ   ಡಿ.23ರಂದು ಚಾಮರಾಜ ನಗರ, ಕೊಡಗು ಹಾಗೂ ಮಂಡ್ಯ, ದಾವಣಗೆರೆಯಲ್ಲಿ  ಡಿ.30ರಂದು ಚಿತ್ರದುರ್ಗ, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಸಭೆ ನಡೆಯಲಿದೆ ಎಂದರು.

ರಾಜ್ಯ ಸರಕಾರದಿಂದ  ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ “ನವಕರ್ನಾಟಕ-2025′ ವಿಷನ್‌ ಡಾಕ್ಯುಮೆಂಟ್‌ನ್ನು ತಯಾರಿಸಲಾಗುತ್ತಿದೆ. ಇದರ ಸಮಗ್ರ ಮಾಹಿತಿಯನ್ನು ವೆಬ್‌ಸೈಟ್‌ನ‌ಲ್ಲಿ ಹಾಕಲಾಗುತ್ತಿದೆ ಎಂದವರು ಹೇಳಿದರು.

Advertisement

ಫ‌ಲಾನುಭವಿಗಳ ಪಟ್ಟಿ 
2013ರಲ್ಲಿ  ಕಾಂಗ್ರೆಸ್‌ ಪಕ್ಷ  ರಾಜ್ಯದಲ್ಲಿ  ಅಧಿಕಾರಕ್ಕೆ ಬಂದ ಬಳಿಕ ಸರಕಾರದಿಂದ ಯೋಜನೆಗಳ ಫ‌ಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ರಾಜ್ಯದಲ್ಲಿ 6.54 ಕೋಟಿ ಜನರಲ್ಲಿ  ಕಳೆದ 4 ವರ್ಷಗಳಲ್ಲಿ  5 ಕೋಟಿಯಷ್ಟು ಮಂದಿ ಯೋಜನೆಗಳ ಪ್ರಯೋಜನ ಪಡೆದುಕೊಂಡಿದ್ದಾರೆ  ಅವರ ಪಟ್ಟಿ ವೆಬ್‌ನಲ್ಲಿ ಪ್ರಕಟಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ವಿಧಾನಪರಿಷತ್‌ ಮುಖ್ಯ ಸಚೇತಕ ಐವನ್‌ ಡಿಸೋಜ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಹರೀಶ್‌ ಕುಮಾರ್‌, ಕರಡು ಪ್ರಣಾಳಿಕೆ ಸಮಿತಿಯ ಸದಸ್ಯರಾದ ಸುದರ್ಶನ್‌ ಕೆ.ಸಿ. ಕೊಂಡಯ್ಯ, ಪುಷ್ಪಾ ಅಮರನಾಥ್‌, ಕೆಪಿಸಿಸಿ ಕಾರ್ಯದರ್ಶಿ ಶಾರದಾ ಗೌಡ, ಮನಪಾ ಸಚೇತಕ ಶಶಿಧರ ಹೆಗ್ಡೆ, ಸದಸ್ಯ ನವೀನ್‌ ಡಿಸೋಜಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next