ಗದಗ: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಸಿಎಂ ಹುದ್ದೆಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು, ಅವರು ಮುಖ್ಯಮಂತ್ರಿಯಾಗುವುದು ಹಗಲುಗನಸಾಗಿಯೇ ಉಳಿಯಲಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಎಲ್ಲೆಡೆ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಕರ್ನಾಟಕದಲ್ಲೂ ತನ್ನ ಅಸ್ತಿತ್ವಕ್ಕಾಗಿ ಹುಡುಕಾಡುತ್ತಿದೆ. ಕಾಂಗ್ರೆಸ್ ಪಕ್ಷ ಪಾರ್ಟ್ ಟೈಂ ಪಾರ್ಟಿ, ರಾಹುಲ್‌ಗಾಂಧಿ ಪಾರ್ಟ್ ಟೈಂ ಲೀಡರ್ ಆಗಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಅಜೆಂಡಾ ಇಲ್ಲ. ಕಾಂಗ್ರೆಸ್ ನಡೆಸುವ ಎಲ್ಲ ಹೋರಾಟಗಳು ನಾಟಕೀಯವಾಗಿವೆ. ಮಾಜಿ ಸಿಎಂ ಸಿದ್ಧರಾಮಯ್ಯ ಸ್ವಕ್ಷೇತ್ರ ಬಾದಾಮಿಯಲ್ಲಿ ಕಾಂಗ್ರೆಸ್ ಸದಸ್ಯತ್ವಕ್ಕೆ ಗಿಫ್ಟ್ ನೀಡುವ ಹೊಸ ಸಂಪ್ರದಾಯ ಹುಟ್ಟುಹಾಕಿದ್ದಾರೆ. ಅತೀ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಿದವರಿಗೆ ಟಂಟಂ ಆಟೋ, ಬೈಕ್, ಟಿವಿ ಉಡುಗೊರೆ ನೀಡುವಂತಹ ದಯನೀಯ ಸ್ಥಿತಿಗೆ ತಲುಪಿದೆ. ಹೀಗಾಗಿ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏನೇ ತಿಪ್ಪರಲಾಗ ಹಾಕಿದರೂ, ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ:ಸೋಲಿನ ನಂತರ ಕಾಂಗ್ರೆಸ್ ಮಹತ್ವದ ಸಭೆ: ಸರ್ಕಾರವನ್ನು ಎದುರಿಸಲು ಹೊಸ ತಂತ್ರ
ಪ್ರಧಾನಿ ಮೋದಿ, ಅಮಿತ್ ಷಾ ಹಾಗೂ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ದೇಶದಾದ್ಯಂತ ಬಿಜೆಪಿ ವಿಜಯ ಪತಾಕೆ ಹಾರಿಸುತ್ತಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಸ್ಪಷ್ಟ ಜನಾಶೀರ್ವಾದ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾರಿಗೆ ನಿಲ್ದಾಣಗಳ ಅಡಮಾನ ವಿಚಾರವನ್ನು ಸಮರ್ಥಿಸಿಕೊಂಡ ಸಚಿವರು, ಸಾರಿಗೆ ಸಿಬ್ಬಂದಿ ಸಂಬಳಕ್ಕಾಗಿ ಕಾಯಬಾರದು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಒಂದು ವಾರದಲ್ಲಿ ಒಂದೂವರೆ ತಿಂಗಳ ಬಾಕಿ ವೇತನ ಪಾವತಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಸಿದರು.